farmers protest today : ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ನೇತೃತ್ವದಲ್ಲಿ ನೀರಾವರಿ ನಿಗಮ ಕಚೇರಿಗೆ ಮುತ್ತಿಗೆ ಯತ್ನ
farmers protest today : ಶಿವಮೊಗ್ಗ: ಭದ್ರಾ ಜಲಾಶಯದ ಬಲದಂಡೆ ನಾಲೆಯನ್ನು ಒಡೆದು ಕುಡಿಯುವ ನೀರು ಪೂರೈಸುವ ‘ಜಲ ಜೀವನ್ ಮಿಷನ್’ ಯೋಜನೆಯನ್ನು ವಿರೋಧಿಸಿ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರ ನೇತೃತ್ವದಲ್ಲಿ ದಾವಣಗೆರೆ ಭಾಗದ ನೂರಾರು ರೈತರು ಇಂದು ಶಿವಮೊಗ್ಗದಲ್ಲಿರುವ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಕುಡಿಯುವ ನೀರು ಪೂರೈಕೆಗಾಗಿ ಭದ್ರಾ ಜಲಾಶಯದ ಬಲದಂಡೆ ಕಾಲುವೆಯನ್ನು ಜಲಾಶಯದ ಪಕ್ಕದಲ್ಲಿಯೇ ಸೀಳಿ, ನೀರನ್ನು ಲಿಫ್ಟ್ ಮಾಡುವ ಯೋಜನೆಗೆ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಲುವೆ ಒಡೆಯುವ ಬದಲು ಜಾಕ್‌ವೆಲ್ ಮೂಲಕ ನೀರು ಪೂರೈಸುವಂತೆ ರೈತರು ಆಗ್ರಹಿಸಿದ್ದಾರೆ. ಪ್ರಸ್ತುತ, ಅಚ್ಚುಕಟ್ಟು ಪ್ರದೇಶದ ಕೊನೆಯ ಹಂತದ ರೈತರಿಗೆ ಸರಿಯಾಗಿ ನೀರು ತಲುಪುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಾಲುವೆಯನ್ನು ಒಡೆಯುವ ಬದಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂಬುದು ರೈತರ ಮುಖ್ಯ ಬೇಡಿಕೆಯಾಗಿದೆ.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಮಾಜಿ ಸಚಿವ ರೇಣುಕಾಚಾರ್ಯ, “ತಾಯಿಯ ಎದೆಯನ್ನೇ ಸೀಳಿ ಜಲಾಶಯದಿಂದ ಕುಡಿಯುವ ನೀರು ಒದಗಿಸಲಾಗುತ್ತಿದೆ. ಇದರ ಬಗ್ಗೆ ನಮ್ಮ ವಿರೋಧವಿದೆ. ನಮ್ಮ ವಿರೋಧ ನೀರು ಹಂಚಿಕೆಗಲ್ಲ, ಬದಲಾಗಿ ನೀರು ಪಡೆಯುವ ವಿಧಾನಕ್ಕೆ. ಬಲದಂಡೆ ನಾಲೆಯ ಪಕ್ಕದಲ್ಲೇ ಜಲಾಶಯವನ್ನು ಒಡೆದು ನೀರು ಲಿಫ್ಟ್ ಮಾಡಬಾರದು. ಈ ಯೋಜನೆಯಲ್ಲಿ ಬದಲಾವಣೆ ಆಗಬೇಕು” ಎಂದು ಒತ್ತಾಯಿಸಿದರು.

ದಾವಣಗೆರೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು ಬಿ.ಎಚ್. ರಸ್ತೆಯ ಮೇಲೆ ಪ್ರತಿಭಟನೆ ನಡೆಸಿದರು.
