SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 19, 2024
ಶಿವಮೊಗ್ಗದ 112 ERSS ಪೊಲೀಸರ ಮತ್ತೊಮ್ಮೆ ಜೀವರಕ್ಷಣೆ ಮಾಡಿದ್ದಾರೆ. ಕೆರೆಯಲ್ಲಿ ಮುಳುಗಿ ಸಾಯುತ್ತಿದ್ದ ವ್ಯಕ್ತಿಯನ್ನ ಕಾಪಾಡಿದ್ದಾರೆ. ಈ ಸಂಬಂಧ ಪೊಲೀಸ್ ಇಲಾಖೆ ಇಬ್ಬರು ಸಿಬ್ಬಂದಿಯ ಶ್ರಮವನ್ನ ಶ್ಲಾಘಿಸಿದೆ.
ಮಾಳೂರು ಪೊಲೀಸ್ ಠಾಣೆ
ಮೊನ್ನೆ ಅಂದರೆ ಕಳೆದ ದಿನಾಂಕಃ 17-09-2024 ರಂದು ಮಧ್ಯರಾತ್ರಿ ನಡೆದ ಘಟನೆ ಇದಾಗಿದೆ. ತೀರ್ಥಹಳ್ಳಿ ತಾಲ್ಲೂಕು ಯಡೆಹಳ್ಳಿ ಕೆರೆಯಲ್ಲಿ ಯಾರೋ ಒಬ್ಬರು ಮುಳುಗುತ್ತಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ತೋರುತ್ತದೆ ಎಂಬ ಕರೆಯೊಂದು 112-ERSS ಸಹಾಯವಾಣಿಗೆ ಬಂದಿತ್ತು.
ಶಿವಮೊಗ್ಗ 112
ತಕ್ಷಣವೇ ಅಲರ್ಟ್ ಆದ ERSS ವಾಹನದ ಅಧಿಕಾರಿಗಳಾದ ರಾಮಪ್ಪ, ಹೆಚ್.ಸಿ, ಮಾಳೂರು, ಪೊಲೀಸ್ ಠಾಣೆ ಮತ್ತು ERV ವಾಹನದ ಚಾಲಕರಾದ ಲೋಕೇಶ್, ಎ.ಹೆಚ್.ಸಿ, ಡಿಎಆರ್ ಶಿವಮೊಗ್ಗ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಕೆರೆಯ ಬಳಿ ಹೋಗಿ ನೋಡಿದಾಗ ಕಾರೊಂದು ಅನುಮಾನಾಸ್ಪದವಾಗಿ ನಿಂತಿರುವುದು ಕಂಡು ಬಂದಿದೆ. ಹಾಗಾಗಿ ಅನುಮಾನಗೊಂಡು ಕೆರೆಯ ಹತ್ತಿರಕ್ಕೆ ಹೋಗಿ ಪರಿಶೀಲಿಸಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬರು ಕೆರೆಯ ನೀರಿಗೆ ಹಾರಿ ಮೇಲೆ ಕೆಳಗೆ ಮುಳುಗುತ್ತಿರುವುದು ಕಾಣಿಸಿದೆ.
ಶಿವಮೊಗ್ಗ ಪೊಲೀಸ್ ಇಲಾಖೆ
ಹಿಂದೆ ಮುಂದೆ ನೋಡದ ಸಿಬ್ಬಂದಿ ನೀರಿಗೆ ಇಳಿದು ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ್ದಾರೆ. ಕೆರೆಯ ನೀರನ್ನು ಕುಡಿದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಗೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿ ಆತನ ಜೀವ ರಕ್ಷಣೆ ಮಾಡಿದ್ದಾರೆ. ಆ ಬಳಿಕ ವ್ಯಕ್ತಿಯನ್ನು ತೀರ್ಥಹಳ್ಳಿಯ ಜೆ.ಸಿ ಆಸ್ಪತ್ರೆಗೆ ಸೇರಿಸಿದ್ದಾರೆ.
ನೀರಿನಲ್ಲಿ ಮುಳುಗುತ್ತಿದ್ದರವನ್ನ ಹುಣಸೇಬೈಲ್ ರಮೇಶ್ ಎನ್ನಲಾಗಿದ್ದು, ಅವರು ಬಿಜೆಪಿಯ ಎಸ್‌ಟಿ ಘಟಕದ ಸದಸ್ಯರು ಎನ್ನಲಾಗಿದೆ. ಇದೀಗ ಇವರ ಜೀವ ಉಳಿಸಿದ ಹಿನ್ನಲೆಯಲ್ಲಿ ಶಿವಮೊಗ್ಗ ಪೊಲೀಸ್ ಇಲಾಖೆ ಸಿಬ್ಬಂದಿಯ ಕೆಲಸವನ್ನ ಮೆಚ್ಚಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ