SHIVAMOGGA | MALENADUTODAY NEWS | ಮಲೆನಾಡು ಟುಡೆ Nov 1, 2024
ನಾಡಿನೆಲ್ಲಡೆ ದೊಡ್ಡಹಬ್ಬ ದೀಪಾವಳಿಯನ್ನ ವಿಶೇಷವಾಗಿ ಆಚರಿಸಲಾಗುತ್ತಿದೆ. ಮನೆ ಮನೆಗಳಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತಿದೆ. ಶಿವಮೊಗ್ಗದಲ್ಲಿಯು ಹಬ್ಬ ಕಳೆದ ವರುಷಕ್ಕಿಂತಲೂ ಹೆಚ್ಚು ವಿಶೇಷವಾಗಿ ನಡೆಯುತ್ತಿದೆ. ಹಬ್ಬ ಜೋರಾಗಿದೆ ಎನ್ನುವುದಕ್ಕೆ ಪ್ರತಿರಸ್ತೆಯಲ್ಲಿ ಸಿಗುವ ಅಂಗಡಿ, ಮನೆಗಳ ಲಕ್ಷ್ಮೀ ಪೂಜೆಯ ಸಿರಿ ಸಿಂಗಾರದ ಅಲಂಕಾರಗಳು ಸಾಕ್ಷ್ಯ ಹೇಳುತ್ತಿವೆ.
ಈ ನಡುವೆ ಶಿವಮೊಗ್ಗದ ಶ್ರೀ ಕೋಟೆ ಮಾರಿಕಾಂಬಾ ದೇವಾಲಯದಲ್ಲಿ ಅಮ್ಮನವರಿಗೆ ನೋಟುಗಳಿಂದ ಅಲಂಕಾರವನ್ನ ಮಾಡಲಾಗಿದೆ. ಇವತ್ತು ಶುಕ್ರವಾರ ಸಹ ಆಗಿರುವುದರಿಂದ ಬೆಳಗ್ಗೆಯಿಂದಲೇ ಅಮ್ಮನವರಿಗೆ ವಿಶೇಷ ಪೂಜೆಗಳು ನಡೆಯುತ್ತಿವೆ. ಸಾವಿರಾರು ಭಕ್ತರು ದೇವಸ್ಥಾನಕ್ಕೆ ಬರುತ್ತಿದ್ದು, ಅಮ್ಮನವರ ಧನಕನಕದ ಅಲಂಕಾರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಭಕ್ತರು ಒಗ್ಗೂಡಿಸಿದ ಹೊಸ ಹೊಸ ನೋಟುಗಳಲ್ಲಿ ಅಮ್ಮನವರನ್ನ ಅಲಂಕಾರವನ್ನ ಕೈಗೊಳ್ಳಲಾಗಿದೆ. ಅಮ್ಮನವರ ಸೀರೆ, ಅಮ್ಮನವರ ಕಿರೀಟ, ಅಮ್ಮನರಿಗೆ ಹಾಕಿದ ಹಾರ ಸೇರಿದಂತೆ ಗರ್ಭಗುಡಿಯಲ್ಲಿ ಪ್ರತಿಯೊಂದನ್ನು ನೋಟುಗಳಿಂದಲೇ ಅಲಂಕಾರಿಸಲಾಗಿದೆ. ನೂರು ರೂಪಾಯಿಯ ಹೊಚ್ಚ ಹೊಸ ನೋಟುಗಳ ಹಾರವನ್ನ ಹಾಕಲಾಗಿದ್ದು, ಇನ್ನೂರು ರೂಪಾಯಿಯ ನೋಟಿನ ಹಾರವನ್ನು ಅಮ್ಮನವರ ಕೈಯಿಂದ ಉದ್ಭವವಾಗುವಂತೆ ಅಳವಡಿಸಲಾಗಿದೆ.
ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಮಾರಿಕಾಂಬೆಯ ದರ್ಶನ ಶುಕ್ರವಾರದ ವಿಶೇಷ ಪೂಜೆಗೆ ಬರುತ್ತಿರುವ ಭಕ್ತರಿಗೆ ಅಚ್ಚರಿ ಮೂಡಿಸುತ್ತಿದೆ. ದೇವರ ಪೂಜೆ ಮುಗಿಸುವ ಭಕ್ತರು ಮಾರಿಕಾಂಬೆಯ ಫೋಟೋಗಳನ್ನ ಕ್ಲಿಕ್ಕಿಸಿಕೊಂಡು ನಮ್ಮವರು ತಮ್ಮವರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಮನೆಯಲ್ಲಿದ್ದವರಿಗೆ ವಿಡಿಯೋ ಕರೆ ಮಾಡಿ ಅಮ್ಮನವರ ದರ್ಶನ ಮಾಡಿಸುತ್ತಿದ್ದಾರೆ.
SUMMARY | At Sri Kote Marikambe Temple, the deity Marikambe has been decorated with new notes.
KEYWORDS | Sri Kote Marikambe Temple, kote Marikambe, decorated with new notes,