SHIVAMOGGA | MALENADUTODAY NEWS | ಮಲೆನಾಡು ಟುಡೆ Jan 28, 2025
ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆ ಯಾವಾಗ ನಡೆಯಲಿದೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಕ್ಷೇತ್ರದ ಮರುವಿಂಗಡಣೆ ಬಳಿಕ ನಡೆಯುತ್ತದೆಯೋ? ಅಥವಾ ಅದಕ್ಕೂ ಮೊದಲೇ ನಡೆಯುತ್ತದೆಯೋ ಎಂಬ ಗೊಂದಲ ಜನರಲ್ಲಿದೆ. ಇದರ ನಡುವೆ ಶಿವಮೊಗ್ಗ ನಗರ ಶಾಸಕ ಎಸ್‌ಎನ್ ಚೆನ್ನಬಸಪ್ಪರವರು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಶಿವಮೊಗ್ಗ ಪಾಲಿಕೆಗೆ ಚುನಾವಣೆ ನಡೆಸಲು ತುರ್ತು ಕ್ರಮ ಕೈಗೊಳ್ಳುವಂತೆ ಕೋರಿದ್ದರು.. ಚನ್ನಬಸಪ್ಪರವರು ಬರೆದ ಪತ್ರಕ್ಕೆ ರಾಜ್ಯ ಚುನಾವಣಾ ಆಯೋಗ ಶಿವಮೊಗ್ಗ ಮಹಾನಗರ ಪಾಲಿಕೆಯ ಚುನಾವಣೆಯನ್ನು ನಡೆಸಲು ಇರುವ ಅಡ್ಡಿ ಹಾಗೂ ಚುನಾವಣೆ ಯಾವಾಗ ನಡೆಯಬಹುದು ಎನ್ನುವುದಕ್ಕೆ ವಿಸ್ತೃತವಾಗಿ ಉತ್ತರಿಸಿದೆ.
ರಾಜ್ಯ ಚುನಾವಣಾ ಆಯೋಗದ ಪತ್ರ
ಶಿವಮೊಗ್ಗ ಮಹಾನಗರ ಪಾಲಿಕೆಗೆ ಸಾರ್ವತ್ರಿಕ ಚುನಾವಣೆ ನಡೆಸುವ ಕುರಿತು.
ಉಲ್ಲೇಖ: ತಮ್ಮ ಮನವಿ ದಿನಾಂಕ: 31.12.2024. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಮನವಿಯಲ್ಲಿ, ಅವಧಿ ಮುಕ್ತಾಯಗೊಂಡಿರುವ ಶಿವಮೊಗ್ಗ ಮಹಾನಗರ ಪಾಲಿಕೆಗೆ ತುರ್ತಾಗಿ ಚುನಾವಣೆ ನಡೆಸಲು ಕ್ರಮ ವಹಿಸುವಂತೆ ಕೋರಿರುತ್ತೀರಿ.
ನಗರ ಸ್ಥಳೀಯ ಸಂಸ್ಥೆಗಳ ವಾರ್ಡಗಳ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ನಿಗಧಿ ಪಡಿಸುವ ಕಾರ್ಯವು ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಕಾರ್ಯವ್ಯಾಪ್ತಿಗೆ ಒಳಪಟ್ಟಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆಯ ಮೀಸಲಾತಿಯ ಅಂತಿಮ ಅಧಿಸೂಚನೆಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿರುವುದಿಲ್ಲ. ಸರ್ಕಾರವು ನಿಗದಿತ ಅವಧಿಯೊಳಗಾಗಿ ಮೀಸಲಾತಿ ಪಟ್ಟಿಯನ್ನು ಒದಗಿಸದ ಕಾರಣ, ಕಾರಣ, ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ಪ್ರಸ್ತುತ ಲಭ್ಯವಿರುವ ಮೀಸಲಾತಿ ಅನ್ವಯ ಚುನಾವಣೆ ನಡೆಸುವ ನಿಟ್ಟಿನಲ್ಲಿ, ಆಯೋಗವು ಕ್ರಮ ಕೈಗೊಂಡಿರುತ್ತದೆ. ಈ ಕುರಿತು ಮತದಾರರ ಪಟ್ಟಿ ತಯಾರಿಸುವ ಸಲುವಾಗಿ ವೇಳಾಪಟ್ಟಿಯನ್ನು ನಿಗದಿಪಡಿಸಿ ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ದಿನಾಂಕ: 14.08.2024 ರಂದೇ ಸೂಚನೆಯನ್ನು ನೀಡಲಾಗಿರುತ್ತದೆ. ಆದರೆ, ಮತದಾರರ ಪಟ್ಟಿ ತಯಾರಿಸಲು ಡಾಟಾಬೇಸ್ ಅವಶ್ಯವಿದ್ದು, ಸದರಿ ಹಂತದಲ್ಲಿ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದರಿಂದ ಆಯೋಗದಲ್ಲಿ ಡಾಟಾಬೇಸ್ ಸ್ವೀಕೃತವಾಗಿರುವುದಿಲ್ಲ. ಆದ್ದರಿಂದ ಶಿವಮೊಗ್ಗ ಮಹಾನಗರ ಪಾಲಿಕೆಯ ಮತದಾರರ ಪಟ್ಟಿ ತಯಾರಿಸುವ ಪ್ರಕ್ರಿಯೆಯಲ್ಲಿ ಅಡಚಣೆಯುಂಟಾಗಿರುತ್ತದೆ. ಪ್ರಸ್ತುತ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯು ದಿನಾಂಕ: 06.01.2025ರ ಅರ್ಹತಾ ದಿನಾಂಕಕ್ಕೆ ಪರಿಷ್ಕರಣೆಯಾಗಿದ್ದು, ಸದರಿ ಪರಿಷ್ಕೃತ ಡಾಟಾಬೇಸ್ ಅಯೋಗದಲ್ಲಿ ಸ್ವೀಕೃತವಾದ ಕೂಡಲೇ, ಅವಧಿ ಮುಕ್ತಾಯಗೊಂಡಿರುವ ಶಿವಮೊಗ್ಗ ಮಹಾನಗರ ಪಾಲಿಕೆಯ ಮತದಾರರ ಪಟ್ಟಿ ತಯಾರಿಸಲು ವೇಳಾಪಟ್ಟಿಯನ್ನು ನಿಗದಿ ಪಡಿಸುವುದರೊಂದಿಗೆ ಸಾರ್ವತ್ರಿಕ ಚುನಾವಣೆ ನಡೆಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಕ್ರಮವಹಿಸಲಾಗುವುದು ಎಂದು ತಮಗೆ ತಿಳಿಸಲು ನಾನು ನಿರ್ದೇಶಿಸಲ್ಪಟ್ಟಿದ್ದೇನೆ.
ಹೀಗೆ ರಾಜ್ಯ ಚುನಾವಣಾ ಆಯೋಗ ಶಿವಮೊಗ್ಗ ನಗರ ಶಾಸಕರಿಗೆ ಉತ್ತರ ಬರೆದು ಪತ್ರ ರವಾನಿಸಿದೆ. ಈ ನಿಟ್ಟಿನಲ್ಲಿ ಗಮನಿಸಿದರೇ ಸದ್ಯಕ್ಕಂತೂ ಶಿವಮೊಗ್ಗ ಮಹಾನಗರ ಪಾಲಿಕೆಯ ಚುನಾವಣೆಯು ನಡೆಯುವ ಸಾಧ್ಯತೆಗಳು ತೀರಾ ಕಡಿಮೆ ಎಂದು ತೋರುತ್ತಿದೆ.
SUMMARY | State Election Commission letter to Shivamogga City MLA SN Channabasappa regarding Shivamogga Municipal Corporation elections
KEY WORDS | State Election Commission letter , Shivamogga City MLA SN Channabasappa , Shivamogga city Corporation elections