SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 11, 2024 | TODAY DOCTOR |DR DHANANJAY SARJI | ನಾವೆಲ್ಲಾ ಬಳಸಿ ಭೂಮಿಗೆಸೆಯುವ ಪ್ಲಾಸ್ಟಿಕ್ ಸುಮಾರು 200 ವರ್ಷಗಳ ಕಾಲ ಕೊಳೆಯೋದಿಲ್ಲ. ಪ್ಲಾಸ್ಟಿಕ್ ಬಿದ್ದ ಜಾಗದಲ್ಲಿ ಯಾವುದೇ ಸಸ್ಯವೂ ಬೆಳೆಯೋದಿಲ್ಲ. ಅಷ್ಟೊಂದು ಅಪಾಯಕಾರಿಯಾಗಿರುವ ಪ್ಲಾಸ್ಟಿಕ್ ನಮ್ಮ ರಕ್ತದ ಕಣ ಕಣವನ್ನೂ ಸದ್ದಿಲ್ಲದೇ ಸೇರುತ್ತಿದೆ.
ಇದು ಅಚ್ಚರಿ ಎನಿಸಿದರೂ ಸತ್ಯ. ಹೌದು ! ಇತ್ತೀಚೆಗಿನ ಸಂಶೋಧನೆಯ ವರದಿಯ ಪ್ರಕಾರ 22 ಅನಾಮಧೇಯ ದಾನಿಗಳ ರಕ್ತದ ಮಾದರಿಗಳಲ್ಲಿ 17 ಮಂದಿ ಅಂದರೆ ಶೇ 80ರಷ್ಟು ಜನರ ರಕ್ತದಲ್ಲಿ ಮೈಕ್ರೋ ಪ್ಲಾಸ್ಟಿಕ್ ಕಣಗಳು ಪತ್ತೆಯಾಗಿದೆ. 2022 ರಲ್ಲಿ ಆಮ್ ಸ್ಟರ್ ವಿವಿಯ ಸಂಶೋಧಕರು ತಮ್ಮ ಸಂಶೋಧನೆಯ ಭಾಗವಾಗಿ ಒಂದಷ್ಟು ಜನರ ರಕ್ತವನ್ನು ಪರೀಕ್ಷಿಸಿದಾಗ ಮನುಷ್ಯನ ರಕ್ತದಲ್ಲಿ ಪ್ಲಾಸ್ಟಿಕ್ ಅಂಶ ಇರುವುದು ಕಂಡು ಬಂದಿದೆ.
ಈ ಪ್ಲಾಸ್ಟಿಕ್ ಕಣಗಳನ್ನು 700 ನ್ಯಾನೋಮೀಟರ್‌ಗಳಷ್ಟು ಸೂಕ್ಷ್ಮವಾಗಿತ್ತು. ಮಿಲಿ ಮೀಟರ್ ಗಳಲ್ಲಿ ಹೇಳುವುದಾದರೆ 0.0007 ಮಿಲಿ ಮೀಟರ್. ಗಾತ್ರ ಸಣ್ಣದೇ ಇರಬಹುದು. ಆದರೆ, ಹೀಗೆ ಸಿಕ್ಕ ಪ್ಲಾಸ್ಟಿಕ್ ಕಣಗಳಲ್ಲಿ ಇದ್ದ ಮುಖ್ಯವಾದ ಅಂಶ. “ಪಾಲಿಥಿಲೀನ್ ಟೆರೆಫ್ತಾಲೆಟ್”, ಇದನ್ನು ಪ್ಲಾಸ್ಟಿಕ್ ಬಾಟಲ್‌ಗಳನ್ನು ಉತ್ಪಾದನೆಯಲ್ಲಿ ಬಳಸಲಾಗುತ್ತದೆ.
ಹಾಗೆಯೇ ನಾವು ತಿನ್ನುವ ಆಹಾರ, ಕುಡಿಯುವ ನೀರು ಹಾಗೂ ಸೇವಿಸುವ ಗಾಳಿಯಲ್ಲೂ ಪ್ಲಾಸ್ಟಿಕ್ ಅಂಶ ಬೆರೆತಿದೆ. ಈ ಮೂಲಕ ಲಕ್ಷಾಂತರ ಮಂದಿಯ ಅನಾರೋಗ್ಯ ಹಾಗೂ ಸಾವಿಗೂ ಕಾರಣವಾಗುತ್ತಿದೆ. ಪ್ಲಾಸ್ಟಿಕ್ ಕಪ್ ನಲ್ಲಿ ಟೀ ಕಾಫೀ ಕುಡಿಯುವುದು ಒಳ್ಳೆಯದಲ್ಲವೆಂದು ನಾವೆಲ್ಲ ಪೇಪರ್ ಕಪ್ ಗಳನ್ನೂ ಬಳಸುತ್ತಿದ್ದೇವೆ.
ಟೀ, ಕಾಫಿ ಹಾಕುವಾಗ ಪೇಪರ್ ಕಪ್ ಮುದ್ದೆಯಾಗಬಾರದೆಂದು ಅದಕ್ಕೆ ತೆಳುವಾದ ಪ್ಲಾಸ್ಟಿಕ್ ಲೇಪನವನ್ನು ಮಾಡಲಾಗಿರುತ್ತದೆ, ಬಿಸಿ ಟೀ ಅಥವಾ ಕಾಫೀ ಹಾಕುವಾಗ ಅದರ ಬಿಸಿಗೆ ಮೈಕ್ರೋ ಪ್ಲಾಸ್ಟಿಕ್ ಕಣಗಳು ನಮ್ಮ ದೇಹ ಸೇರುತ್ತಿದೆ. ಅಲ್ಲೆಲ್ಲೋ ಹಾನಿ ಮಾಡುತ್ತಿದೆ. ಅಲ್ಲೆಲ್ಲೋ ಸೇರುತ್ತಿದೆ ಎನ್ನುವುದಕ್ಕಿಂತ ನಮ್ಮ ರಕ್ತವನ್ನೇ ಸೇರುತ್ತಿದೆ.
ಇದು ನಿಜಕ್ಕೂ ಆತಂಕಕಾರಿ ಸಂಗತಿ. ಇತ್ತೀಚೆಗಿನ ಸಂಶೋಧನೆಯೊಂದರ ವರದಿಯ ಪ್ರಕಾರ ಒಬ್ಬ ವ್ಯಕ್ತಿಯು ವಾರಕ್ಕೆ ಅಂದಾಜು 5 ಗ್ರಾಂ ಮೈಕ್ರೋ ಪ್ಲಾಸ್ಟಿಕ್ ಸೇವಿಸುತ್ತಿದ್ದಾನೆ. ಹಾಗೆಯೇ ಇನ್ನೊಂದು ಸಂಶೋಧನೆಯ ಪ್ರಕಾರ ಪ್ರತಿವ್ಯಕ್ತಿ ಸೇವಿಸುವ ದಿನ ನಿತ್ಯದ ಆಹಾರಗಳ ಮೂಲಕ ಒಂದು ವರ್ಷಕ್ಕೆ 52 ಸಾವಿರ ಮೈಕ್ರೋ ಪ್ಲಾಸ್ಟಿಕ್ ಕಣಗಳನ್ನು ಸೇವಿಸುತ್ತಿದ್ದಾನೆ.
2024ರ ಜನವರಿಯ ಅಧ್ಯಯನದ ವರದಿಯ ಪ್ರಕಾರ ಒಂದು ಲೀಟರ್ ಕುಡಿಯುವ ನೀರಿನಲ್ಲಿ 2,40,000 ಮೈಕ್ರೋ ಪ್ಲಾಸ್ಟಿಕ್ ಕಣಗಳು ಕಂಡು ಬಂದಿದೆ. ಇದು ಹಿಂದಿನ ಅಧ್ಯಯನದಲ್ಲಿ ಕಂಡು ಬಂದ ಹತ್ತರಿಂದ ನೂರು ಪಟ್ಟು ಹೆಚ್ಚು. ಹಾಗಾಗಿ ಪ್ಲಾಸ್ಟಿಕ್ ಭೂಮಿಗೆ ಹಾನಿಯನ್ನುಂಟು ಮಾಡುವುದಲ್ಲದೆ ಮನುಷ್ಯನ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ.
ಪ್ಲಾಸ್ಟಿಕ್ ವಸ್ತುಗಳಲ್ಲಿ ಆಹಾರ ಸೇವನೆ ಮಾಡೋದ್ರಿಂದ ಕ್ಯಾನ್ಸರ್ ನಂತಹ ರೋಗವೂ ಕಾಡುತ್ತಿದೆ. ಇದೇ ಕಾರಣಕ್ಕೆ ಆನೇಕರು ಪ್ಲಾಸ್ಟಿಕ್ ತ್ಯಜಿಸುವ ಪ್ರಯತ್ನ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ, ಆದರೂ ಸದ್ದಿಲ್ಲದೆ ನಮ್ಮ ಆರೋಗ್ಯ ಹಾಳಾಗ್ತಿದೆ ಎಂಬುದರ ಬಗ್ಗೆ ನಮಗೆ ಅರಿವಿರಬೇಕಷ್ಟೇ. ವಿಶ್ವದಲ್ಲಿ ಪ್ರತಿವರ್ಷ ಸೃಷ್ಟಿಯಾಗುವ ಪ್ಲಾಸ್ಟಿಕ್ ತಾಜ್ಯ ಅಂದಾಜು 300 ರಿಂದ 350 ಮಿಲಿಯನ್ ಟನ್. ಪ್ರತಿ ವರ್ಷ ಸಮುದ್ರ ಸೇರುತ್ತಿರುವ ಪ್ಲಾಸ್ಟಿಕ್ ತಾಜ್ಯ 8 ಮಿಲಿಯನ್ ಟನ್.
ವಿಶ್ವದಾದ್ಯಂತ ಪ್ರತಿ ಸೆಕೆಂಡಿಗೆ 1,60,000 ಪ್ಲಾಸ್ಟಿಕ್ ಚೀಲಗಳು ಬಳಕೆಯಾಗುತ್ತಿವೆ. ಹೆಚ್ಚುತ್ತಿರುವ ಜನಸಂಖ್ಯೆ, ಬೆಳೆಯುತ್ತಿರುವ ಪಟ್ಟಣ, ನಗರ ಹಾಗೂ ಮಹಾನಗರ ಪ್ರದೇಶಗಳಲ್ಲಿ ತ್ಯಾಜ್ಯ ಹೆಚ್ಚುತ್ತಲೇ ಇದೆ, ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದ್ದರೆ ಅದರ ಬಳಕೆಯೂ ಹೆಚ್ಚುತ್ತದೆ. ವಿಲೇವಾರಿಯೂ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ.
ಹೀಗೆ ಪ್ಲಾಸ್ಟಿಕ್ ಬಳಕೆ ಮುಂದುವರಿದರೆ ನಾಳೆ ಜಗತ್ತು ಪ್ಲಾಸ್ಟಿಕ್ಮಯ ಆಗುವುದರಲ್ಲಿ ಸಂಶಯವೇ ಇಲ್ಲ. ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗಲು 200 ವರ್ಷ ಬೇಕಾದರೆ ಪ್ಲಾಸ್ಟಿಕ್ ಬಾಟಲ್ ಗಳು 450 ವರ್ಷ ತೆಗೆದುಕೊಳ್ಳುತ್ತವೆ. ಭಾರತದಲ್ಲಿ ಪ್ರತಿ 1 ನಿಮಿ ಷಕ್ಕೆ 1 ಮಿಲಿಯನ್ ಪ್ಲಾಸ್ಟಿಕ್ ಬಾಟಲ್ ಖರೀದಿಯಾಗುತ್ತಿದ್ದು, ಹಾಗೆಯೇ ಬಳಕೆಯೂ ಸಮ ಪ್ರಮಾಣದಲ್ಲಿದೆ. ಆದರೆ, ಬಳಸುವ ಪ್ಲಾಸ್ಟಿಕ್ ನಲ್ಲಿ ರೀ ಸೈಂಕ್ಲಿಂಗ್ ಆಗೋದು ಶೇ.10 ರಷ್ಟು ಮಾತ್ರ ಉಳಿದಿದ್ದೆಲ್ಲವೂ ಭೂಮಿಯನ್ನು ಸೇರುತ್ತಿದೆ.
ಪ್ಲಾಸ್ಟಿಕ್ ಅವಾಂತರ ಇಷ್ಟಕ್ಕೆ ಮುಗಿಯೋದಿಲ್ಲ. ರಕ್ತದಲ್ಲಿ ಪ್ಲಾಸ್ಟಿಕ್ ಪತ್ತೆಯಾದ ಬಳಿಕ ಪುರುಷರ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲೂ ಪ್ಲಾಸ್ಟಿಕ್ ಪತ್ತೆಯಾಗಿದೆ. ತಂಪುಪಾನೀಯ ಹಾಗೂ ನೀರನ್ನು ಕುಡಿದು ಎಲ್ಲೆಂದರಲ್ಲಿ ಎಸೆಯುತ್ತಿರುವ ಪ್ಲಾಸ್ಟಿಕ್ ಬಾಟಲ್‌ಗಳು ಚೂರು-ಚೂರಾಗಿ, ‘ಮೈಕ್ರೋ ಪ್ಲಾಸ್ಟಿಕ್’, ನ್ಯಾನೋ ಪ್ಲಾಸ್ಟಿಕ್ ರೂಪತಳೆದು ಗಾಳಿ, ನೀರು ಹಾಗೂ ಆಹಾರದ ಮೂಲಕ ಕಣಗಳ ರೂಪದಲ್ಲಿ ಮನುಷ್ಯನ ದೇಹವನ್ನು ಗೊತ್ತಿಲ್ಲದೆ ಸೇರಿಕೊಳ್ಳುತ್ತಿದೆ.ಇದನ್ನು ಖಂಡಿತವಾಗಿಯೂ ನಿರ್ಲಕ್ಷಿಸುವಂತಿಲ್ಲ.
ಪ್ರತಿಯೊಬ್ಬರು ನಿತ್ಯವೂ ಬಳಸುವ ಹಾಲಿನ ಪ್ಯಾಕೆಟ್‌ಗಳ ತುದಿಯನ್ನು ಸಂಪೂರ್ಣವಾಗಿ ಕತ್ತರಿಸದೇ ಹಾಗೇ ತೆರೆಯುವುದನ್ನು ರೂಢಿಸಿಕೊಂಡರೆ ದಿನಕ್ಕೆ 50 ಲಕ್ಷ ಪ್ಲಾಸ್ಟಿಕ್ ತುಣುಕುಗಳು ಕಸದ ಡಬ್ಬ ಸೇರುವುದನ್ನು ತಡೆಯಬಹುದು. ಹೀಗೆ ಕತ್ತರಿಸಿ ತೆಗೆಯುವ ಸಣ್ಣ ತುಣುಕುಗಳನ್ನು ಪುನರ್ಬಳಕೆ ಮಾಡಲು ಸಾಧ್ಯವಿಲ್ಲ. ಈ ಒಂದು ಸಣ್ಣ ಕೆಲಸ ಅದಷ್ಟೋ ಅಮಾಯಕ ಜೀವಗಳನ್ನು ಉಳಿಸಬಹುದು’ ಹೀಗೆಂದು ಬೆಂಗಳೂರು ಅಧಮ್ಯ ಚೇತನ ಫೌಂಡೇಷನ್ ಸಂಸ್ಥಾಪಕರಾದ ತೇಜಸ್ವಿನಿ ಅನಂತ್ ಕುಮಾರ್ ಅವರು 2019ರ ಮಾರ್ಚ್ 19 ರಲ್ಲಿ ಟ್ವಿಟ್ ಮಾಡಿದ್ದರು.
ಆಗ ಈ ಮಾತನ್ನು ನಾವೆಲ್ಲಾ ಎಷ್ಟರ ಮಟ್ಟಿಗೆ ಗಂಭೀರವಾಗಿ ಪರಿಗಣಿಸಿದ್ದೀವಿ ಅನ್ನೋದು ಗೊತ್ತಿಲ್ಲ. ಆದರೆ ಈಗಂತೂ ಈ ಎಚ್ಚರಿಕೆಯ ಮಾತುಗಳನ್ನು ನಿರ್ಲಕ್ಷಿಸುವಂತಿಲ್ಲ. ಇಷ್ಟವೋ ಕಷ್ಟವೂ ಪ್ಲಾಸ್ಟಿಕ್ ವಿಚಾರದಲ್ಲಿ ನಾವೆಲ್ಲರೂ ಎಚ್ಚೆತ್ತುಕೊಳ್ಳಲೇಬೇಕಿದೆ. ಅಂಗಡಿಗಳಿಗೆ ಹೋಗುವಾಗ ಮನೆಯಿಂದಲೇ ಬಟ್ಟೆ ಬ್ಯಾಗನ್ನು ತೆಗೆದುಕೊಂಡು ಹೋಗುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಪ್ಲಾಸ್ಟಿಕ್ ಚೀಲಗಳನ್ನು ಬಳಸದಿರುವ ಬಗ್ಗೆ ಜಾಗೃತಿ ಮೂಡಿಸಬೇಕು
SUMMARY | A column on the dangers of plastic selected from the ‘manada matu’ column written by Dr. Dhananjay Sarji. Today Doctor Column
KEYWORDS | dangers of plastic, manada matu, column written by Dr. Dhananjay Sarji, Today Doctor Column