SHIVAMOGGA | MALENADUTODAY NEWS | ಮಲೆನಾಡು ಟುಡೆ Oct 20, 2024
ಶಿವಮೊಗ್ಗ | ಜಿಲ್ಲೆಯಲ್ಲಿ ಮಳೆಯ ಅಬ್ಬರಕ್ಕೆ ಆದಂತಹ ಹಾನಿಯ ಬಗ್ಗೆ ಕ್ಷಣಕ್ಷಣಕ್ಕೂ ಹೊಸ ಹೊಸ ವರದಿ ಲಭ್ಯವಾಗುತ್ತಿದೆ. ಈ ನಡುವೆ ಶಿವಮೊಗ್ಗ ಸಿಟಿಯಷ್ಟೆ ಅಲ್ಲದೆ ಶಿವಮೊಗ್ಗದ ಕಾಡಿನ ಪ್ರದೇಶಗಳಲ್ಲಿ ವಿಪರೀತ ಮಳೆಯಾಗಿದ್ದು, ರಾತ್ರಿಯಿಡಿ ಸುರಿದ ಮಳೆಯ ಆರ್ಭಟಕ್ಕೆ ಕಾಡು ಪ್ರದೇಶಗಳಲ್ಲಿ ಕೃತಕ ತೊರೆಗಳು ಸೃಷ್ಟಿಯಾಗಿ ತಗ್ಗಿನ ಕಡೆ ಪ್ರವಾಹದ ರೀತಿಯಲ್ಲಿ ನೀರು ಹರಿದಿದೆ.
ಇದಕ್ಕೆ ಸಾಕ್ಷಿ ಎಂಬಂತೆ ಸಕ್ರೆಬೈಲ್ ಆನೆ ಬಿಡಾರದ ಸಮೀಪ ಹೆದ್ದಾರಿ ಮೇಲೆಯೇ ಎರಡು ಅಡಿ ಎತ್ತರಕ್ಕೆ ನೀರು ಹರಿಯುತ್ತಿತ್ತು. ಸುಮಾರು ಐವತ್ತು ಅಡಿ ವ್ಯಾಪ್ತಿಯಲ್ಲಿ ನೀರು ಹರಿಯುತ್ತಿದ್ದರಿಂದ ತೀರ್ಥಹಳ್ಳಿಯಿಂದ ಶಿವಮೊಗ್ಗ, ಶಿವಮೊಗ್ಗ ಕಡೆಯಿಂದ ತೀರ್ಥಹಳ್ಳಿಗೆ ಕಡೆಗೆ ಹೋಗುವ ವಾಹನಗಳು ಪರದಾಡುವಂತಾಗಿತ್ತು.
ಕಾಡಿನ ಮೇಲಿನಿಂದ ತುಂಗಾನದಿಯ ಕಡೆಗೆ ನೀರು ರಭಸವಾಗಿ ಹರಿಯುತ್ತಿದ್ದರಿಂದ ವಾಹನ ಸಂಚಾರ ತುಂಬಾನೇ ಕಷ್ಟವಾಗಿತ್ತು. ನೀರಿನ ಹರಿವು ಕಡಿಮೆಯಾದ ಬಳಿಕವಷ್ಟೆ ಇಲ್ಲಿ ವಾಹನಗಳು ರಸ್ತೆ ದಾಟಲು ಸಾಧ್ಯವಾದವು
ಇನ್ನೂ ಈ ಭಾಗದಲ್ಲಿನ ನದಿ ತೀರದ ಫೀಶ್ ಅಂಗಡಿಗಳ ಆವರಣದಲ್ಲಿ ನುಗ್ಗಿದ ನೀರು ಪ್ರವಾಹದ ರೀತಿಯಲ್ಲಿಯೇ ತುಂಗಾನದಿ ಸೇರುತ್ತಿತ್ತು. ಕಾಡಿನ ನಡುವೆ ಹಳ್ಳದಂತೆ ಹರಿಯುತ್ತಿದ್ದ ನೀರಿನ ದೃಶ್ಯವನ್ನು ಅಲ್ಲಿನ ಸ್ಥಳೀಯರು ಮಲೆನಾಡು ಟುಡೆಗೆ ಕಳುಹಿಸಿಕೊಟ್ಟಿದ್ದಾರೆ.