SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 10, 2024
ರಾಜಕೀಯದಲ್ಲಿ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರು ಅಲಂಕರಿಸದ ಹುದ್ದೆಯಿಲ್ಲ.. ಬ್ರ್ಯಾಂಡ್ ಬೆಂಗಳೂರು ಕನಸು ಕಂಡು, ಸಿಂಗಾಪುರ ಮಾಡಲು ಹೊರಟವರು. ರಾಜದ ಹಲವು ಘಟಾನುಘಟಿ ರಾಜಕಾರಣಿಗಳು ಅವರ ಗರಡಿಯಲ್ಲಿ ಪಳಗಿದವರು ಅನ್ನೋದು ಗಮನಿಸಬೇಕಾದ ಅಂಶ. ಅಂದಹಾಗೆ, ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇದ್ದೇ ಇರುತ್ತಾರೆ. ಎಸ್‌ಎಂಕೆಯವರ ಪ್ರತಿ ಹೆಜ್ಜೆಯಲ್ಲೂ ಹೆಜ್ಜೆ ಹಾಕಿದ್ದು ಮಲೆನಾಡಿನ ಆ ಮಹಿಳೆ.. ಆ ಕುರಿತ ಒಂದು ರಿಪೋರ್ಟ್ ಇಲ್ಲಿದೆ.
1966 ರಲ್ಲಿ ಕುಡುಮಲ್ಲಿಗೆಯ ಪ್ರೇಮಾ ಅವರ ಜೊತೆ ವಿವಾಹ
ಮಾಜಿ ಸಿಎಂ ಎಸ್.ಎಂ. ಕೃಷ್ಣ ಈಗ ನೆನಪು ಮಾತ್ರ. ಸಿಎಂ, ಡಿಸಿಎಂ, ಸ್ಪೀಕರ್, ಕೇಂದ್ರ ಸಚಿವರಾಗಿ, ರಾಜ್ಯಪಾಲರಾಗಿ ಹಲವಾರು ಹುದ್ದೆಗಳನ್ನು ಅಲಂಕರಿಸಿದ ಹಿರಿಯ ರಾಜಕಾರಣಿ ವಿಧಿವಶರಾಗಿದ್ದಾರೆ. ಇಂತಹ ದೂರದೃಷ್ಟಿಯುಳ್ಳ ರಾಜಕಾರಣಿಗೂ ಮಲೆನಾಡಿಗೂ ಬಿಟ್ಟೂ ಬಿಡಲಾರದ ನಂಟು.ಈಗ ಕುಡುಮಲ್ಲಿಗೆ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ಎಸ್.ಎಂ.ಕೃಷ್ಣ ಪತ್ನಿ ಪ್ರೇಮಾ ತೀರ್ಥಹಳ್ಳಿ ತಾಲೂಕು ಕುಡುಮಲ್ಲಿಗೆ ಗ್ರಾಮದವರು. ಅಡಿಕೆ ಬೆಳೆಗಾರ ಚಿನ್ನಪ್ಪಗೌಡ ಮತ್ತು ಕಮಲಾಕ್ಷಮ್ಮ ದಂಪತಿಯ ಪುತ್ರಿಯಾಗಿದ್ದ ಅವರನ್ನು 1966 ರಲ್ಲಿ ಎಸ್.ಎಂ. ಕೃಷ್ಣ ಅವರಿಗೆ ಕೊಟ್ಟು ಕಲ್ಯಾಣ ಮಾಡಲಾಗಿತ್ತು.
ಎರಡು ಕುಟುಂಬ ಒಂದು ಗೂಡಿಸಿದ್ದು ಯಾರು ಗೊತ್ತಾ..? | ಹೆಣ್ಣು ನೋಡೋಕೆ ಕುಡುಮಲ್ಲಿಗೆಗೆ ಬಂದಿದ್ದ ಎಸ್‌ಎಂಕೆ
ವಿವಾಹದ ಸಮಯದಲ್ಲಿಯೇ ಎಸ್.ಎಂ.ಕೃಷ್ಣ ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ಮಂಡ್ಯ ಜಿಲ್ಲೆ ಮದ್ದೂರು ಕ್ಷೇತ್ರದ ಶಾಸಕರಾಗಿದ್ದರು. ಅಂದ್ಹಾಗೆ ಎಸ್.ಎಂ.ಕೃಷ್ಣ ಮತ್ತು ಪ್ರೇಮಾ ಅವರ ಕುಟುಂಬಗಳನ್ನು ಒಂದುಗೂಡಿಸಿದ್ದು ಮಾಜಿ ಮುಖ್ಯಮಂತ್ರಿ ಕಡಿದಾಳು ಮಂಜಪ್ಪ ಎಂದು ಎಸ್.ಎಂ.ಕೃಷ್ಣ ಅವರೆ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದರು. ಕಡಿದಾಳು ಮಂಜಪ್ಪ ಅವರು ಎಸ್.ಎಂ.ಕೃಷ್ಣ ಅವರಿಗೂ ಸಂಬಂಧಿ. ಇತ್ತ ಮಂಜಪ್ಪ ಅವರ ಪತ್ನಿ ಲಕ್ಷ್ಮೀದೇವಿ ಅವರ ಸಹೋದರ, ಪ್ರೇಮಾ ಅವರ ಸಹೋದರಿಯನ್ನು ವಿವಾಹವಾಗಿದ್ದರು. ಹಾಗಾಗಿ ಪ್ರೇಮಾ ಅವರಿಗೂ ಕಡಿದಾಳು ಮಂಜಪ್ಪ ಸಂಬಂಧಿಯಾಗಿದ್ದರು. ಎಸ್.ಎಂ.ಕೃಷ್ಣ ಅವರಿಗೆ ಹೆಣ್ಣು ಹುಡುಕುತ್ತಿರುವ ವಿಚಾರ ತಿಳಿದು ಮಂಜಪ್ಪ ಅವರೆ ಪ್ರೇಮಾ ಅವರ ವಿಷಯ ತಿಳಿಸಿದ್ದರು. ಹೆಣ್ಣು ನೋಡುವ ಶಾಸ್ತ್ರ ಕುಡುಮಲ್ಲಿಗೆಯಲ್ಲಿ ನೆರವೇರಿತ್ತಂತೆ. ಅಂದು ಬೆಂಗಳೂರಿನಿಂದ ಕುಡುಮಲ್ಲಿಗೆಗೆ ಎಸ್‌ಎಂಕೆ ಕುಟುಂಬ ಸದಸ್ಯರು ಬಂದಿದ್ದರು. ಹಲವಾರು ಬಾರಿ ಅವರು ತೀರ್ಥಹಳ್ಳಿಗೆ ಭೇಟಿ ನೀಡಿದ್ದಾರೆ. ತೀರ್ಥಹಳ್ಳಿಯ ಜನಪ್ರತಿನಿಧಿಗಳ ಜೊತೆಗೂ ಉತ್ತಮ ಬಾಂಧವ್ಯವನ್ನು ಅವರು ಹೊಂದಿದ್ದರು. ಒಟ್ಟಾರೆಯಾಗಿ ರಾಜಕೀಯದಲ್ಲಿ ಹಲವಾರು ಹುದ್ದೆಗಳನ್ನು ಅಲಂಕರಿಸಿ, ಸೈ ಎನಿಸಿಕೊಂಡಿರುವ ಎಸ್.ಎಂ. ಕೃಷ್ಣ ಅವರ ಹಿಂದೆ ಪ್ರತಿ ಹೆಜ್ಜೆಯಲ್ಲೂ ಪ್ರೇಮಾ ಅವರು ಇದ್ದರು. ಅವರು ನಮ್ಮ ತೀರ್ಥಹಳ್ಳಿಯವರು ಅನ್ನೋ ಹೆಮ್ಮೆ ಇಲ್ಲಿನ ಜನರದ್ದು.
SUMMARY | Thirthahalli’s son-in-law is still a memory. How much do you know about SM Krishna’s married life
KEYWORDS| Thirthahalli, S M Krishna’ married life, kannadanews,