SHIVAMOGGA | MALENADUTODAY NEWS | ಮಲೆನಾಡು ಟುಡೆ | Apr 1, 2025
ದಾವಣಗೆರೆ | ದಾವಣಗೆರೆ ಜಿಲ್ಲೆ ನ್ಯಾಮತಿ ಪಟ್ಟಣದ ಬ್ಯಾಂಕ್‌ನಲ್ಲಿ 13 ಕೋಟಿ ಮೌಲ್ಯದ ಬಂಗಾರವನ್ನು ಎಗರಿಸಿದ್ದ ಕಳ್ಳರು ಈಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕಳ್ಳರಿಗೆ ಕಳ್ಳತನ ಮಾಡಲು ಪ್ರೇರಣೆ ನೀಡಿದ್ದು, ಮನಿ ಹೀಸ್ಟ್ ಎಂಬ ವೆಬ್ ಸೀರಿಸ್. ವೆಬ್ ಸೀರಿಸ್ ನೋಡಿ ದರೋಡೆ ಮಾಡಲು ಕಳ್ಳರು ಮಾಡಿದ್ದ ಮಾಸ್ಟರ್ ಪ್ಲಾನ್ ಎಂತದ್ದು, ಅವರನ್ನು ಹಿಡಿಯಲು ಪೊಲೀಸರು ಮಾಡಿದ ಪ್ಲಾನ್ ಹೇಗಿತ್ತು ಎಂಬುದನ್ನು ತಿಳಿಯಲು ಈ ಸ್ಟೋರಿ ಓದಿ.
ಏನಿದು ಘಟನೆ

2024 ರ ಅಕ್ಟೋಬರ್‌ನಲ್ಲಿ ಕಳ್ಳರ ಗ್ಯಾಂಗ್ ಒಂದು ದಾವಣಗೆರೆಯ ಎಸ್ಬಿಐ ಬ್ಯಾಂಕ್‌ನಲ್ಲಿ ಗ್ರಾಹಕರು ಅಡವಿಟ್ಟಿದ್ದ 17.01 ಕೆಜಿ ಬಂಗಾರವನ್ನು ಕದ್ದು ಪರಾರಿಯಾಗಿದ್ದರು. ಅದರ ಬೆಲೆ ಬರೋಬ್ಬರಿ 13 ಕೋಟಿ ರೂಪಾಯಿಗಳಾಗಿತ್ತು. ಕಳ್ಳತನ ಆಗಿದ್ದು ಗೊತ್ತಾದ ತಕ್ಷಣ ಬ್ಯಾಂಕ್‌ನವರು ಪೊಲೀಸರಿಗೆ ದೂರು ನೀಡಿದ್ದರು. ತಕ್ಕಷಣ ಕಾರ್ಯಪ್ರವೃತ್ತರಾದ ಪೂರ್ವ ವಲಯದ ಐಜಿಪಿ, ಎಸ್‌ಪಿ, ಸ್ಥಳಕ್ಕೆ ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದರು. ಆದರೆ ಬ್ಯಾಂಕ್ ದರೋಡೆ ಮಾಡಿದ್ದ ಕಳ್ಳರು ಯಾವ ಕುರುಹನ್ನು ಬಿಡದೆ ಬಹಳಾ ಬುದ್ದಿವಂತಿಕೆಯಿಂದ ಎಲ್ಲಾ ಸಾಕ್ಷಿಗಳನ್ನು ನಾಶ ಪಡಿಸಿದ್ದರು. ಇದರಿಂದಾಗಿ ಪೊಲೀಸರಿಗೆ ಕಳ್ಳರನ್ನು ಪತ್ತೆ ಹಚ್ಚುವುದು ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಆದ್ದರಿಂದ ಈ ಹಿಂದೆ ದಾಖಲಾಗಿರುವ ಬ್ಯಾಂಕ್ ದರೋಡೆ ಎಟಿಎಂ ಕಳ್ಳತನ ಪ್ರಕರಣಗಳ ವಿವರ, ಹಳೆಯ ಆರೋಪಿಗಳ ವಿವರ, ಅಂತರ್ ರಾಜ್ಯ ಗ್ಯಾಂಗ್‌ಗಳ ವಿವರಗಳನ್ನು ಪಡೆದ ಪೊಲೀಸರು ಅವುಗಳನ್ನು ಅನಾಲಿಸಿಸ್ ಮಾಡಿ ತಂಡ ರಚಿಸಿ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ 5 ತಿಂಗಳು ಕಾಲ ಸಮಗ್ರ ಕೂಲಂಕುಷವಾಗಿ ಮಾಹಿತಿಯನ್ನು ಸಂಗ್ರಹಿಸಿ ಕಳ್ಳರಿಗೆ ಬಲೆ ಬೀಸಿದ್ದರು.
ಕಳ್ಳರನ್ನು ಪತ್ತೆಹಚ್ಚಲು ಪೊಲೀಸರು ಮೊರೆ ಹೋಗಿದ್ದು ಟೆಕ್ನಾಲಜಿಗೆ
ಪೊಲೀಸರು ಈ ಕೇಸ್‌ನ್ನು ಬಹಳಾ ಗಂಭೀರವಾಗಿ ತೆಗೆದುಕೊಂಡು ತಾಂತ್ರಿಕ ಮೂಲಗಳಿಂದ ದೊರೆತ ಸುಳಿವಿನಿಂದ ಹಾಗೂ ಈ ಹಿಂದೆ ನಡೆದ ಹಲವು ಬ್ಯಾಂಕ್ ದರೋಡೆ ಪ್ರಕರಣಗಳ ಅನಾಲಿಸಿಸ್ ಮಾಡಿದರು. ವಿವಿಧ ದರೋಡೆ ಪ್ರಕರಣದಲ್ಲಿ ಬೇರೆ ಬೇರೆ ರಾಜ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳಿಗೆ ಬಲೆ ಬೀಸಿ ವಿಚಾರಣೆ ಕೈಗೊಂಡರು. ಹಾಗೆಯೇ ಈ ಕೇಸ್‌ಗೆ ಸಂಭಂದಿಸಿದಂತೆ ವಿವಿಧ ದಾಖಲೆಗಳನ್ನು ಸಂಗ್ರಹಿಸಿದರು. ಹಲವು ಪ್ರಯತ್ನಗಳ ನಂತರ ಮಾರ್ಚ್ ತಿಂಗಳ ಮೂರನೇ ವಾರ ಪೊಲೀಸ್ ತಂಡ ಈಗಾಗಲೇ ತಮ್ಮ ಬಳಿ ಇದ್ದಂತಹ ತಾಂತ್ರಿಕ ಅಂಶಗಳು ಮತ್ತು ಮಾಹಿತಿಗಳನ್ನು ತಾಳೆ ಮಾಡಿ ನೋಡಿದಾಗ ನ್ಯಾಮತಿ ದರೋಡೆ ಪ್ರಕರಣಕ್ಕೆ ಹೋಲುವ ಹಾಗೂ ಅವಶ್ಯವಿರುವ ಕೆಲವು ಪ್ರಮುಖ ಅಂಶಗಳು ಬೆಳಕಿಗೆ ಬಂದಿದೆ. ಮಾಹಿತಿಯನ್ನು ಆಳವಾಗಿ ತನಿಖೆಗೆ ಒಳಪಡಿಸಿದಾಗ ನ್ಯಾಮತಿ ಎಸ್‌ಬಿಐ ಬ್ಯಾಂಕ್ ಗೆ ಸಂಬಂಧಿಸಿದ ಆರೋಪಿಗಳ ಬಗ್ಗೆ ಮಹತ್ವದ ಸುಳಿವು ದೊರೆತಿದ್ದು ಈ ಸುಳಿವಿನ ಆಧಾರದ ಮೇಲೆ ಪೊಲೀಸರು 6 ಜನರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ತಮಿಳುನಾಡು ಹಾಗೂ ನ್ಯಾಮತಿ ಮೂಲದವರಾಗಿದ್ದಾರೆ. ವಿಜಯಕುಮಾರ್ 30 ವರ್ಷ, ಸಿಹಿ ತಿಂಡಿ ವ್ಯಾಪಾರಿ, ಸುರಹೊನ್ನೆ ಶಾಂತಿನಗರ, ಮೂಲತಃ ಮಧುರೈ ನಿವಾಸಿ.. ಅಜಯಕುಮಾರ್ 28 ವರ್ಷ, ಸಿಹಿ ತಿಂಡಿ ವ್ಯಾಪಾರಿ ಸುರಹೊನ್ನೆ ಶಾಂತಿನಗರ, ವಿಜಯ್ ಅವರ ಸಹೋದರ, ಅಭಿಷೇಕ 23 ವರ್ಷ, ಪೇಂಟಿಂಗ್ ಕೆಲಸ, ಬೆಳಗುತ್ತಿ ಕ್ರಾಸ್ ಶಾಂತಿನಗರ ಶಾಲೆಯ ಎದುರು, ನ್ಯಾಮತಿ, ಚಂದ್ರು 23 ವರ್ಷ, ತೆಂಗಿನಕಾಯಿ ವ್ಯಾಪಾರಿ, ಸುರಹೊನ್ನೆ, ಮಂಜುನಾಥ್ 32 ವರ್ಷ, ಚಾಲಕ, ಹಾಗೂ ಪರಮಾನಂದ 30 ವರ್ಷ, ಸಿಹಿ ತಿಂಡಿ ವ್ಯಾಪಾರಿ, ಸುರಹೊನ್ನೆ ಶಾಂತಿನಗರ, ನ್ಯಾಮತಿ, ನಿವಾಸಿಗಳಾಗಿದ್ದಾರೆ. ಬಂಧಿತ ಆರೋಪಿಗಳಿಂದ 17.01 ಕೆಜಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಬ್ಯಾಂಕ್‌ನಲ್ಲಿ ಸಾಲ ಕೊಡಲಿಲ್ಲ ಎಂಬ ಸೇಡಿಗೆ ಕಳ್ಳತನ ಮಾಡಿದ ಆರೋಪಿ
ಆರೋಪಿಗಳನ್ನು ಬಂಧಿಸಿ ವಿಚಾರಣೆಯನ್ನು ನಡೆಸುತ್ತಿರುವಾಗ ಪ್ರಕರಣದ ಪ್ರಮುಖ ಆರೋಪಿಯಾದ ವಿಜಯ್ ಕುಮಾರ್ ನೀಡಿದ ಹೇಳಿಕೆಗೆ ಪೊಲೀಸರು ಬೆರಗಾಗಿದ್ದಾರೆ. ವಿಜಯ್ ಕುಮಾರ್ ನ್ಯಾಮತಿ ಪಟ್ಟಣದಲ್ಲಿ ವಿಐಪಿ ಸ್ನಾಕ್ಸ್ ಹೆಸರಿನ ಬೇಕರಿ ಮತ್ತು ಸ್ವೀಟ್ಸ್ ಅಂಗಡಿಯನ್ನು ನಡೆಸುತ್ತಿದ್ದ,.ಆ ಅಂಗಡಿಲ್ಲಿ ಲಾಭ ಹೆಚ್ಚಾಗಿ ಇಲ್ಲದ ಕಾರಣ ಅದನ್ನು ಅಭಿವೃದ್ದಿ ಪಡಿಸಲು ನ್ಯಾಮತಿಯ ಎಸ್‌ಬಿಐ ಬ್ಯಾಂಕ್‌ಗೆ 15 ಲಕ್ಷ ರೂಪಾಯಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದ. ಆದರೆ ಆತನ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದ ಕಾರಣ ಆತನಿಗೆ ಸಾಲ ನೀಡಲು ಬ್ಯಾಂಕ್ ನಿರಾಕರಿಸಿತ್ತು. ಹಾಗೆಯೇ ಆರೋಪಿ ವಿಜಯ್ ಹೇಳಿದಂತೆ ಬ್ಯಾಂಕ್‌ನವರು ಆತನಿಗೆ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ. ಇದರಿಂದ ಕೋಪಗೊಂಡ ವಿಜಯ್ ಬ್ಯಾಂಕ್‌ನವರ ಮೇಲೆ ದ್ವೇಷವನ್ನು ಬೆಳೆಸಿಕೊಂಡಿದ್ದ. ಯೂಟ್ಯೂಬ್‌ನಲ್ಲಿ ಹಾಗೂ ವಿವಿಧ ಓಟಿಪಿ ಆನ್ಲೈನ್ ಪ್ಲಾಟ್ಫಾರ್ಮ್ ಗಳಲ್ಲಿ ಬ್ಯಾಂಕ್ ದರೋಡೆ, ಬ್ಯಾಂಕ್ ರಾಬರಿ ಹಾಗೂ ಬ್ಯಾಂಕ್ ಕಳ್ಳತನಕ್ಕೆ ಸಂಭಂದಿಸಿದಂತೆ ಮನಿಹೀಸ್ಟ್ ಹಾಗೂ ಮುಂತಾದ ಅನೇಕ ಸರಣಿ ವಿಡಿಯೋಗಳನ್ನು ಸುಮಾರು 6 ತಿಂಗಳು ಕಾಲ ಬ್ಯಾಂಕ್ ಕಳ್ಳತನ ಮಾಡಲು ಬೇಕಾಗುವಂತಹ ಎಲ್ಲಾ ಮಾಹಿತಿಗಳನ್ನು ಕಲೆ ಹಾಕಿದ್ದ. ನಂತರ ಕಳ್ಳತನಕ್ಕೆ ಬೇಕಾದ ವಿವಿಧ ಸಲಕರಣೆಗಳನ್ನು ಶಿವಮೊಗ್ಗದಿಂದ ಹಾಗೂ ನ್ಯಾಮತಿ ಪಟ್ಟಣದಿಂದ ತಂದು ಸಂಗ್ರಹಿಸುತ್ತಾನೆ. ನಂತರ ಈ ಕಳ್ಳತನಕ್ಕೆ ಸಂಬಂದಿಸಿದಂತೆ ತನ್ನ ಇತರ ಸ್ನೇಹಿತರಿಗೆ ತಿಳಿಸಿ ಕಳ್ಳತನ ಮಾಡಲು ಮುಂದಾಗಿದ್ದಾನೆ.
ಕದ್ದ ಬಂಗಾರವನ್ನು ಪಾಳು ಬಾವಿಯಲ್ಲಿ ಬಚ್ಚಿಟ್ಟ ಕಳ್ಳರು
ಬ್ಯಾಂಕ್ ದರೋಡೆ ಮಾಡಿ ನಂತರ ಕದ್ದು ತಂದ ಚಿನ್ನವನ್ನು ವಿಜಯಕುಮಾರನು ತನ್ನ ಮನೆಯಲ್ಲಿದ್ದ ಸಿಲ್ವರ್ ಕಲರ್ ಡಸ್ಟರ್ ಕಾರಿನ ಡಿಕ್ಕಿಯಲ್ಲಿ ಬಚ್ಚಿಟ್ಟಿದ್ದಾನೆ. ನಂತರ ಅದನ್ನು ಯಾವ ರೀತಿಯಲ್ಲಿ ವಿಲೇವಾರಿ ಮಾಡಬೇಕೆಂದು ಪ್ರತ್ಯೇಕವಾಗಿ ಪ್ಲಾನ್ ಮಾಡುತ್ತಾನೆ. ಕಳ್ಳತನಕ್ಕೆ ಸಂಭಂದಿಸಿದ ಯಾವುದೇ ಕುರುಹು ಸಿಗಬಾರದು ಎಂಬ ಕಾರಣಕ್ಕೆ ಕೃತ್ಯಕ್ಕೆ ಬಳಸಿದ ವಸ್ತುಗಳಾದ ಮಂಕಿ ಕ್ಯಾಪ್, ಹ್ಯಾಂಡ್ ಗ್ಲೌಸ್‌ಗಳನ್ನು ನಾಶಪಡಿಸಿದ್ದು, ಇನ್ನುಳಿದ ಹೈಡ್ರಾಲಿಕ್ ಕಟ್‌ರ್, ಗ್ಯಾಸ್ ಸಿಲೆಂಡರ್ ಇತರ ವಸ್ತುಗಳನ್ನು ಸವಳಂಗ ಕೆರೆಗೆ ಎಸೆದಿದ್ದಾನೆ. ಅಷ್ಟೇ ಅಲ್ಲದೆ ಎಸ್.ಬಿ.ಐ. ಬ್ಯಾಂಕ್ ನಿಂದ ತಂದಿದ್ದ ಹಾರ್ಡ್ ಡಿಸ್ಕ್, ಡಿವಿಆರ್‌ನ್ನು ಮೊದಲು ಕಲ್ಲಿನಿಂದ ಜಜ್ಜಿ ಹಾಳು ಮಾಡಿ ನಂತರ ಕೆರೆಗೆ ಎಸೆದಿದ್ದಾನೆ. ನಂತರ ನವೆಂಬರ್ ಮೊದಲನೆ ವಾರದಲ್ಲಿ ವಿಜಯ ತನ್ನ ಸ್ವಂತ ಊರಾದ ತಮಿಳುನಾಡಿನ ಮಧುರೈ ನ ಮನೆಗೆ ಒಬ್ಬನೇ ತನ್ನ ಡಸ್ಟರ್ ಕಾರಿನಲ್ಲಿ ತಲುಪಿ, ಮನೆಯು ಊರಿನ ಹೊರಗಡೆ ನಿರ್ಜನ ಪ್ರದೇಶದಲ್ಲಿದ್ದ 30 ಅಡಿಯ ಬಾವಿಯಲ್ಲಿ ಒಂದು ಸಣ್ಣ ಲಾಕರ್‌ಗೆ ಚಿನ್ನವನ್ನು ತುಂಬಿ ಅದಕ್ಕೆ ಹಗ್ಗ ಕಟ್ಟಿ ಆ ಬಾವಿಯಲ್ಲಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ಬಚ್ಚಿಟ್ಟಿರುತ್ತಾನೆ. ಈ ವಿಷಯವನ್ನು ಯಾರಿಗೂ ಹೇಳಿರುವುದಿಲ್ಲ. ನಂತರ ಆ ಚಿನ್ನದಲ್ಲಿ ಸ್ವಲ್ಪ ಭಾಗ ತೆಗೆದುಕೊಂಡು ಬ್ಯಾಂಕ್‌ಗಳಲ್ಲಿ ಮತ್ತು ಚಿನ್ನದ ಅಂಗಡಿಗಳಲ್ಲಿ ಅವನ ಹಾಗೂ ಅವನ ಸಂಬಂಧಿಕರ ಹೆಸರಿನಲ್ಲಿ ಅಡವಿಟ್ಟು ಹಣವನ್ನು ಪಡೆಯುತ್ತಾನೆ. ಆ ಹಣದಿಂದ ಸ್ವಲ್ಪ ಹಣವನ್ನು ಅಭಿ, ಚಂದ್ರು, ಹಾಗೂ ಮಂಜುಗೆ ತಲಾ 1 ಲಕ್ಷ ತಂದುಕೊಟ್ಟು ಉಳಿದ ಹಣದಲ್ಲಿ ಊರಿನಲ್ಲಿ ಒಂದು ದೊಡ್ಡ ಮನೆ ಕಟ್ಟಿಸಿದ್ದು, ಕೆಲವು ನಿವೇಶನಗಳನ್ನು ಖರೀದಿ ಮಾಡಿದ್ದಾನೆ. ಉಳಿದ ಚಿನ್ನವನ್ನು ಪೊಲೀಸರು ಆ ಪ್ರಕರಣದ ತನಿಖೆ ಅಥವಾ ವಿಚಾರಣೆಯನ್ನು ನಿಲ್ಲಿಸಿದಾಗ 3 ವರ್ಷಗಳ ವರೆಗೆ ತೆಗೆಯಬಾರದೆಂದು ಯೋಚಿಸಿದ್ದಾನೆ ಎಂದು ತಿಳಿದು ಬಂದಿದೆ.
SUMMARY | In October, a gang of thieves had stolen 17.01 kg of gold pledged by customers from SBI Bank in Davanagere.
KEYWORDS | thieves, Davanagere, gold pledged,