ಭದ್ರಾವತಿ: ಭದ್ರಾವತಿ ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾಗಿದ್ದ 19 ವರ್ಷದ ಯುವತಿಯೊಬ್ಬಳು ಎರೆಹಳ್ಳಿ ಬಳಿಯ ಭದ್ರಾ ಬಲದಂಡೆ ನಾಲೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಇತ್ತ ಯುವತಿಯ ಪ್ರೇಮಿ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಮೃತ ಯುವತಿಯನ್ನು ಸ್ವಾತಿ ಎಂದು ಗುರುತಿಸಲಾಗಿದೆ.
ಘಟನೆ ವಿವರ :
ಭದ್ರಾವತಿ ತಾಲ್ಲೂಕಿನ ಎರೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋವಿ ಕಾಲೋನಿಯಲ್ಲಿ ವಾಸವಾಗಿದ್ದ ಸ್ವಾತಿ ಮತ್ತು ಸೂರ್ಯ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಯ ವಿಚಾರವು ಕುಟುಂಬಸ್ಥರಿಗೆ ತಿಳಿದ ನಂತರ, ಆರಂಭದಲ್ಲಿ ಬುದ್ದಿವಾದ ಹೇಳಲಾಗಿದೆ ಎನ್ನಲಾಗಿದೆ. ನಂತರ ಮದುವೆಗೆ ಒಪ್ಪಿಗೆ ಸೂಚಿಸಿದ್ದರೂ, ತಕ್ಷಣಕ್ಕೆ ಬೇಡ, ಮುಂದಿನ ವರ್ಷ ಮಾಡೋಣ ಎಂದು ತಿಳಿಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಸೂರ್ಯ ಮುಂದಿನ ವರ್ಷದವರೆಗೆ ಕಾಯಲು ಸಿದ್ಧರಿರಲಿಲ್ಲ ಎನ್ನಲಾಗುತ್ತಿದೆ.
ಸೆಪ್ಟೆಂಬರ್ 21, 2025ರಂದು ಸೂರ್ಯ ಮತ್ತು ಸ್ವಾತಿ ಉಕ್ಕುಂದ ಸೇತುವೆ ಬಳಿಯ ಭದ್ರಾ ಬಲದಂಡೆ ನಾಲೆಯ ಬಳಿ ಬಂದಿದ್ದಾರೆ. ಅಲ್ಲಿ ಇಬ್ಬರ ನಡುವೆ ನಡೆದ ಮಾತುಕತೆಯ ವೇಳೆ ಇಬ್ಬರ ನಡುವೆ ಏನಾಯ್ತು ಎಂಬುದು ಸ್ಪಷ್ಟವಿಲ್ಲ. ಈ ನಡುವೆ ಯುವತಿ ಸ್ವಾತಿ ದಿಕ್ಕು ತೋಚದೆ ನಾಲೆಗೆ ಬಿದ್ದಿದ್ದಾಳೆ. ಬಳಿಕ ಸೂರ್ಯ ಕೂಡ ನೀರಿಗೆ ಬಿದ್ದಿದ್ದಾನೆ. ಇದಕ್ಕೂ ಮೊದಲು ಇಬ್ಬರು ವಿಷ ಸೇವಿಸಿದ್ದರು ಎನ್ನಲಾಗಿದೆ. ಇನ್ನೂ ಯುವಕ ಚಾನಲ್ನಲ್ಲಿದ್ದ ಗಿಡಗಂಟಿಗಳನ್ನು ಹಿಡಿದು ಮೇಲಕ್ಕೆ ಬಂದಿದ್ದಾನೆ. ಪ್ರಸ್ತುತ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದಾನೆ.ಈ ಸಂಬಂಧ ಸ್ವಾತಿಯ ಪೋಷಕರು ಈ ಹಿಂದೆ ಹೊಸಮನೆ ಪೊಲೀಸ್ ಠಾಣೆಗೆ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದರು. ಇದೀಗ ಯುವತಿಯ ಶವ ಪತ್ತೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.