Shivamogga District Court ಆಸ್ತಿ ವಿವಾದ: ಮೂವರಿಗೆ 10 ವರ್ಷ ಜೈಲು, 2 ಲಕ್ಷ ದಂಡ ಕಾರಣವೇನು
ಶಿವಮೊಗ್ಗ: ಆಸ್ತಿ ವಿಚಾರದಲ್ಲಿ ವ್ಯಕ್ತಿಯೊಬ್ಬರಿಗೆ ಕಿರುಕುಳ ನೀಡಿ, ಅವರ ಆತ್ಮಹತ್ಯೆಗೆ ಕಾರಣರಾಗಿದ್ದ ಮೂವರು ಆರೋಪಿಗಳಿಗೆ ಶಿವಮೊಗ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತಲಾ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹2 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದೆ. ಶಿಕ್ಷೆಗೆ ಒಳಗಾದವರು ರಂಗಪ್ಪ, ಹನುಮಂತಪ್ಪ ಹಾಗೂ ಕಲೀ ರಂಗಪ್ಪ ಎಂದು ಗುರುತಿಸಲಾಗಿದೆ.
Shivamogga District Court ಪ್ರಕರಣದ ಹಿನ್ನೆಲೆ
2018ರಲ್ಲಿ ಭದ್ರಾವತಿ ತಾಲ್ಲೂಕಿನ ಗುಡುಮಗಟ್ಟೆಯ ನಿವಾಸಿ ಮಂಜಪ್ಪ ಎಂಬುವವರಿಗೆ ಇದೇ ಗ್ರಾಮದ ರಂಗಪ್ಪ, ಹನುಮಂತಪ್ಪ ಮತ್ತು ಕಲೀ ರಂಗಪ್ಪ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದ ಮಂಜಪ್ಪ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತರ ಪತ್ನಿ ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆಗಿನ ತನಿಖಾಧಿಕಾರಿ ಹೊಳೆಹೊನ್ನೂರು ಪೊಲೀಸ್ ಠಾಣೆಯ ಪಿಎಸ್‌ಐ ಸುರೇಶ್ ಅವರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಶಿವಮೊಗ್ಗದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ ಅವರು, ಆರೋಪಿತರಾದ ರಂಗಪ್ಪ, ಹನುಮಂತಪ್ಪ ಮತ್ತು ಕಲೀ ರಂಗಪ್ಪ ವಿರುದ್ಧದ ಆರೋಪಗಳು ದೃಢಪಟ್ಟ ಹಿನ್ನೆಲೆಯಲ್ಲಿ ಈ ಮಹತ್ವದ ಆದೇಶ ನೀಡಿದ್ದಾರೆ. ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ರತ್ನಮ್ಮ ಪಿ. ಅವರು ವಾದ ಮಂಡಿಸಿದ್ದರು.