Operation Mahadev ಪಹಲ್ಗಾಮ್ ಉಗ್ರರ ಹತ್ಯೆ : ಶಿವಮೊಗ್ಗದ ಮಂಜುನಾಥ್ ಕುಟುಂಬಸ್ಥರು ಹೇಳಿದ್ದೇನು
ಶಿವಮೊಗ್ಗ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರ ಹತ್ಯೆಗೆ ಕಾರಣರಾದ ಉಗ್ರರನ್ನು ಭಾರತೀಯ ಸೇನೆಯು ‘ಆಪರೇಷನ್ ಮಹಾದೇವ’ ಕಾರ್ಯಾಚರಣೆಯ ಮೂಲಕ ಹೊಡೆದುರುಳಿಸಿದೆ. ಈ ಹಿನ್ನೆಲೆಯಲ್ಲಿ, ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗದ ಮಂಜುನಾಥ್ ಅವರ ಕುಟುಂಬಸ್ಥರಾದ ಡಾ. ರವಿ ಕಿರಣ್ ಅವರು ಕೇಂದ್ರ ಸರ್ಕಾರ ಮತ್ತು ಭಾರತೀಯ ಸೇನೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
operation mahadev ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ರವಿ ಕಿರಣ್, ಪಹಲ್ಗಾಮ್ ದಾಳಿಯ ರೂವಾರಿಗಳನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಿದರು. “ಉಗ್ರರ ವಿರುದ್ಧ ಮತ್ತೊಮ್ಮೆ ಭಾರತೀಯ ಸೇನೆ ಮತ್ತು ಕೇಂದ್ರ ಸರ್ಕಾರ ಪ್ರತೀಕಾರ ತೀರಿಸಿಕೊಂಡಿವೆ. 26 ಮೃತ ನಾಗರಿಕರ ಪರವಾಗಿ ಕೇಂದ್ರ ಸರ್ಕಾರ ಮತ್ತು ಭಾರತೀಯ ಸೇನೆಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದು ಅವರು ಹೇಳಿದರು.
ಕಳೆದ ಎರಡು ತಿಂಗಳಿಂದ ಕಾಡುತ್ತಿದ್ದ ಅನಿಶ್ಚಿತತೆ ಮತ್ತು ಆತಂಕ ಈಗ ಕೊನೆಗೊಂಡಿದೆ. “ನಾಗರಿಕರನ್ನು ಕೊಂದು ಉಗ್ರರು ಆರಾಮಾಗಿ ಓಡಾಡುತ್ತಿದ್ದಾರೆ ಎಂಬ ಭಾವನೆ ನಮ್ಮಲ್ಲಿತ್ತು. ಈ ಹತ್ಯೆಯ ಮೂಲಕ ಆ ಭಾವನೆ ಕೊನೆಯಾಯಿತು. ಪ್ರಧಾನಿ ಮೋದಿ ಅವರು ಈ ಕಾರ್ಯಾಚರಣೆಗೆ ‘ಆಪರೇಷನ್ ಮಹಾದೇವ’ ಎಂಬ ಉತ್ತಮ ಹೆಸರನ್ನು ನೀಡಿ, ಹೆಸರಿಗೆ ತಕ್ಕಂತೆ ಉಗ್ರರಿಗೆ ಶಿಕ್ಷೆಯನ್ನು ನೀಡಿದ್ದಾರೆ. ಕೇಂದ್ರ ಸರ್ಕಾರ ಮತ್ತು ಸೇನೆಯ ಈ ಕೆಲಸ ನಮ್ಮ ಮನಸ್ಸಿಗೆ ಖುಷಿ ತಂದಿದೆ” ಎಂದು ಅವರು ತಿಳಿಸಿದರು.
ಮಂಜುನಾಥ್ ಅವರ ಪತ್ನಿ ಮತ್ತು ಕುಟುಂಬಸ್ಥರು ಇನ್ನು ಆ ಆಘಾತದಿಂದ ಸಂಪೂರ್ಣವಾಗಿ ಹೊರಬಂದಿಲ್ಲವಾದರೂ, ಈ ವಿಚಾರ ತಿಳಿದ ನಂತರ ಅವರ ಕುಟುಂಬಕ್ಕೆ ಸಮಾಧಾನವಾಗಿದೆ ಎಂದು ಡಾ. ರವಿ ಕಿರಣ್ ನುಡಿದರು. ಮೃತರ ಕುಟುಂಬದ ಒಬ್ಬ ಸದಸ್ಯನಾಗಿ, ಕೇಂದ್ರ ಸರ್ಕಾರ ಅತ್ಯುತ್ತಮ ಕೆಲಸ ಮಾಡಿದೆ ಎಂದು ಅವರು ಶ್ಲಾಘಿಸಿದರು.
