Old electricity poles : ಹಳೆಯ ವಿದ್ಯುತ್ ಕಂಬ ತೆರವಿಗೆ ಒತ್ತಾಯ: ಜಿಲ್ಲಾಧಿಕಾರಿಗೆ ಮನವಿ
Old electricity poles ಶಿವಮೊಗ್ಗ: ನಗರದ ಹಳೆಯ ವಿದ್ಯುತ್ ಕಂಬಗಳು ಮತ್ತು ಓವರ್‌ಹೆಡ್ ವಿದ್ಯುತ್ ಮಾರ್ಗಗಳನ್ನು ಕೂಡಲೇ ತೆಗೆದುಹಾಕುವಂತೆ ಒತ್ತಾಯಿಸಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಸದಸ್ಯರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕೇಂದ್ರ ಸರ್ಕಾರದ 80 ಕೋಟಿ ರೂ. ಮತ್ತು ಸ್ಮಾರ್ಟ್ ಸಿಟಿಯ 200 ಕೋಟಿ ರೂ. ಅನುದಾನದಲ್ಲಿ ಶಿವಮೊಗ್ಗದಲ್ಲಿ ನೆಲದಡಿಯಲ್ಲಿ ವಿದ್ಯುತ್ ಕೇಬಲ್ ಅಳವಡಿಸುವ ಕಾಮಗಾರಿ ಮುಗಿದು ನಾಲ್ಕೈದು ವರ್ಷಗಳು ಕಳೆದಿದ್ದರೂ, ಹಳೆಯ ವಿದ್ಯುತ್ ಕಂಬಗಳನ್ನು ಮತ್ತು ಓವರ್‌ಹೆಡ್ ವೈರ್‌ಗಳನ್ನು ತೆರವುಗೊಳಿಸಿಲ್ಲ ಎಂದು ಒಕ್ಕೂಟದ ಸದಸ್ಯರು ಆರೋಪಿಸಿದ್ದಾರೆ.
ಈ ಕುರಿತು ಮೆಸ್ಕಾಂಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಪಾಲಿಕೆಯವರು ಮೊದಲು ರಸ್ತೆ ದೀಪಗಳನ್ನು ಅಳವಡಿಸಲಿ, ನಂತರ ನಾವು ಕಂಬಗಳನ್ನು ತೆಗೆಯುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷ ಎಸ್.ಆರ್. ಗೋಪಾಲ್ ತಿಳಿಸಿದರು.
ಈ ಗೊಂದಲ ನಿವಾರಿಸಲು ಸಂಸದರು ಮತ್ತು ಶಾಸಕರ ನೇತೃತ್ವದಲ್ಲಿ ಪಾಲಿಕೆ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.