NR Pura Taluk ಆನೆ ದಾಳಿ ಸಾವು, ಪ್ರತಿಭಟನೆಗೆ ಮಣಿದ ಸರ್ಕಾರ, ಆನೆ ಸೆರೆ ಕಾರ್ಯಾಚರಣೆ ಆರಂಭ
NR Pura Taluk ಚಿಕ್ಕಮಗಳೂರು, ಎನ್.ಆರ್.ಪುರ ತಾಲ್ಲೂಕು: ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಬಾಳೆಹೊನ್ನೂರಿನಲ್ಲಿ ನಡೆದ ಆನೆ ದಾಳಿಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ಮತ್ತು ವಿವಿಧ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ರಾಜ್ಯ ಸರ್ಕಾರ ಕೊನೆಗೂ ಮಣಿದಿದೆ.
ಮೃತದೇಹವನ್ನಿಟ್ಟುಕೊಂಡು ಬಾಳೆಹೊನ್ನೂರು ಅರಣ್ಯ ವಲಯ ಕಚೇರಿ ಎದುರು ನೂರಾರು ಮಂದಿ ಪ್ರತಿಭಟನೆ ನಡೆಸಿ, ಚಿಕ್ಕಮಗಳೂರು-ಶೃಂಗೇರಿ ರಾಜ್ಯ ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡಿದರು. ಅರಣ್ಯ ಸಚಿವ ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಮತ್ತು ಸಂಸದರು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದರು.
ರೈತರ ಪ್ರತಿಭಟನೆಗೆ ಮಣಿದ ಸರ್ಕಾರ


ಪ್ರತಿಭಟನೆಯ ಕಾವು ಹೆಚ್ಚುತ್ತಿದ್ದಂತೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಕೂಡಲೇ ಆನೆ ಸೆರೆಗೆ ಮುಂದಾಗಿದೆ. ರೈತರ ಪ್ರತಿಭಟನೆ ಮುಗಿಯುವ ಮೊದಲೇ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಿಂದ ಬಾಲಣ್ಣ, ಬಹದ್ದೂರು, ಸೋಮಣ್ಣ ಮತ್ತು ಸಾಗರ್ ಎಂಬ ನಾಲ್ಕು ಕುಮ್ಕಿ ಆನೆಗಳನ್ನು ಬಾಳೆಹೊನ್ನೂರಿಗೆ ಸಾಗಿಸಲಾಗಿದೆ.
ಸ್ಥಳದಲ್ಲಿದ್ದ ಅಧಿಕಾರಿಗಳು, ತಕ್ಷಣವೇ ಆನೆ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸುತ್ತೇವೆ ಎಂದು ರೈತರಿಗೆ ಭರವಸೆ ನೀಡಿದರು. ಅದರಂತೆ, ಇಂದು ಮಧ್ಯಾಹ್ನದಿಂದಲೇ ಬಾಳೆಹೊನ್ನೂರಿನಲ್ಲಿ ಆನೆ ಸೆರೆ ಕಾರ್ಯಾಚರಣೆ ಆರಂಭಗೊಂಡಿದೆ. ರೈತರ ಕಷ್ಟಕ್ಕೆ ಸರ್ಕಾರ ಇಷ್ಟೊಂದು ವೇಗವಾಗಿ ಸ್ಪಂದಿಸಿದ್ದು ಇದೇ ಮೊದಲು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಆನೆ ಸೆರೆ ಹಿಡಿಯುವ ಕಾರ್ಯಾಚರಣೆಗಾಗಿ ಕೊಡಗು, ಮೈಸೂರು ಮತ್ತು ಶಿವಮೊಗ್ಗದಿಂದ ವಿಶೇಷ ವೈದ್ಯರ ತಂಡಗಳು ಆಗಮಿಸಿವೆ. ಅರಣ್ಯ ಇಲಾಖೆ ಮತ್ತು ಇ.ಟಿ.ಎಫ್. (ಎಲಿಫೆಂಟ್ ಟಾಸ್ಕ್ ಫೋರ್ಸ್) ಸಿಬ್ಬಂದಿ ಸಹ ಕಾರ್ಯಾಚರಣೆಗೆ ಸನ್ನದ್ಧರಾಗಿದ್ದಾರೆ. ಆನೆ ಹಾವಳಿಯಿಂದ ತತ್ತರಿಸಿದ್ದ ಸ್ಥಳೀಯ ರೈತರು, ಸರ್ಕಾರದ ಈ ತಕ್ಷಣದ ಕ್ರಮದಿಂದ ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ.
