ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 13, 2025 : ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ವಹಣೆಯನ್ನು ರಾಜ್ಯ ಸರ್ಕಾರಕ್ಕೆ ವಹಿಸಿದ್ದು, ತಮ್ಮ ಒಂದು ದೊಡ್ಡ ತಪ್ಪು ಎಂದು ಸಂಸದ ಬಿ.ವೈ.ರಾಘವೇಂದ್ರ ವಿಷಾದ ವ್ಯಕ್ತಪಡಿಸಿದ್ದಾರೆ. ನಿನ್ನೆ ಶಿವಮೊಗ್ಗದಲ್ಲಿ ಇಳಿಯಬೇಕಿದ್ದ ವಿಮಾನವು ಪ್ರತಿಕೂಲ ಹವಾಮಾನದಿಂದಾಗಿ ಹುಬ್ಬಳ್ಳಿಗೆ ತೆರಳಿದ್ದರಿಂದ, ತಾವು ರಸ್ತೆ ಮೂಲಕ ಪ್ರಯಾಣಿಸಬೇಕಾಯಿತು. ಈ ಘಟನೆ ಬಗ್ಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಊರಿನಲ್ಲಿ ವಿಮಾನ ನಿಲ್ದಾಣವಿದ್ದರೂ ಇಂತಹ ಪರಿಸ್ಥಿತಿ ಬಂದಿರುವುದು ಬೇಸರ ತಂದಿದೆ ಎಂದಿದ್ದಾರೆ.

ನಮ್ಮ ತಂದೆ ಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ವಹಣೆಯನ್ನು ರಾಜ್ಯ ಸರ್ಕಾರಕ್ಕೆ ಒಪ್ಪಿಸಿದ್ದರು. ಹಾಗೆ ನಿರ್ವಹಣೆ ರಾಜ್ಯಸರ್ಕಾರಕ್ಕೆ ಒಪ್ಪಿಸಿದ್ದು ನನ್ನ ದೊಡ್ಡ ತಪ್ಪು ಎಂದು ಈಗ ಅನಿಸುತ್ತಿದೆ. ಭಾರತೀಯ ವಿಮಾನಯಾನ ಪ್ರಾಧಿಕಾರ (AAI) ನಿರ್ವಹಣೆ ವಹಿಸಿದ್ದರೆ, ಎಲ್ಲಾ ಕಾರ್ಯಗಳು ಸುಗಮವಾಗಿ ನಡೆಯುತ್ತಿದ್ದವು ಎಂದು ಅವರು ಅಭಿಪ್ರಾಯಪಟ್ಟರು.

ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್‌ಗಾಗಿ ಅಗತ್ಯ ಉಪಕರಣಗಳನ್ನು ತಂದು ಮೂರು ತಿಂಗಳಾಗಿದ್ದರೂ, ಅವುಗಳ ಅಳವಡಿಕೆಗೆ ಇನ್ನೂ ಕೆಲಸ ಆರಂಭವಾಗಿಲ್ಲ. ಈ ಕಾಮಗಾರಿಗೆ 2 ರಿಂದ 3 ಕೋಟಿ ರೂಪಾಯಿ ಅಗತ್ಯವಿದೆ. ಆದರೆ, ಸರ್ಕಾರ ಟೆಂಡರ್ ಕರೆಯಲು ವಿಳಂಬ ಮಾಡುತ್ತಿದೆ. ಇದರ ಬದಲಾಗಿ ನಿರ್ಮಿತಿ ಕೇಂದ್ರಕ್ಕೆ ವಹಿಸಿದ್ದರೆ ಟೆಂಡರ್ ಪ್ರಕ್ರಿಯೆ ಇಲ್ಲದೆ ಕೆಲಸ ಪೂರ್ಣಗೊಳಿಸಬಹುದಿತ್ತು ಎಂದ ಸಂಸದರು ಸರ್ಕಾರವು ಕೂಡಲೇ ನೈಟ್ ಲ್ಯಾಂಡಿಂಗ್‌ಗಾಗಿ ಉಪಕರಣಗಳನ್ನು ಅಳವಡಿಸಬೇಕು. ನಂತರ ದೆಹಲಿಯಲ್ಲಿ ಚರ್ಚಿಸಿ ಹೆಚ್ಚಿನ ವಿಮಾನಗಳನ್ನು ತರಲು ಪ್ರಯತ್ನಿಸುತ್ತೇನೆ. ಇಲ್ಲವಾದರೆ, ಮೋಡ ಕವಿದ ವಾತಾವರಣ ಇರುವ ಸಂದರ್ಭಗಳಲ್ಲಿ ಅನೇಕ ವಿಮಾನಗಳು ರದ್ದಾಗುತ್ತವೆ ಎಂದು ಸಂಸದರು ಎಚ್ಚರಿಕೆ ನೀಡಿದರು.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
