Jp story ಶಿವಮೊಗ್ಗ: ಭೌಗೋಳಿಕವಾಗಿ ಅರಣ್ಯ ಮತ್ತು ಹಿನ್ನೀರಿನ ಪ್ರದೇಶಗಳನ್ನು ಒಳಗೊಂಡಿರುವ ಶಿವಮೊಗ್ಗ ಜಿಲ್ಲೆಯು, ಐದು ಅಭಯಾರಣ್ಯಗಳು ಮತ್ತು ಐದಕ್ಕೂ ಹೆಚ್ಚು ಅಣೆಕಟ್ಟುಗಳನ್ನು ಹೊಂದಿರುವ ವನಸಿರಿಯ ಬೀಡಾಗಿದೆ. ಭದ್ರಾ, ಶೆಟ್ಟಿಹಳ್ಳಿ, ಮೂಕಾಂಬಿಕಾ, ಸೋಮೇಶ್ವರ, ಶರಾವತಿ ಅಭಯಾರಣ್ಯಗಳು ಹಾಗೂ ಭದ್ರಾ ಟೈಗರ್ ರಿಸರ್ವ್ ಅರಣ್ಯ ಪ್ರದೇಶಗಳ ಒಡಲಲ್ಲಿ ನೂರಾರು ಸೌಂದರ್ಯವುಳ್ಳ ತಾಣಗಳಿವೆ. ಆದರೆ, ಈ ತಾಣಗಳಿಗೆ ಅರಣ್ಯ ಇಲಾಖೆ ನಿರ್ಬಂಧ ವಿಧಿಸಿದೆ. ಈ ನಿರ್ಬಂಧದ ನಡುವೆಯೂ ಪ್ರವಾಸಿಗರು ಅಪಾಯಕಾರಿ ಸಾಹಸ ಮಾಡಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಇತ್ತೀಚಿನ ಉದಾಹರಣೆ, ಯಡೂರಿನ ಅಬ್ಬಿ ಫಾಲ್ಸ್‌ನಲ್ಲಿ ಜೀವ ಕಳೆದುಕೊಂಡ ಸೇಲಂ ಮೂಲದ ವ್ಯಕ್ತಿ.
Jp story ಹೇಳಿ ಕೇಳಿ ಈ ಪ್ರದೇಶ ನಿರ್ಬಂಧಿತವಾಗಿದ್ದರೂ, ತಮಿಳುನಾಡಿನಿಂದ ಬಂದ ಐವರು ಪ್ರವಾಸಿಗರು ಈ ಅಬ್ಬಿ ಜಲಪಾತಕ್ಕೆ ಹೋಗಿದ್ದಾರೆ ಎಂದರೆ ಆ ಜಲಪಾತದ ಆಕರ್ಷಣೆ ಎಷ್ಟಿರಬೇಡ! ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸೌಂದರ್ಯಭರಿತ ತಾಣಗಳನ್ನು ನೋಡಿ, ಆ ಸ್ಥಳಗಳಿಗೆ ಭೇಟಿ ನೀಡುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ಆಗುಂಬೆ ಸುತ್ತಮುತ್ತಲ ಪ್ರದೇಶ, ಯಡೂರು ಮಾಣಿ, ಮಾಸ್ತಿಕಟ್ಟೆ, ಅಬ್ಬಿ ಫಾಲ್ಸ್, ನಗರ ಸುತ್ತಮುತ್ತಲ ಪ್ರದೇಶ, ಚಕ್ರ ಸಾವೆಹಕ್ಲು, ಜೋಗದ ಪರಿಸರ, ಶರಾವತಿ ಕಣಿವೆ ಪ್ರದೇಶದ ಒಡಲಲ್ಲಿ ನೂರಾರು ಇಂತಹ ಸಣ್ಣ ಜಲಪಾತಗಳು ಮತ್ತು ಹಿನ್ನೀರಿನ ಪ್ರದೇಶಗಳಿವೆ. ಈ ಸೌಂದರ್ಯದ ಪರಿಸರ ಎಂತಹವರನ್ನೂ ಆಕರ್ಷಿಸುತ್ತದೆ. ಈ ಪ್ರದೇಶಗಳನ್ನು ಅರಣ್ಯ ಇಲಾಖೆ ‘ನಿರ್ಬಂಧಿತ ಪ್ರದೇಶ’ ಎಂದು ಪರಿಗಣಿಸಿ, ‘ಅತಿಕ್ರಮ ಪ್ರವೇಶ ಕಾನೂನು ಬಾಹಿರ’ ಎಂದು ಫಲಕಗಳನ್ನು ಹಾಕಿದ್ದರೂ, ಇಲಾಖೆಯ ಕಣ್ಣು ತಪ್ಪಿಸಿ ಹೋಗುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ.
Jp story ಚಿಕ್ಕಮಗಳೂರು, ಕೊಡಗು ಮಾದರಿ ಶಿವಮೊಗ್ಗದಲ್ಲಿ ಜಾರಿಯಾಗಬಾರದೇಕೆ?
ನೆರೆ ಜಿಲ್ಲೆಯಾದ ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಚಾರಣಕ್ಕೆ ಅವಕಾಶವಿದೆ. ಜಲಪಾತಗಳಿಗೆ ಪ್ರವೇಶವಿದೆ. ಕೊಡಗು ಜಿಲ್ಲೆಯಲ್ಲೂ ಕೂಡ ಅರಣ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಗಳ ಒಡಂಬಡಿಕೆಯಲ್ಲಿ ಅಪಾಯದ ಜಾಗಗಳು ಕೂಡ ಪ್ರವಾಸಿಗ ವೀಕ್ಷಣೆಗೆ ಮುಕ್ತವಾಗಿವೆ. ಅರಣ್ಯ ಇಲಾಖೆ ಪ್ರತಿ ಪ್ರವಾಸಿಗನಿಗೆ ನಿರ್ದಿಷ್ಟ ಶುಲ್ಕವನ್ನು ನಿಗದಿಪಡಿಸುತ್ತದೆ. ಆ ಪ್ರವಾಸಿಗರ ತಂಡಕ್ಕೆ ಸ್ಥಳೀಯ ನಿವಾಸಿಯೊಬ್ಬರನ್ನು ಗೈಡ್ ಆಗಿ ನೀಡಲಾಗುತ್ತದೆ. ಆ ಗೈಡ್ ಪ್ರವಾಸಿ ತಾಣವನ್ನು ತೋರಿಸಿ, ಪ್ರವಾಸಿಗರು ಎಲ್ಲಿ ಹೋಗಬೇಕು, ಎಲ್ಲಿ ಹೋಗಬಾರದು ಎಂಬಂತಹ ಅಪಾಯದ ಮುನ್ಸೂಚನೆಯನ್ನು ನೀಡುತ್ತಾನೆ. ನಂತರ ಸಂಜೆ ಕ್ಯಾಂಪ್‌ಗೆ ವಾಪಸ್ಸಾದಾಗ ಎಲ್ಲರೂ ಸುರಕ್ಷಿತವಾಗಿ ಹಿಂತಿರುಗಿದ ಬಗ್ಗೆ ಆತ ಹಿರಿಯ ಅಧಿಕಾರಿಗೆ ಮಾಹಿತಿ ನೀಡುತ್ತಾನೆ.


Jp story ಸ್ಥಳೀಯ ಗ್ರಾಮ ಪಂಚಾಯಿತಿ ಆರ್ಥಿಕ ಚೇತರಿಕೆ
ಪ್ರವಾಸಿಗರಿಂದ ಪಡೆಯುವ ಶುಲ್ಕದಲ್ಲಿ ಶೇಕಡಾ 70ರಷ್ಟು ಸ್ಥಳೀಯ ಗ್ರಾಮ ಪಂಚಾಯಿತಿಗೆ ನೀಡಲಾಗುತ್ತದೆ. ಅರಣ್ಯದಲ್ಲಿ ಚಾರಣ ಎಂದರೆ ಶುಲ್ಕ ದುಬಾರಿಯಾಗಿಯೇ ಇರುತ್ತದೆ. ಪ್ರವಾಸಿಗರಿಂದ ಬಂದ ಹಣವು ಗ್ರಾಮ ಪಂಚಾಯಿತಿಗೂ ವಿನಿಯೋಗವಾಗುವುದರಿಂದ, ಗ್ರಾಮದ ರಸ್ತೆ, ಚರಂಡಿ, ಮನೆಗಳ ಕಾಯಕಲ್ಪಕ್ಕೆ ಅನುಕೂಲವಾಗುತ್ತದೆ. ಗ್ರಾಮ ಪಂಚಾಯಿತಿ ಕೂಡ ಆರ್ಥಿಕವಾಗಿ ಏಳಿಗೆಯಾಗುತ್ತದೆ. ಈ ಪ್ರವಾಸಿ ತಾಣಗಳಿಂದ ಸ್ಥಳೀಯವಾಗಿ ಪ್ರವಾಸಿಗರನ್ನು ನೆಚ್ಚಿಕೊಂಡು ಅಂಗಡಿ-ಹೋಟೆಲ್‌ಗಳು ಸಹ ಪ್ರಾರಂಭವಾಗುತ್ತವೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುತ್ತದೆ.
ಅಪಾಯದ ಸ್ಥಳಗಳು ಎಂದು ನಿರ್ಬಂಧಿತ ಪ್ರದೇಶ ಮಾಡುವುದಕ್ಕಿಂತ ಮುಕ್ತ ಪ್ರವಾಸಕ್ಕೆ ಅವಕಾಶ ನೀಡುವುದರಿಂದ ಹಿಂದುಳಿದ ನಗರ, ಹೊಸನಗರ ಪ್ರದೇಶಗಳು ಆರ್ಥಿಕವಾಗಿ ಚೇತರಿಕೆ ಕಾಣುತ್ತವೆ. ನಗರ, ಹೊಸನಗರ, ಯಡೂರು, ಮಾಸ್ತಿಕಟ್ಟೆ ಅರಣ್ಯ ಪ್ರದೇಶಗಳು ಪ್ರವಾಸಕ್ಕೆ ಮುಕ್ತವಾಗಬೇಕೆಂಬ ಕೂಗು ಸ್ಥಳೀಯವಾಗಿ ದಶಕದಿಂದಲೂ ಕೇಳಿಬರುತ್ತಿದೆ. ಹೆಚ್ಚು ಮಳೆಯಾಗುವ ಪ್ರದೇಶದಲ್ಲಿ ಕೃಷಿ ಉತ್ಪತ್ತಿ ಕಡಿಮೆ. ಶರಾವತಿ ಹಿನ್ನೀರಿನಿಂದ ಆವರಿಸಿರುವ ಪ್ರದೇಶದಲ್ಲಿ ಯುವಕರಿಗೆ ಉದ್ಯೋಗ ಎಂಬುದು ಗಗನ ಕುಸುಮವಾಗಿದೆ. ಇಲ್ಲಿನ ಯುವಜನತೆ ಹೆಚ್ಚಾಗಿ ರಾಜಧಾನಿ ಬೆಂಗಳೂರಿಗೆ ಅವಲಂಬಿತರಾಗಿದ್ದಾರೆ.
ಇಲ್ಲಿನ ಪ್ರದೇಶಗಳನ್ನು ಪ್ರವಾಸಿತಾಣಗಳನ್ನಾಗಿ ಮಾಡದಿದ್ದರೂ, ಈ ನಿರ್ಬಂಧಿತ ಸ್ಥಳಗಳಲ್ಲಿ ಪ್ರವಾಸಿಗರು ಅಪಾಯಕಾರಿ ಸಾಹಸ ಮಾಡಲು ಹೋಗಿ ಪ್ರಾಣ ಕಳೆದುಕೊಳ್ಳುವುದು ತಪ್ಪುವುದಿಲ್ಲ. ನಗರ, ಹೊಸನಗರ ಅರಣ್ಯ ವ್ಯಾಪ್ತಿಯ ಪ್ರದೇಶಗಳನ್ನು ಪ್ರವಾಸಿತಾಣವಾಗಿಸುವತ್ತ ರಾಜ್ಯ ಸರ್ಕಾರ ಮನಸ್ಸು ಮಾಡಲಿ.
