Jp story : ಶಿವಮೊಗ್ಗ: ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾದ, ‘ಪರ್ವತಗಳ ಬಟ್ಟಲು’ ಎಂದು ಖ್ಯಾತಿ ಪಡೆದಿರುವ ಮಾಣಿ ಜಲಾಶಯ ಏಳು ವರ್ಷಗಳ ನಂತರ ಸಂಪೂರ್ಣವಾಗಿ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯದ ಮೂರು ಕ್ರೆಸ್ಟ್ ಗೇಟ್‌ಗಳಿಂದ 2063 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗಿದ್ದು, ತೀರ ಪ್ರದೇಶದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ರಾಜ್ಯದ ವಿದ್ಯುತ್ ಸಮಸ್ಯೆಯನ್ನು ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಈ ಡ್ಯಾಂ ಭರ್ತಿಯಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
Jp story : ಮಾಣಿ ಡ್ಯಾಂ ಅನ್ನು ‘ಪರ್ವತಗಳ ಬಟ್ಟಲು’ ಎಂದು ಕರೆಯುವುದೇಕೆ?
ಲಿಂಗನಮಕ್ಕಿ, ಮಾಣಿ ಮತ್ತು ಸೂಪಾ ಜಲಾಶಯಗಳಲ್ಲಿ ಮಾಣಿ ಅಣೆಕಟ್ಟು ವಿಶಿಷ್ಟವಾಗಿದೆ. ಕುಂದಾಪುರ ತಾಲೂಕಿನ ಹಾಲಾಡಿ ಬಳಿ ಅರಬ್ಬಿ ಸಮುದ್ರ ಸೇರುತ್ತಿದ್ದ ವರಾಹಿ ನದಿಗೆ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದಲ್ಲಿ, ಬೆಟ್ಟಗಳ ನಡುವೆ ಈ ಜಲಾಶಯವನ್ನು ಕಟ್ಟಲಾಗಿದೆ. ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕಿನ ಪಶ್ಚಿಮಘಟ್ಟ ಪ್ರದೇಶದ ಕಣಿವೆಗಳಲ್ಲಿರುವ ಒಟ್ಟು 11 ಗುಡ್ಡಗಳಿಗೆ ತಡೆಗೋಡೆಗಳನ್ನು ನಿರ್ಮಿಸಲಾಗಿದೆ. ಇವುಗಳನ್ನು ಸ್ಥಳೀಯವಾಗಿ ‘ಪಲ್ಲಣಕಟ್ಟೆ’ಗಳು ಎಂದು ಕರೆಯುತ್ತಾರೆ. ಎತ್ತರದ ಪ್ರದೇಶದಲ್ಲಿನ ಬೆಟ್ಟಗಳನ್ನು ಕೂಡಿಸಿ ನಿರ್ಮಿಸಿರುವುದರಿಂದ, ಮಾಣಿ ಡ್ಯಾಂಗೆ ‘ಪರ್ವತಗಳ ಮೇಲಿನ ಬಟ್ಟಲು’ ಎಂದು ಕರೆಯಲಾಗುತ್ತದೆ. ಜಲಾಶಯದೊಳಗೆ ವರಾಹಿ ನದಿ ಮುಳುಗಿ ಹೋಗಿದ್ದು, ಕಣಿವೆ ಸುತ್ತಮುತ್ತಲ ಮಳೆ ನೀರೇ ಇದರ ಮುಖ್ಯ ಆಧಾರವಾಗಿದೆ. ಹೀಗಾಗಿ, ಧಾರಾಕಾರ ಮಳೆ ಸುರಿದರೂ ಒಳಹರಿವು ಅಪರೂಪವಾಗಿ 10 ಸಾವಿರ ಕ್ಯೂಸೆಕ್ ದಾಟುತ್ತದೆ.
Jp story : ಏಳು ವರ್ಷಗಳ ನಂತರ ಮತ್ತೆ ತುಂಬಿದ ಮಾಣಿ ಡ್ಯಾಂ
31.13 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 29 ಟಿಎಂಸಿ ನೀರು ಸಂಗ್ರಹಗೊಂಡಿದೆ. ಗರಿಷ್ಠ 954.36 ಮೀಟರ್ ನೀರಿನ ಮಟ್ಟ ಹೊಂದಿರುವ ಮಾಣಿ ಡ್ಯಾಂನಲ್ಲಿ ಈ ಬಾರಿ 594.19 ಅಡಿ ನೀರು ಸಂಗ್ರಹಗೊಂಡಿದ್ದು, ಬಹುತೇಕ ಭರ್ತಿಯಾಗಿದೆ. ಡ್ಯಾಂನಲ್ಲಿ ಸಂಗ್ರಹಗೊಂಡ ನೀರನ್ನು ಬಳಸಿ ಅಣೆಕಟ್ಟೆ ವಿದ್ಯುದಾಗಾರದ ಬಳಿ 9 ಮೆಗಾವ್ಯಾಟ್ ಮತ್ತು ಉಡುಪಿ ತಾಲೂಕಿನ ಹೊಸಂಗಡಿ ಭೂಗರ್ಭ ವಿದ್ಯುದಾಗಾರದಲ್ಲಿ 460 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.
Jp story : ಐದನೇ ಬಾರಿಗೆ ಭರ್ತಿಯಾದ ಡ್ಯಾಂ
1978 ರಲ್ಲಿ ನಿರ್ಮಿಸಿದಾಗಿನಿಂದ, ಇದುವರೆಗೆ ಮಾಣಿ ಡ್ಯಾಂ ಕೇವಲ ಐದು ಬಾರಿ ಮಾತ್ರ ಸಂಪೂರ್ಣ ಭರ್ತಿಯಾಗಿದೆ. ಈ ಹಿಂದೆ 1994, 2006, 2007, 2013 ಮತ್ತು 2018ರಲ್ಲಿ ಜಲಾಶಯ ಭರ್ತಿಯಾಗಿತ್ತು. ಈ ಬಾರಿ ಜಲಾನಯನ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮಾಣಿ ಜಲಾಶಯ ಭರ್ತಿಯಾಗಿದೆ. ಈ ಮೂಲಕ ರಾಜ್ಯದ ವಿದ್ಯುತ್ ಸಮಸ್ಯೆಯನ್ನು ನೀಗಿಸಲು ಸಹಕಾರಿಯಾಗಿದೆ. ಜಲಾಶಯದ ವ್ಯಾಪ್ತಿಯಲ್ಲಿ ಇನ್ನಷ್ಟು ಮಳೆಯಾದರೆ, ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರಬಿಡಲು ಅಧಿಕಾರಿಗಳು ನಿರ್ಧರಿಸಿದ್ದು, ಈಗಾಗಲೇ ಮುನ್ನೆಚ್ಚರಿಕೆ ನೀಡಲಾಗಿದೆ.
ಸೆಪ್ಟೆಂಬರ್ 3 ರಂದು ಬೆಳಿಗ್ಗೆ ಮುಖ್ಯ ಅಭಿಯಂತರರಾದ ಮಾದೇಶ್ ಅವರು ಪೂಜೆಯಲ್ಲಿ ಪಾಲ್ಗೊಂಡು ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಮಹೇಶ್, ಪ್ರಕಾಶ್, ಶಿವಕುಮಾರ್, ಪ್ರದೀಪ್, ಬಾಲಕೃಷ್ಣ ಶಾಸ್ತ್ರಿ, ಲೋಹಿತ್ ಸೇರಿದಂತೆ ಅನೇಕ ಅಧಿಕಾರಿಗಳು, ನೌಕರರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು. ನಂತರ ಡ್ಯಾಂ ಗೇಟ್‌ಗಳನ್ನು ತೆರೆದು ನೀರನ್ನು ಪಿಕಪ್ ಅಣೆಕಟ್ಟೆಗೆ ಹರಿಸಲಾಯಿತು.
View this post on Instagram
