Footpath Encroachment shivamogga : ಶಿವಮೊಗ್ಗದಲ್ಲಿ ಫುಟ್‌ಪಾತ್ ತೆರವು ಕಾರ್ಯಾಚರಣೆ: ಬಡ ವ್ಯಾಪಾರಿಗಳ ಮೇಲೆ ಬ್ರಹ್ಮಾಸ್ತ್ರ, ಪ್ರತಿಷ್ಠಿತ ಆಸ್ಪತ್ರೆಗಳಿಗೆ ಮೌನವೇಕೆ
ಶಿವಮೊಗ್ಗ ಮಹಾನಗರ ಪಾಲಿಕೆಯ ಸಿಬ್ಬಂದಿಗಳು ನಗರದ ಹಲವೆಡೆ ಪುಟ್ ಬಾತ್ಗಳ ಮೇಲಿರುವ ಬೀದಿ ಬದಿ ವ್ಯಾಪಾರಿಗಳ ಅಂಗಡಿಗಳನ್ನು ತೆರವು ಗೊಳಿಸುತ್ತಿದ್ದಾರೆ. ಗಾಂಧಿ ಬಜಾರ್, ಬಿಹೆಚ್ ರೋಡ್ ಎನ್ಟಿ ರೋಡ್ಗಳಲ್ಲಿ ಇವತ್ತಿನಿಂದ ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಅಂಗಡಿ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಕೆಲವೊಂದು ಆಯ್ದ ಪ್ರದೇಶದಲ್ಲಿ ಮಾತ್ರ ಬಡಪಾಯಿಗಳ ಅಂಗಡಿಯನ್ನು ತೆರವುಗೊಳಿಸುತ್ತಿರುವ ಸಿಬ್ಬಂದಿಗಳು ನಗರದಲ್ಲಿರುವ ಕೆಲವು ಪ್ರತಿಷ್ಠಿತ ಆಸ್ಪತ್ರೆ ಸೇರಿದಂತೆ ಇನ್ನಿತರೇ ಬಾಗಗಳಲ್ಲಿ ಪಾರ್ಕಿಂಗ್ ಇಲ್ಲದೇ ಫುಟ್ಬಾತ್ ಮೇಲೆ ನಿಲ್ಲಿಸುವ ಗಾಡಿಗಳ ವಿಚಾರವಾಗಿ ಖಾಸಗಿ ಆಸ್ಪತ್ರೆಯ ಮಾಲೀಕರನ್ನು ಏಕೆ ಪ್ರಶ್ನಿಸುವುದಿಲ್ಲ ಎಂಬ ಅಭಿಪ್ರಾಯಗಳು ಇದೀಗ ಸಾರ್ವಜನಿವಾಗಿ ಕೇಳಿ ಬರುತ್ತಿವೆ..
Footpath Encroachment shivamogga : ಪ್ರತಿ ವರ್ಷವೂ ಪತ್ರಿಕೆಗಳಲ್ಲಿ ಫುಟ್‌ಪಾತ್ ತೆರವುಗೊಳಿಸುವ ಸುದ್ದಿ ಪ್ರಕಟವಾದಾಗ, ಮಹಾನಗರ ಪಾಲಿಕೆಯ ಸಿಬ್ಬಂದಿ ಸಣ್ಣಪುಟ್ಟ ಬೀದಿಬದಿ ವ್ಯಾಪಾರಿಗಳ ಮೇಲೆ “ಗುಬ್ಬಿ ಮೇಲೆ ಬ್ರಹ್ಮಾಸ್ತ್ರ” ಪ್ರಯೋಗಿಸಿದಂತೆ ದಬ್ಬಾಳಿಕೆ ನಡೆಸುತ್ತಾರೆ ಎಂದು ವ್ಯಾಪಾರಸ್ಥರು ಆರೋಪಿಸಿದ್ದಾರೆ. ಶಿವಮೊಗ್ಗದಲ್ಲಿರುವ ಕೆಲವು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳು ತಮ್ಮ ಆಸ್ಪತ್ರೆಯಲ್ಲಿ ವಾಹನ ಪಾರ್ಕಿಂಗ್‌ಗೆಂದು ಬಿಟ್ಟುಕೊಂಡಿದ್ದ ಜಾಗವನ್ನು ಈಗ ಸೆಲ್ಲರ್‌ಗಳನ್ನಾಗಿ ಪರಿವರ್ತಿಸಿಕೊಂಡಿವೆ. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಸಾರ್ವಜನಿಕರು ತಮ್ಮ ವಾಹನಗಳನ್ನು ನಿಲ್ಲಿಸಲು ಸ್ಥಳವಿಲ್ಲದೆ ಫುಟ್‌ಪಾತ್‌ಗಳ ಮೇಲೆ ನಿಲ್ಲಿಸುತ್ತಿದ್ದಾರೆ. ಇದು ಪಾದಚಾರಿಗಳ ಓಡಾಟಕ್ಕೆ ತೀವ್ರ ಸಮಸ್ಯೆಯನ್ನುಂಟು ಮಾಡುತ್ತಿದೆ.


Footpath Encroachment shivamogga : ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಪೊನ್ನುರಾಜ್, ಸೆಟ್‌ಬ್ಯಾಕ್ ಬಿಡದ ಮತ್ತು ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕೆಲವು ಕಟ್ಟಡಗಳು ಹಾಗೂ ಖಾಸಗಿ ಆಸ್ಪತ್ರೆಗಳ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದರು. ಇದಾದ ನಂತರ ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದ ಚಾರುಲತಾ ಸೋಮಲ್ ಆಸ್ಪತ್ರೆಗಳ ಸೆಲ್ಲರ್‌ಗಳನ್ನು ತೆರವುಗೊಳಿಸಿ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸುವಂತೆ ಖಡಕ್ ನಿರ್ದೇಶನ ನೀಡಿದ್ದರು. ಆ ಸಮಯದಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿತ್ತಾದರೂ, ಈಗ ಮತ್ತೆ ಅದೇ ಪರಿಸ್ಥಿತಿ ಮರುಕಳಿಸಿದೆ. ಆಸ್ಪತ್ರೆಗಳು ತಮ್ಮ ಸೆಲ್ಲರ್‌ಗಳನ್ನು ಮತ್ತೆ ಕ್ಲಿನಿಕಲ್ ವಿಭಾಗಗಳನ್ನಾಗಿ ಮಾಡಿಕೊಂಡಿವೆ. ಇದರಿಂದಾಗಿ ಆಸ್ಪತ್ರೆಗೆ ಬರುವವರು ಮಾತ್ರವಲ್ಲದೆ ಇತರ ಸಾರ್ವಜನಿಕರೂ ಸಹ ಫುಟ್‌ಪಾತ್‌ಗಳ ಮೇಲೆ ತಮ್ಮ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಅದಲ್ಲದೆ, ಕೆಲವು ಆಸ್ಪತ್ರೆಯ ಸಿಬ್ಬಂದಿಗಳು ತಮ್ಮ ವಾಹನ ನಿಲುಗಡೆಗೆ ಅನುಕೂಲವಾಗುವಂತೆ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ, ಸಾರ್ವಜನಿಕರ ಓಡಾಟಕ್ಕೆ ಮತ್ತು ವಾಹನ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ.
Footpath Encroachment shivamogga : ಈ ಹಿನ್ನೆಲೆಯಲ್ಲಿ, ಮಹಾನಗರ ಪಾಲಿಕೆಯ ಅಧಿಕಾರಿಗಳು ಆಯ್ದ ಕೆಲವು ಬಡ ಬೀದಿ ವ್ಯಾಪಾರಿಗಳ ಅಂಗಡಿಗಳನ್ನು ಮಾತ್ರ ತೆರವುಗೊಳಿಸುತ್ತಿರುವುದು ಯಾವ ನ್ಯಾಯ ಎಂದು ವ್ಯಾಪಾರಸ್ಥರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಈ ಹಿಂದೆ ಜಿಲ್ಲಾಧಿಕಾರಿಗಳಾಗಿದ್ದ ಪೊನ್ನುರಾಜ್ ಕಸ್ತೂರಬಾ ರಸ್ತೆಯಲ್ಲಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಜನರಿಗೆ ಅನುಕೂಲವಾಗುವಂತೆ ಮಥುರಾ ಪ್ಯಾರಡೈಸ್ ಎದುರಿನ ಕನ್ಸಿಸ್ಟೆನ್ಸಿ ರಸ್ತೆಯನ್ನು ಗುರುತಿಸಿದ್ದರು. ಆಸ್ಥಳದಲ್ಲಿ ರಾಜ್ಯದಲ್ಲಿಯೇ ಮಾದರಿಯಾದ ಫುಡ್ ಕೋರ್ಟ್ ಮಾಡಿ ವ್ಯಾಪಾರಸ್ಥರ ಜೀವನಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದರು.ಇಂದಿಗೂ ಪೊನ್ನುರಾಜ್ ಭಾವಚಿತ್ರವನ್ನು ಫುಡ್ ಕೋರ್ಟ್ನಲ್ಲಿ ಕಾಣಬಹುದಾಗಿದೆ.
ಅದೇ ರೀತಿ ಬೀದಿ ಬದಿ ವ್ಯಾಪಾರಸ್ಥರಿಗೆ ಮಹಾನಗರ ಪಾಲಿಕೆಯಾಗಲಿ ಅಥವಾ ಜಿಲ್ಲಾಡಳಿತವಾಗಲಿ ಇಂದು ತೆರವುಗಳಿಸಿದ ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯವ್ಯವಸ್ಥೆ ಮಾಡಿಕೊಡುವಂತಾಗಲಿ.
