Elephant Operation ಚಿಕ್ಕಮಗಳೂರು: 2 ಜನರನ್ನು ಬಲಿಪಡೆದಿದ್ದ ಪುಂಡಾನೆ ಕೊನೆಗೂ ಸೆರೆ : ಹೇಗಿತ್ತು ಕಾರ್ಯಾಚರಣೆ
ಚಿಕ್ಕಮಗಳೂರು: ಇಬ್ಬರು ಅಮಾಯಕರನ್ನು ಬಲಿ ಪಡೆದು ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಪುಂಡಾನೆಯನ್ನು ಕೊನೆಗೂ ಅರಣ್ಯ ಇಲಾಖೆ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದು, ಸರ್ಕಾರಕ್ಕೆ ಬಿಸಿ ತಟ್ಟಿದ 24 ಗಂಟೆ ಕಳೆಯುವ ಮೊದಲೇ ಈ ಕ್ಷಿಪ್ರ ಕಾರ್ಯಾಚರಣೆ ನಡೆದಿದೆ. ಚಿಕ್ಕಮಗಳೂರು ತಾಲ್ಲೂಕಿನ ಖಾಂಡ್ಯ ಸಮೀಪದ ಬಿಳುಕೊಪ್ಪ ಅರಣ್ಯ ಪ್ರದೇಶದಲ್ಲಿ ಪುಂಡಾನೆಯನ್ನು ಸೆರೆ ಹಿಡಿಯಲಾಗಿದೆ.
ಕಾರ್ಯಾಚರಣೆಯ ಆರಂಭದಲ್ಲಿ, ಎಲೆಕಲ್ಲು ಸಮೀಪದ ಅಂಡುವಾನೆಯಲ್ಲಿ ಕಾಡಾನೆಗೆ ಅರವಳಿಕೆ ನೀಡಲು ವೈದ್ಯರು ಪ್ರಯತ್ನಿಸಿದ್ದರು. ಆದರೆ, ಚುಚ್ಚುಮದ್ದು ನೀಡಿದ ನಂತರ ಆನೆ ಅಲ್ಲಿಂದ ತಪ್ಪಿಸಿಕೊಂಡು ಬಿಳುಕೊಪ್ಪ ಅರಣ್ಯ ಪ್ರದೇಶದತ್ತ ಓಡಿಹೋಗಿತ್ತು. ಆದಾಗ್ಯೂ, ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಯನ್ನು ಕೈಬಿಡದೆ, ಸಕ್ರೇಬೈಲ್ ಕುಮ್ಕಿ ಆನೆಗಳ ಸಹಾಯದಿಂದ ಪುಂಡ ಸಲಗಕ್ಕೆ ಅಂತಿಮವಾಗಿ ಹಗ್ಗ ಹಾಕಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳು ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ರೈತರು ಪ್ರತಿಭಟನೆಗಳನ್ನು ತೀವ್ರಗೊಳಿಸುತ್ತಿದ್ದಂತೆ, ಅಧಿಕಾರಿಗಳು ತ್ವರಿತವಾಗಿ ಕಾರ್ಯಪ್ರವೃತ್ತರಾಗಿ ಆನೆಯನ್ನು ಸೆರೆಹಿಡಿಯುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.


