Dental Check up Camp ಶಿವಮೊಗ್ಗದಲ್ಲಿ ಉಚಿತ ದಂತ ತಪಾಸಣೆ ಮತ್ತು ಅರಿವು ಶಿಬಿರ: ಆಗಸ್ಟ್ 1 ಮತ್ತು 2 ರಂದು ವಿಶೇಷ ಕಾರ್ಯಕ್ರಮ
Dental Check up Camp ಶಿವಮೊಗ್ಗ: ಭಾರತೀಯ ದಂತ ವೈದ್ಯಕೀಯ ಸಂಘ, ಶಿವಮೊಗ್ಗ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಿವಮೊಗ್ಗ, ಹಾಗೂ ಸುಬ್ಬಯ್ಯ ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಉಚಿತ ದಂತ ತಪಾಸಣೆ ಹಾಗೂ ದಂತ ಆರೋಗ್ಯದ ಮಾಹಿತಿ ಶಿಬಿರವನ್ನು ಆಗಸ್ಟ್ 1 ಮತ್ತು 2 ರಂದು ಕೆ.ಆರ್. ಪುರಂ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದಂತ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ಬಿ.ಎಂ. ಗೌತಮ್ ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಾ. ಗೌತಮ್, ದಂತ ವೈದ್ಯಕೀಯ ಸಂಘದ ರಜತ ಮಹೋತ್ಸವದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಬೆಳಿಗ್ಗೆ 10:30ಕ್ಕೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು ಉದ್ಘಾಟಿಸುವರು. ಈ ಸಂದರ್ಭದಲ್ಲಿ ಶಿವಮೊಗ್ಗದ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಎನ್. ಉಪಸ್ಥಿತರಿರುವರು ಎಂದು ತಿಳಿಸಿದರು.
ಆಗಸ್ಟ್ 2, ಶನಿವಾರದಂದು ಶಿವಮೊಗ್ಗ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಯ್ಕೆ ಮಾಡಿ ಸೂಚಿಸಿರುವ 25 ಸರ್ಕಾರಿ ಶಾಲೆಗಳಲ್ಲಿ ಉಚಿತ ದಂತ ತಪಾಸಣೆ ಹಾಗೂ ದಂತ ಆರೋಗ್ಯದ ಮಾಹಿತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಟೂತ್ ಬ್ರಷ್ ಮತ್ತು ಟೂತ್ ಪೇಸ್ಟ್ ಅನ್ನು ಸಂಘದ ವತಿಯಿಂದ ಉಚಿತವಾಗಿ ವಿತರಿಸಲಾಗುವುದು ಎಂದು ಡಾ. ಗೌತಮ್ ಮಾಹಿತಿ ನೀಡಿದರು.


Dental Check up Camp ಶಿವಮೊಗ್ಗದ ಭಾರತೀಯ ದಂತ ವೈದ್ಯಕೀಯ ಸಂಘವು ಸಾಮಾಜಿಕ ಸ್ವಾಸ್ಥ್ಯದ ಕಳಕಳಿಯನ್ನು ಧೈಯೋದ್ದೇಶವಾಗಿರಿಸಿಕೊಂಡು ಅಸ್ತಿತ್ವಕ್ಕೆ ಬಂದಿದೆ. ಅಂದಿನಿಂದ ಇಲ್ಲಿಯವರೆಗೆ ದಂತ ಆರೋಗ್ಯದ ಬಗ್ಗೆ ಹಲವಾರು ಶಿಬಿರಗಳನ್ನು ನಡೆಸಿ, ಅಗತ್ಯವುಳ್ಳವರಿಗೆ ಚಿಕಿತ್ಸೆಯನ್ನು ನೀಡುತ್ತಾ ಬಂದಿದೆ. ಭಾರತದ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳಿಗೆ ದಂತ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿ ಆರೋಗ್ಯ ಸಂವರ್ಧನೆಯತ್ತ ಪ್ರಗತಿ ಸಾಧಿಸುತ್ತಿದೆ ಎಂದು ಅವರು ಹೇಳಿದರು.
ಇದುವರೆಗೂ, ಡಿಸೆಂಬರ್ 2024 ರಿಂದ ಜುಲೈ 30, 2025 ರವರೆಗೆ ಒಟ್ಟು 112 ದಂತ ಆರೋಗ್ಯ ಶಿಬಿರಗಳನ್ನು ನಡೆಸಲಾಗಿದೆ. ಈ ಶಿಬಿರಗಳಲ್ಲಿ 7,892 ಮಕ್ಕಳ ತಪಾಸಣೆಯನ್ನು ಕೈಗೊಂಡು, 2,713 ವಿದ್ಯಾರ್ಥಿಗಳಿಗೆ ಅಗತ್ಯವಿದ್ದ ದಂತ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗಿದೆ. ಇದರ ಜೊತೆಗೆ, 2,315 ಓರಲ್ ಕೇರ್ ಕಿಟ್‌ಗಳನ್ನು ಉಚಿತವಾಗಿ ವಿತರಿಸಲಾಗಿದೆ ಎಂದು ಡಾ. ಗೌತಮ್ ವಿವರ ನೀಡಿದರು.
