Balebare Ghat ಶಿವಮೊಗ್ಗ, ಆಗಸ್ಟ್ 7, malenadu today news : ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ 52ರ ವ್ಯಾಪ್ತಿಯ ಬಾಳೆಬರೆ ಘಾಟಿ ರಸ್ತೆಯಲ್ಲಿ ಮತ್ತಷ್ಟು ಧರೆ ಕುಸಿಯುವ ಭೀತಿ ಎದುರಾಗಿದೆ. ಇತ್ತೀಚೆಗೆ ಹೆರ್ ಪಿನ್ ಕಟ್ ವೊಂದರಲ್ಲಿ ಧರೆ ಕುಸಿಯುವ ಆತಂಕ ಮೂಡಿತ್ತು, ವಿಶೇಷ ಅಧಿಕಾರಿಗಳು ಅದನ್ನ ಟಾರ್ಪಲ್ ಮುಚ್ಚಿ, ಮಣ್ಣಿನ ಚೀಲಗಳನ್ನು ಇಟ್ಟು ಬಂದೋಬಸ್ತ್ ಮಾಡಿದ್ದರು. ಇದರ ಬೆನ್ನಲ್ಲೆ ಮತ್ತೆ ಕೆಲವೆಡೆ ಧರೆ ಕುಸಿಯುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾಡಳಿತ ಭಾರೀ ವಾಹನಗಳ ಸಂಚಾರವನ್ನು ಹುಲಿಕಲ್ ಘಾಟಿಯಲ್ಲಿ ತಾತ್ಕಾಲಿಕವಾಗಿ ನಿಷೇಧಿಸಿ ಆದೇಶ ಹೊರಡಿಸಿದೆ. ಈ ಆದೇಶ ಮಳೆಗಾಲ ಮುಗಿಯುವವರೆಗೆ ಜಾರಿಯಲ್ಲಿರುತ್ತದೆ.
ಕಳೆದ ಮೇ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬಾಳೆಬರೆ ಘಾಟಿಯ ಹೇರ್‌ಪಿನ್ ತಿರುವಿನಲ್ಲಿ ರಸ್ತೆಯ ಕೆಳಭಾಗದಲ್ಲಿ ಮಣ್ಣು ಕುಸಿತ ಉಂಟಾಗಿತ್ತು. ತಾತ್ಕಾಲಿಕ ದುರಸ್ತಿ ಕಾರ್ಯ ಕೈಗೊಂಡಿದ್ದರೂ, ಮಳೆ ಹೆಚ್ಚಾಗಿರುವುದರಿಂದ ಮಣ್ಣು ಮತ್ತಷ್ಟು ಕುಸಿಯುವ ಸಂಭವವಿದೆ ಎಂದು ಲೋಕೋಪಯೋಗಿ ಇಲಾಖೆ ವರದಿ ನೀಡಿದೆ.ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪೊಲೀಸ್ ಅಧೀಕ್ಷಕರು, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮತ್ತು ಉಡುಪಿ ಜಿಲ್ಲಾಧಿಕಾರಿಗಳ ವರದಿಗಳನ್ನು ಪರಿಶೀಲಿಸಿ, ಜಿಲ್ಲಾಧಿಕಾರಿಗಳು ಕರ್ನಾಟಕ ಮೋಟಾರ್ ವಾಹನ ಕಾಯ್ದೆ 1988ರ ಕಲಂ 115 ಮತ್ತು 1989ರ ಕಲಂ 221(ಎ) (2) ಮತ್ತು (5) ರನ್ವಯ ಈ ಅಧಿಸೂಚನೆಯನ್ನು ಹೊರಡಿಸಿದ್ದಾರೆ.
ಇನ್ನೂ ಹೆವಿ ವೆಹಿಕಲ್ಗಳಿಗೆ ಜಿಲ್ಲಾಡಳಿತ ಪರ್ಯಾಯ ಮಾರ್ಗಗಳನ್ನು ಸೂಚಿಸಿದೆ. ಅದರ ವಿವರಗಳು ಹೀಗಿದೆ.
ತೀರ್ಥಹಳ್ಳಿಯಿಂದ ಕುಂದಾಪುರಕ್ಕೆ ಹೋಗುವ ಭಾರೀ ವಾಹನಗಳು
ಹಿಂದಿನ ಮಾರ್ಗ: ತೀರ್ಥಹಳ್ಳಿ-ರಾವೆ-ಕಾನುಗೋಡು-ಮಾಸ್ತಿಕಟ್ಟೆ-ಹುಲಿಕಲ್ ಘಾಟ್-ಹೊಸಂಗಡಿ-ಸಿದ್ದಾಪುರ-ಕುಂದಾಪುರ
ಪರ್ಯಾಯ ಮಾರ್ಗ: ತೀರ್ಥಹಳ್ಳಿ-ರಾವೆ-ಕಾನುಗೋಡು-ನಗರ-ಕೊಲ್ಲೂರು-ಕುಂದಾಪುರ.
ತೀರ್ಥಹಳ್ಳಿಯಿಂದ ಯಡೂರು-ಹುಲಿಕಲ್ ಮೂಲಕ ಕುಂದಾಪುರಕ್ಕೆ ಹೋಗುವ ಭಾರೀ ವಾಹನಗಳು
ಹಿಂದಿನ ಮಾರ್ಗ: ತೀರ್ಥಹಳ್ಳಿ-ಯಡೂರು-ಸುಳಗೋಡು-ಮಾಸ್ತಿಕಟ್ಟೆ-ಹುಲಿಕಲ್ ಘಾಟ್-ಹೊಸಂಗಡಿ-ಸಿದ್ದಾಪುರ-ಕುಂದಾಪುರ
ಪರ್ಯಾಯ ಮಾರ್ಗ: ತೀರ್ಥಹಳ್ಳಿ-ಯಡೂರು-ಮಾಸ್ತಿಕಟ್ಟೆ-ಕಾನುಗೋಡು-ನಗರ-ಕೊಲ್ಲೂರು-ಕುಂದಾಪುರ.
ಶಿವಮೊಗ್ಗ/ಸಾಗರದಿಂದ ಹೊಸನಗರದ ಮೂಲಕ ಕುಂದಾಪುರಕ್ಕೆ ಹೋಗುವ ಭಾರೀ ವಾಹನಗಳು
ಹಿಂದಿನ ಮಾರ್ಗ: ಶಿವಮೊಗ್ಗ-ಹೊಸನಗರ-ನಗರ-ಮಾಸ್ತಿಕಟ್ಟೆ-ಹುಲಿಕಲ್ ಘಾಟ್-ಹೊಸಂಗಡಿ-ಸಿದ್ದಾಪುರ-ಕುಂದಾಪುರ
ಪರ್ಯಾಯ ಮಾರ್ಗ: ಶಿವಮೊಗ್ಗ-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಮೂಲಕ ಹೋಗಿ, ಅಲ್ಲಿಂದ ಭಟ್ಕಳ-ಬೈಂದೂರು-ಕುಂದಾಪುರ ರಸ್ತೆ ಬಳಸಬಹುದಾಗಿದೆ.
