B saroja devi : ಬೆಂಗಳೂರು ಅಭಿನಯ ಸರಸ್ವತಿ ಎಂದೇ ಖ್ಯಾತಿ ಪಡೆದಿದ್ದ ಹಿರಿಯ ಕನ್ನಡ ನಟಿ ಬಿ. ಸರೋಜಾದೇವಿ ಅವರು 87ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜನಪ್ರಿಯ ತಾರೆ ವಿಧಿವಶರಾಗಿದ್ದು, ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ಜನವರಿ 7, 1938 ರಂದು ಬೆಂಗಳೂರಿನಲ್ಲಿ ಜನಿಸಿದ ಸರೋಜಾದೇವಿ, ಸ್ಯಾಂಡಲ್‌ವುಡ್ ಮಾತ್ರವಲ್ಲದೆ, ದಕ್ಷಿಣ ಭಾರತದ ಇತರ ಭಾಷೆಗಳು ಹಾಗೂ ಹಿಂದಿ ಚಿತ್ರರಂಗದಲ್ಲೂ ತಮ್ಮ ಛಾಪು ಮೂಡಿಸಿದ್ದರು. ಸುಮಾರು ಆರು ದಶಕಗಳ ಕಾಲ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ ಅವರು, ಐದು ಭಾಷೆಗಳಲ್ಲಿ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಧೀಮಂತ ಅಭಿನೇತ್ರಿಯಾಗಿ ಗುರುತಿಸಿಕೊಂಡಿದ್ದರು. ಅವರ ಅಮೋಘ ಅಭಿನಯಕ್ಕೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಸಂದಿದ್ದು, ಭಾರತ ಸರ್ಕಾರ ನೀಡುವ ಪದ್ಮಭೂಷಣ ಪ್ರಶಸ್ತಿಗೂ ಅವರು ಭಾಜನರಾಗಿದ್ದರು.
ತಮ್ಮ ಕೇವಲ 17ನೇ ವಯಸ್ಸಿನಲ್ಲಿ, ಕನ್ನಡ ಚಿತ್ರರಂಗದ ಭೀಷ್ಮ ಎಂದೇ ಖ್ಯಾತರಾದ ಹೊನ್ನಪ್ಪ ಭಾಗವತರ್ ಅವರ ‘ಮಹಾಕವಿ ಕಾಳಿದಾಸ’ ಚಿತ್ರದ ಮೂಲಕ ಬಿ. ಸರೋಜಾದೇವಿ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು. ಕನ್ನಡದಲ್ಲಿ ‘ಅಮರ ಶಿಲ್ಪಿ ಜಕಣಾಚಾರಿ’, ‘ಮಲ್ಲಮ್ಮನ ಪವಾಡ’, ‘ಭಾಗ್ಯವಂತರು’, ‘ಬಬ್ರುವಾಹನ’, ‘ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮಾ’, ‘ಲಕ್ಷ್ಮೀ ಸರಸ್ವತಿ’, ‘ಕಥಾಸಂಗಮ’ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದರು.

ಕನ್ನಡದ ಜೊತೆಗೆ ತಮಿಳಿನಲ್ಲಿ ‘ಪಾಟ್ಟಾಲಿ ಮುತ್ತು’, ‘ಪಡಿಕಥ ಮೇಥೈ’, ‘ಕಲ್ಯಾಣ ಪರಿಸು’, ತೆಲುಗಿನಲ್ಲಿ ‘ಪಂಡರಿ ಭಕ್ತಲು’, ‘ದಕ್ಷಯಜ್ಞಂ’, ಹಿಂದಿಯಲ್ಲಿ ‘ಆಶಾ’, ‘ಮೆಹಂದಿ ಲಗಾ ಕೆ ರಖನಾ’, ಮಲಯಾಳಂನಲ್ಲಿ ‘ಮುತ್ತು ಮಿಂತ್ರೋ’ ಸೇರಿದಂತೆ ವಿವಿಧ ಭಾಷೆಗಳ ಅನೇಕ ಸಿನಿಮಾಗಳಲ್ಲಿ ಅವರು ತಮ್ಮ ಅಭಿನಯದ ಮೂಲಕ ಜನಮನ್ನಣೆ ಗಳಿಸಿದ್ದರು.
B saroja devi ಗಣ್ಯರ ಸಂತಾಪ
ಬಹುಭಾಷ ನಟಿ ಅಭಿನವ ಶಾರದೆ, ಬಿ ಸರೋಜದೇವಿ ಸಾವಿಗೆ ನಾಡಿನ ಗಣ್ಯರು ಚಿತ್ರನಟರು ಕಂಬನಿ ಮಿಡಿದಿದ್ದಾರೆ.
ನಾಡು ಬಡವಾಗಿದೆ ಎಂದ ಸಿಎಂ
ಬಿ.ಸರೋಜದೇವಿ ಸಾವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ. ಸರೋಜದೇವಿಯವರು ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿದ ಮಹಾನ್ ನಟಿಯಾಗಿದ್ದಾರೆ. ಅವರ ಸಾವಿನಿಂದ ನಾಡು ಬಡವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕೂಡ ಸರೋಜದೇವಿಯರ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರ ನಗರದಲ್ಲಿರುವ ಬಿ.ಸರೋಜದೇವಿಯವರ ಅಂತಿಮ ದರ್ಶನ ಪಡೆಯಲು ಗಣ್ಯರು ಆಗಮಿಸುತ್ತಿದ್ದು,ಅವರ ಸ್ಮರಣೆ ಮಾಡಿದರು. ಹಿರಿಯ ನಟ ಶ್ರೀನಾಥ್, ಸರೋಜದೇವಿಯವರ ಜೊತೆ ನಟಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ.ಅಭಿನವ ಶಾರದೆ ಎನ್ನುವುದಕ್ಕೆ ಅವರಿಗೆ ಸಾಟಿಯೇ ಇಲ್ಲ. ನಟಿಸುವಾಗ ತನ್ಮಯತೆಯಲ್ಲಿರುತ್ತಿದ್ದರು. ಪೂರ್ಣ ಪ್ರಮಾಣದಲ್ಲಿ ಬದುಕು ಸವೆಸಿದ ಅವರ ಆತ್ಮಕ್ಕೆ ಶಾಂತಿ ಲಭಿಸಲಿ ಎಂದಿದ್ದಾರೆ. ಇನ್ನು ನಟ ಉಪೇಂದ್ರ ಹಾಗು ಜಗ್ಗೇಶ್ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಸರೋಜದೇವಿಯವರ ಜೊತೆಗಿನ ಒಟನಾಟ ಮೆಲಕು ಹಾಕಿದ ನಟರು, ಅವರ ಬಗ್ಗೆ ಮಾತನಾಡುವಷ್ಟು ನಾವು ದೊಡ್ಡವರಲ್ಲ ಎಂದು ಹೇಳಿದರು.
B saroja devi : ಕೊಡಿಗೆಹಳ್ಳಿಯಲ್ಲಿ ಅಂತ್ಯಕ್ರಿಯೆ:
ದಿವಂಗತ ನಟಿ ಬಿ. ಸರೋಜಾದೇವಿ ಅವರ ಪಾರ್ಥಿವ ಶರೀರವನ್ನು ಮಲ್ಲೇಶ್ವರಂನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ನಂತರ, ಅವರ ಸ್ವಗ್ರಾಮ ಕೊಡಿಗೆಹಳ್ಳಿಯಲ್ಲಿರುವ ತೋಟದಲ್ಲಿ ಪತಿ ಹರ್ಷ ಅವರ ಸಮಾಧಿ ಪಕ್ಕದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬ ವರ್ಗ ಸಿದ್ಧತೆ ನಡೆಸುತ್ತಿದೆ.
