SHIVAMOGGA| MALENADUTODAY NEWS | ಮಲೆನಾಡು ಟುಡೆ Mar 8, 2025
ಸುದ್ದಿ 1 : ಮಗನ ಕೈಗೆ ಬೈಕ್, ಅಪ್ಪನ ಜೇಬಿಗೆ ಫೈನ್
ಸಿಕ್ಕಾಪಟ್ಟೆ ಫೈನ್ ಹಾಕುತ್ತಿದ್ದರೂ ಶಿವಮೊಗ್ಗದಲ್ಲಿ ಅಪ್ರಾಪ್ತರ ಬೈಕ್ ಚಾಲನೆ ನಿಲ್ಲುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ಟ್ರಾಫಿಕ್ ಪೊಲೀಸರು, ಮಗನ ಕೈಗೆ ಬೈಕ್ ನೀಡಿದ ತಂದೆಯೊಬ್ಬರಿಗೆ ಕೋರ್ಟ್ ಮೂಲಕ 25 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಕಳೆದ ಫೆಬ್ರವರಿ 24 ರಂದು ಮೀನಾಕ್ಷಿ ಭವನ ಹೋಟೆಲ್ ಬಳಿ ವಾಹನ ತಪಾಸಣೆ ನಡೆಸ್ತಿದ್ದ ಟ್ರಾಫಿಕ್ ಪೊಲೀಸರಿಗೆ ಅಪ್ರಾಪ್ತನೊಬ್ಬ ಬೈಕ್ ಓಡಿಸಿಕೊಂಡು ಬಂದು ಸಿಕ್ಕಿಬಿದ್ದಿದ್ದಾನೆ. ದಾಖಲೆ ಪರಿಶೀಲಿಸಿದಾಗ ಆತ ಅಪ್ರಾಪ್ತ ಎಂಬುದು ಗೊತ್ತಾಗಿದೆ. ಹೀಗಾಗಿ ಕಾನೂನು ಅಡಿಯಲ್ಲಿ ಕೇಸ್ ದಾಖಲಿಸಿ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಅಪ್ರಾಪ್ತನಿಗೆ ಬೈಕ್ ನೀಡಿದ ತಪ್ಪಿಗೆ ಪೋಷಕರಿಗೆ 25 ಸಾವಿರ ರೂಪಾಯಿ ದಂಡ ಹಾಕಿದೆ.
ಸುದ್ದಿ 2 : ಮುದಾದ್ದ ಜಿಂಕೆ ಮರಿ ಸಿಕ್ತು ನೋಡಿ
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್‌ಪೇಟೆ ಸಮೀಪದ ವಡಗೆರೆ ಬಳಿ ನಾಯಿ ಬೆರಸಿಕೊಂಡು ಬಂದಿದ್ದರಿಂದ ಹೆದರಿದ ಜಿಂಕೆ ಮರಿಯೊಂದು ಮನೆಯ ಬಳಿ ಆಶ್ರಯ ಪಡೆದಿತ್ತು. ಅದನ್ನು ರಕ್ಷಣೆ ಮಾಡಿದ ಸ್ಥಳೀಯರು ಅರಣ್ಯ ಇಲಾಖೆಯ ಸುಪರ್ಧಿಗೆ ಒಪ್ಪಿಸಿದರು. ಇಲ್ಲಿನ ಅಮರನಾಥ್ ಎಂಬವರ ತೋಟದಲ್ಲಿ ಜಿಂಕೆ ಮರಿ ಕಾಣಿಸಿಕೊಂಡಿತ್ತು. ಅದನ್ನು ನೋಡುತ್ತಲೇ ನಾಯಿಗಳು , ಜಿಂಕೆಯನ್ನು ಬೆರಸಲು ಆರಂಭಿಸಿವೆ. ಹೆದರಿದ ಜಿಂಕೆ ಮರಿ, ಮನೆ ಅಂಗಳಕ್ಕೆ ಬಂದು ಆಶ್ರಯ ಪಡೆದಿದೆ. ಮನೆಯವರು ಹಾಗೂ ಸ್ಥಳೀಯರು ಅದನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಸುದ್ದಿ 3 : ಸಾಗರ ಬ್ಯಾಂಕ್‌ನಲ್ಲಿ ಬೆಂಕಿ
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು, ಬಿಹೆಚ್ ರೋಡ್‌ನಲ್ಲಿರುವ ಕೆನರಾ ಬ್ಯಾಂಕ್ ನ ಕಚೇರಿಯಲ್ಲಿ ನಿನ್ನೆ ದಿನ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು. ಬ್ಯಾಂಕ್‌ನಲ್ಲಿನ ಇನ್ವೆಟರ್‌ನಲ್ಲಿ ಶಾರ್ಟ್ ಸರ್ಕಿಟ್ ಆಗಿದ್ದು, ಅದರಿಂದ ಹೊಗೆ ಬರಲು ಆರಂಭವಾಗಿದೆ. ಆನಂತರ ಬೆಂಕಿ ಹೊತ್ತಿಕೊಂಡಿದೆ. ಇನ್ನೂ ಹೊಗೆ ಕಾಣಿಸಿಕೊಳ್ಳುತ್ತಲೇ ಬ್ಯಾಂಕ್ ಸಿಬ್ಬಂದಿ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ತಕ್ಷಣ ಬಂದ ಅವರು, ಇನ್ವೆಟರ್‌ನಲ್ಲಿನ ಬೆಂಕಿ ನಂದಿಸಿ ಹೆಚ್ಚಿನ ಅಪಾಯ ಆಗದಂತೆ ಎಚ್ಚರಿಕೆ ವಹಿಸಿದರು
ಸುದ್ದಿ 4: ಲಾಂಚ್ ಪ್ರಯಾಣಿಕರ ಮೇಲೆ ಹಲ್ಲೆ
ಸಾಗರ ತಾಲ್ಲೂಕು ಸಿಗಂದೂರು ಲಾಂಚ್‌ನ ಟಿಕೆಟ್ ಕಲೆಕ್ಟರ್ ಸೇರಿದಂತೆ ಹಲವರು ಬೆಳಗಾವಿ ಮೂಲದ ಸಿಗಂದೂರು ಭಕ್ತರ ಮೇಲೆ ಹಲ್ಲೆ ಮಾಡಿರುವ ಬಗ್ಗೆ ವರದಿಯಾಗಿದೆ. ಈ ಸಂಬಂಧ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ FIR ಸಹ ದಾಖಲಾಗಿದೆ. ಬೆಳಗಾವಿ ಸವದತ್ತಿ ತಾಲ್ಲೂಕು ನಿವಾಸಿ ಮಹಿಳೆಯೊಬ್ಬರು ತಮ್ಮ ಕುಟುಂಬದ ಜೊತೆ ಸಿಗಂದೂರಿಗೆ ಬಂದಿದ್ದರು. ಈ ವೇಳೆ ಲಾಂಚ್‌ಗೆ ವಾಹನ ಹಾಕುವ ಸಂಬಂಧ ಟಿಕೆಟ್ ಕಲೆಕ್ಟರ್ ಜೊತೆ ವಾಗ್ವಾದ ಆಗಿದೆ. ಇದೆ ಕಾರಣಕ್ಕೆ ಲಾಂಚ್‌ಗೆ ವಾಹನ ಏರಿಸಿದ ಬಳಿಕ, ಬೆಳಗಾವಿಯ ಮಹಿಳೆ ಹಾಗೂ ಅವರ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ಸುದ್ದಿ 5 : ಶಿವಮೊಗ್ಗಕ್ಕೆ ಇಂದು ಸಚಿವರ ಆಗಮನ
ಶಿವಮೊಗ್ಗ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಇವತ್ತು ಬೆಳಗ್ಗೆ 8.45ಕ್ಕೆ ಸೊರಬದ ಬಂಗಾರಧಾಮಕ್ಕೆ ತೆರಳುವರು. 9.30ಕ್ಕೆ ತಾಲ್ಲೂಕಿನ ಪುರಸಭೆಯ ವ್ಯಾಪ್ತಿಯ ನಂದಿನ ಮಿಲ್ಕ್ ಪಾರ್ಲರ್ ಸಮೀಪದ ಹಣ್ಣು ತರಕಾರಿ ಮಳಿಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಆನಂತರ 10.30ಕ್ಕೆ ಶ್ರೀಕ್ಷೇತ್ರ ಚಂದ್ರಗುತ್ತಿ ರೇಣುಕಾಪರಮೇಶ್ವರಿ ದೇವಿಯ ಮಹಾರಥೋತ್ಸವದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 1.35ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಹೈದ್ರಾಬಾದ್ ತೆರಳುವರು ಎಂದು ಸಚಿವರ ಸಚಿವರ ಆಪ್ತಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೀರಾವರಿ ಸಚಿವರ ಜಿಲ್ಲಾ ಪ್ರವಾಸ
ಇನ್ನೊಂದೆಡೆ ಉಸ್ತುವಾರಿ ಸಚಿವರ ಬೆನ್ನಲ್ಲೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜುರವರು ಸಹ ಇವತ್ತು ಶಿವಮೊಗ್ಗಕ್ಕೆ ಬರಲಿದ್ದಾರೆ. ಸಂಜೆ 5 ಗಂಟೆಗೆ ಶಿವಮೊಗ್ಗ ಆಗಮಿಸಲಿರುವ ಅವರು, ಶಿವಮೊಗ್ಗ ತಾಲ್ಲೂಕಿನ ಹೊಳಲೂರು ಏತ ನೀರಾವರಿ ಯೋಜನೆ ಕಾಮಗಾರಿ ವೀಕ್ಷಿಸಲಿದ್ದಾರೆ. ಬಳಿಕ ಸ್ಥಳೀಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಿವಮೊಗ್ಗದಲ್ಲಿ ವಾಸ್ತವ್ಯ ಹೂಡುವರು. ಮಾ.9 ರಂದು ಬೆಳಿಗ್ಗೆ 7 ಗಂಟೆಗೆ ಬೆಂಗಳೂರಿಗೆ ತೆರಳುವರು ಎಂದು ಸಚಿವರ ಆಪ್ತಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.