ಸಾಹಿತಿ ಡಾ. ಎಸ್.ಎಲ್. ಭೈರಪ್ಪ ನಿಧನ
ಪದ್ಮ ಭೂಷಣ ಗೌರವ ಪುರಸ್ಕೃತರಾದ ಹಿರಿಯ ಸಾಹಿತಿ ಡಾ. ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ (94) ಅವರು ಇಂದು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಕಳೆದ ಕೆಲವು ತಿಂಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಭೈರಪ್ಪ ಅವರನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ರಾಷ್ಟ್ರೋತ್ಥಾನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ಕನ್ನಡ ಸಾಹಿತ್ಯ ಲೋಕದ ದಿಗ್ಗಜರಲ್ಲಿ ಒಬ್ಬರಾಗಿದ್ದ ಭೈರಪ್ಪ ಅವರು 1931ರ ಆಗಸ್ಟ್ 20ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಸಂತೇಶಿವರ ಗ್ರಾಮದಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲೇ ಪಡೆದ ಅವರು, ಬಾಲ್ಯದಲ್ಲಿ ತೀವ್ರ ಬಡತನ, ಪ್ಲೇಗ್‌ರಂತಹ ಮಾರಕ ರೋಗದ ನಡುವೆಯೂ ತಮ್ಮ ತಾಯಿಯ ಧೀಮಂತ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಬೆಳೆದರು. ನಂತರ ಅವರು ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ “ಸತ್ಯ ಮತ್ತು ಸೌಂದರ್ಯ” ಎಂಬ ಇಂಗ್ಲಿಷ್‌ನಲ್ಲಿನ ಮಹಾ ಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿ ಪಡೆದಿದ್ದರು.