Shivamogga news
Shivamogga news :ಮಲೆನಾಡು ಟುಡೆ ಸುದ್ದಿ ಶಿವಮೊಗ್ಗ ಸೆ:10 : ದೇಶದ ಭವಿಷ್ಯ ರೂಪಿಸುವ ವಿದ್ಯಾರ್ಥಿಗಳನ್ನು ರೂಪಿಸುವವರು ಶಿಕ್ಷಕರು. ಆದ್ದರಿಂದ ಶಿಕ್ಷಕರು ಭವ್ಯ ಭಾರತ ನಿರ್ಮಿಸುವ ಶಿಲ್ಪಿಗಳು ಎಂದು ತುಂಗಾ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಡಾ.ಎಲ್.ಸಿ. ಸುಮಿತ್ರಾ ಅಭಿಪ್ರಾಯಪಟ್ಟರು.
ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯ ಹಾಗೂ ತುಂಗಾ ಪದವಿ ಪೂರ್ವ ವಸತಿ ಶಿಕ್ಷಣ ಸಂಸ್ಥೆಯಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಪಂಚದ ಎಲ್ಲಾ ದೇಶಗಳು ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತೇವೆ. ಹಾಗೆಯೇ ನಮ್ಮ ದೇಶದಲ್ಲಿ ಸೆಪ್ಟೆಂಬರ್ 5 ರಂದು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುತ್ತಿದ್ದೇವೆ. ಇದು ರಾಧಾಕೃಷ್ಣನ್ ರವರಿಗೆ ನಾವು ಸಲ್ಲಿಸುವ ಬಹುದೊಡ್ಡ ಗೌರವ. ಆದರೆ ಜಪಾನ್ ದೇಶದಲ್ಲಿ ಶಿಕ್ಷಕರಿಗೆ 365 ದಿನವೂ ವಿಶೇಷ ಗೌರವ ನೀಡುವ ಪದ್ಧತಿ ಬೆಳೆದು ಬಂದಿದೆ. ಇದರಲ್ಲಿ ಶಿಕ್ಷಕರ ಹಾಗೂ ಶಿಕ್ಷಣದ ಪಾತ್ರ ಬಹಳ ಮಹತ್ವದ್ದಾಗಿದೆ. ಶಿಕ್ಷಣ ಎನ್ನುವುದು ಒಂದು ಆರೋಗ್ಯಕರ ಸಮಾಜಕ್ಕೆ, ಮೌಲ್ಯ ನಿರ್ಮಾಣ ಮಾಡುವುದಕ್ಕೆ ತಳಹದಿಯಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಸ್ನೇಹ ವಾತಾವರಣ ನಿರ್ಮಾಣ ಮಾಡುವುದು ಶಿಕ್ಷಣ ಸಂಸ್ಥೆಗಳಲ್ಲಿ ಆದ್ಯ ಕರ್ತವ್ಯವಾಗಬೇಕೆಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಂಗಾ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಎಮ್. ಎನ್. ರಮೇಶ್ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆಯ ಜೊತೆಗೆ ಜೀವನ ಮೌಲ್ಯ- ಕೌಶಲ್ಯಗಳಲ್ಲಿಯೂ ಮಾರ್ಗದರ್ಶನ ನೀಡಬೇಕು. ತಮ್ಮ ವೃತ್ತಿ ಜೀವನದ ಅನುಭವವನ್ನು ಧಾರೆ ಎರೆದು ಮಕ್ಕಳಲ್ಲಿ ನಾಗರಿಕ ಪ್ರಜ್ಞೆ, ಜೀವನಶೈಲಿ ಕಲಿಸಿಕೊಡಬೇಕು, ಹಾಗೂ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹುಡುಕಿ ಅವರನ್ನು ಮುನ್ನೆಲೆಗೆ ತರಬೇಕು ಎಂದರು.
Shivamogga news ಈ ಸಂದರ್ಭದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಪುಷ್ಪ ನಮನ ಸಲ್ಲಿಸಲಾಯಿತು. ಶಿಕ್ಷಕರ ದಿನದ ಮಹತ್ವದ ಕುರಿತು ತೃತೀಯ ಬಿ.ಎ. ವಿದ್ಯಾರ್ಥಿ ಮನೋಜ್ ಎ.ಎಂ. ಹಾಗೂ ಪ್ರಥಮ ಬಿ.ಸಿ.ಎ. ವಿದ್ಯಾರ್ಥಿನಿ ರಮ್ಯ ಇವರುಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಆರ್.ಕುಮಾರಸ್ವಾಮಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀ ಪ್ರಸನ್ನ ಕೆ.ಎಲ್. ಹಾಗೂ ಕಾಲೇಜಿನ ಐಕ್ಯೂಎಸಿ, ಸಂಚಾಲಕ ಶ್ರೀ ಮೋಹನ್ ಕುಮಾರ್ ಬಿ.ಸಿ.ಉಪಸ್ಥಿತರಿದ್ದರು.
ವಿದ್ಯಾರ್ಥಿಗಳೇ ರೂಪಿಸಿ- ಸಂಯೋಜಿಸಿದ,ಶಿಕ್ಷಕರ ದಿನದ ಪ್ರಯುಕ್ತ ಉಪನ್ಯಾಸಕರಿಗೆ ಹಮ್ಮಿಕೊಂಡ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆದು, ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.ಬಳಿಕ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.