ಆಗಸ್ಟ್ 25 ಮಲೆನಾಡುಟುಡೆ ನ್ಯೂಸ್ : ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ವಿವಿಧ ಘಟನೆಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಇವತ್ತಿನ ಚಟ್ ಪಟ್ ನ್ಯೂಸ್ನ ವಿವರವನ್ನು ಗಮನಿಸುವುದಾದರೆ, ಹೊಸನಗರ ತಾಲ್ಲೂಕು ನಗರ ಪೊಲೀಸ್ ಠಾಣೆಯ ಪೊಲೀಸರು ಕೇವಲ 48 ಗಂಟೆಯ ಅಂತರದಲ್ಲಿ ಕಳ್ಳರನ್ನು ಹಿಡಿದಿದ್ದಾರೆ. ಅಲ್ಲದೆ ಸುಮಾರು ₹4 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೈಕನ್ನು ವಶಕ್ಕೆ ಪಡೆದಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಮೂಲದ ಹನುಮಂತ ತೊಳೆಯಪ್ಪ (26) ಮತ್ತು ಮಂಜುನಾಥ ಬಿಸುಕಲ್ಲೊಡ್ಡರ (36) ಬಂಧಿತ ಆರೋಪಿ.

ಕಳೆದ ಆಗಸ್ಟ್ 21ರಂದು ಹೊಸನಗರ ತಾಲೂಕಿನ ಕಬಳೆ ಮತ್ತು ಮಾಸ್ತಿಕಟ್ಟೆಯ ಎರಡು ಮನೆಗಳಲ್ಲಿ ಆರೋಪಿಗಳಿಬ್ಬರು ಕಳ್ಳತನವೆಸಗಿದ್ದರು. ಒಂದು ಮನೆಯಲ್ಲಿ ₹1.66 ಲಕ್ಷ ಮೌಲ್ಯದ ಚಿನ್ನಾಭರಣ, ಇನ್ನೊಂದು ಮನೆಯಿಂದ ₹1.11 ಲಕ್ಷದ ಚಿನ್ನಾಭರಣ, ಬೆಳ್ಳಿ ವಸ್ತು ಹಾಗೂ ಕ್ಯಾಶ್ ಕದ್ದಿದ್ದರು. ಈ ಕುರಿತಾಗಿ ಪ್ರಕರಣ ದಾಖಲಾದ 48 ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಬೈಕ್ ಕಳ್ಳತನ
ಇತ್ತ ಶಿವಮೊಗ್ಗ ನಗರದ ಶಿವಪ್ಪನಾಯಕ ಪ್ರತಿಮೆ ಹತ್ತಿರ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್ವೊಂದನ್ನ ಕಳವು ಮಾಡಲಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದಾವಣಗೆರೆಯ ಸಂತೋಷ್ ಎಂಬುವವರು ಬೈಕ್ ಕಳೆದುಕೊಂಡಿದ್ದಾರೆ. ಶಿವಪ್ಪನಾಯಕ ಪ್ರತಿಮೆ ಬಳಿ ಬೈಕನ್ನು ನಿಲ್ಲಿಸಿ, ಹೂವಿನ ಮಾರುಕಟ್ಟೆಗೆ ಹೋದಾಗ ಘಟನೆ ನಡೆದಿದೆ
ಬಸ್ ಚಾಲಕನ ಮೇಲೆ ಹಲ್ಲೆ
ಇನ್ನೂ ಭಧ್ರಾವತಿ ಜೇಡಿಕಟ್ಟೆ ಬಳಿಯಲ್ಲಿ ಬಸ್ ಚಾಲಕನ ಮೇಲೆ ಹಲ್ಲೆ ಮಾಡಲಾಗಿದೆ. ಶಿವಮೊಗ್ಗದಿಂದ ಭದ್ರಾವತಿ ಕೆಎಸ್ಆರ್‌ಟಿಸಿ ಬಸ್ ಚಾಲಕನ ಮೇಲೆ ಬೈಕ್ ಸವಾರರಿಬ್ಬರು ಹಲ್ಲೆ ನಡೆಸಿದ್ದಾರೆ. ಬಸ್ಸಿಗೆ ದಾರಿ ಬಿಡದೆ ತೊಂದರೆ ನೀಡಿದ್ದ ಬೈಕ್ ಸವಾರರು ಆನಂತರ ಜೇಡಿಕಟ್ಟೆ ಬಳಿ ಬಸ್ ಅಡ್ಡಹಾಕಿ ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಕಂಪ್ಲೆಂಟ್ ಆಗಿದೆ.