NSUI protests : ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ಫಲಿತಾಂಶ ವಿಳಂಬ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವಂತೆ ಒತ್ತಾಯಿಸಿ ಎನ್‌ಎಸ್‌ಯುಐ ಜಿಲ್ಲಾ ಘಟಕವು ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿತು. ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಉಪ-ಕುಲಪತಿ ಶರತ್ ಅನಂತಮೂರ್ತಿ ಮತ್ತು ರಿಜಿಸ್ಟರ್ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.
NSUI protests ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಗಳು
ರಂಭಾಪುರಿ ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳು ಸಮರ್ಪಕವಾಗಿಲ್ಲ. ಮಳೆಗಾಲದಲ್ಲಿ ಕೊಠಡಿಗಳು ಸೋರುತ್ತಿದ್ದು, ಕಳೆದ ಎರಡು ವರ್ಷಗಳಿಂದ ಈ ಸಮಸ್ಯೆ ಇದ್ದರೂ ವಿಶ್ವವಿದ್ಯಾಲಯದ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.
ಕುವೆಂಪು ವಿವಿಯ ಅಡಿಯಲ್ಲಿ ಬರುವ ಎಲ್ಲಾ ಕಾಲೇಜುಗಳಲ್ಲಿ ಬಿಸಿಎ ಪದವಿಗೆ ಸರ್ಕಾರ ನಿಗದಿಪಡಿಸಿದ ಪ್ರವೇಶ ಶುಲ್ಕ ಇದ್ದರೂ, ರಂಭಾಪುರಿ ಕಾಲೇಜು ಮನಬಂದಂತೆ ಶುಲ್ಕ ವಸೂಲಿ ಮಾಡುತ್ತಿದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಅಡ್ಡಿಯಾಗುತ್ತಿದೆ.
ರಂಭಾಪುರಿ ಕಾಲೇಜಿನಲ್ಲಿ ಯಾವುದೇ ರಾಷ್ಟ್ರೀಯ ಹಬ್ಬ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿಲ್ಲ. ವಿದ್ಯಾರ್ಥಿಗಳು ಪ್ರಶ್ನಿಸಿದರೆ, ವಿಶ್ವವಿದ್ಯಾಲಯದಿಂದ ಸಹಕಾರ ದೊರೆಯುತ್ತಿಲ್ಲ ಎಂದು ಪ್ರಾಂಶುಪಾಲರು ಹೇಳುತ್ತಿದ್ದಾರೆ.
ಎಲ್ಲಾ ಕಾಲೇಜುಗಳಲ್ಲಿ ಫಲಿತಾಂಶವು ನಿಗದಿತ ಸಮಯಕ್ಕೆ ಪ್ರಕಟವಾಗುತ್ತಿಲ್ಲ.
ದ್ವಿತೀಯ ಸೆಮಿಸ್ಟರ್‌ನಲ್ಲಿ ಬ್ಯಾಕ್ಲಾಗ್ ಇರುವ ವಿಷಯಗಳನ್ನು 6ನೇ ಸೆಮಿಸ್ಟರ್‌ನಲ್ಲಿ ಬರೆದ ವಿದ್ಯಾರ್ಥಿಗಳ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ. ಇದರಿಂದ ಎಂಸಿಎ ಮತ್ತು ಎಂಕಾಂ ಪ್ರವೇಶಕ್ಕೆ ತೊಂದರೆಯಾಗುತ್ತಿದೆ.
ಒಮ್ಮೆ ಪಾಸ್ ಎಂದು ಪ್ರಕಟವಾದ ಫಲಿತಾಂಶ ನಂತರ ಫೇಲ್ ಎಂದು ತೋರಿಸುತ್ತಿದೆ. ಇಂತಹ ತಾಂತ್ರಿಕ ದೋಷಗಳಿಂದ ವಿದ್ಯಾರ್ಥಿಗಳು ಪದೇಪದೇ ತಮ್ಮ ಸ್ವಂತ ಖರ್ಚಿನಲ್ಲಿ ವಿವಿಗೆ ಭೇಟಿ ನೀಡಬೇಕಾಗಿದೆ.
ಈ ಎಲ್ಲಾ ಸಮಸ್ಯೆಗಳನ್ನು 15 ದಿನಗಳ ಕಾಲಾವಕಾಶದೊಳಗೆ ಬಗೆಹರಿಸದಿದ್ದರೆ, ಕುವೆಂಪು ವಿಶ್ವವಿದ್ಯಾಲಯ ಬಂದ್‌ಗೆ ಕರೆ ನೀಡಲಾಗುವುದು ಎಂದು ಎನ್‌ಎಸ್‌ಯುಐ ಎಚ್ಚರಿಕೆ ನೀಡಿದೆ.
ಪ್ರತಿಭಟನೆಯಲ್ಲಿ ಕುವೆಂಪು ವಿಶ್ವವಿದ್ಯಾಲಯ ಘಟಕದ ಎನ್‌ಎಸ್‌ಯುಐ ಅಧ್ಯಕ್ಷರಾದ ಮುರುಗೇಶ್, ಜಿಲ್ಲಾ ಕಾರ್ಯಧ್ಯಕ್ಷರಾದ ರವಿಕಟಿಕೆರೆ, ನಗರ ಅಧ್ಯಕ್ಷರಾದ ರವಿ, ಚಂದ್ರೋಜಿರಾವ್, ವರುಣ್ ವಿ ಪಂಡಿತ್, ಸುಭಾನ್, ಫರಾದ್, ಆದಿತ್ಯ, ಶ್ರೀಕಾಂತ್, ಕೀರ್ತಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ಆಕ್ರೋಶ ವ್ಯಕ್ತಪಡಿಸಿದರು.
