Shivamogga City Corporation ಶಿವಮೊಗ್ಗದ ಕೆಲವೆಡೆ ಫುಟ್‌ಪಾತ್ ತೆರವು ಕಾರ್ಯಾಚರಣೆ : ಪಾದಚಾರಿಗಳ ಸಮಸ್ಯೆಗೆ ಮುಕ್ತಿ
ಶಿವಮೊಗ್ಗ : ಬೀದಿಬದಿ ವ್ಯಾಪಾರಿಗಳ ಅತಿಕ್ರಮಣದಿಂದಾಗಿ ನಗರದ ಫುಟ್‌ಪಾತ್‌ಗಳು ಪಾದಚಾರಿಗಳ ಓಡಾಟಕ್ಕೆ ಯೋಗ್ಯವಲ್ಲದ ಸ್ಥಿತಿಗೆ ತಲುಪಿದ್ದವು. ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಸಿಬ್ಬಂದಿಗಳು ನಗರದ ಕೆಲವೆಡೆ ಫುಟ್‌ಪಾತ್‌ಗಳ ಮೇಲೆ ಅತಿಕ್ರಮಿಸಿದ್ದ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.
ಬಿ.ಹೆಚ್. ರಸ್ತೆ ಮತ್ತು ಎನ್.ಟಿ. ರಸ್ತೆಯಲ್ಲಿ, ಹೆಲ್ತ್ ಇನ್ಸ್‌ಪೆಕ್ಟರ್ ವಿಕಾಸ್, ಸೂಪರ್‌ವೈಸರ್ ರವಿಕಿರಣ್ ಸೇರಿದಂತೆ ಪೌರಾಕಾರ್ಮಿಕರ ತಂಡ ಫುಟ್‌ಪಾತ್‌ಗಳಲ್ಲಿ ಅಳವಡಿಸಿದ್ದ ಅಂಗಡಿಗಳನ್ನು ತೆರವುಗೊಳಿಸಿತು. ಅಲ್ಲದೆ, ಫುಟ್‌ಪಾತ್ ಮೇಲೆ ಇರಿಸಿದ್ದ ಬೋರ್ಡ್‌ಗಳನ್ನು ತೆಗೆದುಹಾಕುವಂತೆ ವ್ಯಾಪಾರಿಗಳಿಗೆ ಸೂಚಿಸಲಾಯಿತು. ಸೂಚನೆಗಳನ್ನು ಪಾಲಿಸದ ವ್ಯಾಪಾರಿಗಳ ನಾಮಫಲಕಗಳನ್ನು ಮಹಾನಗರ ಪಾಲಿಕೆಯ ಸಿಬ್ಬಂದಿ ತಮ್ಮ ವಾಹನದಲ್ಲಿ ಕೊಂಡೊಯ್ದರು.
ಇದೇ ರೀತಿ, ನಗರದ ಅತ್ಯಂತ ಜನನಿಬಿಡ ಪ್ರದೇಶವಾದ ಗಾಂಧಿ ಬಜಾರ್‌ನಲ್ಲಿಯೂ ಅಂಗಡಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಶಿವಮೊಗ್ಗ ಮಹಾನಗರ ಪಾಲಿಕೆಯ ನಲ್ಮ್ (NALM) ವಿಭಾಗ ಮತ್ತು ಆರೋಗ್ಯ ವಿಭಾಗದ ಸಿಬ್ಬಂದಿ ಜಂಟಿಯಾಗಿ ಸ್ಥಳಕ್ಕೆ ಭೇಟಿ ನೀಡಿ, ವ್ಯಾಪಾರಿಗಳಿಗೆ ತಮ್ಮ ಅಂಗಡಿಗಳನ್ನು ತೆರವುಗೊಳಿಸುವಂತೆ ಸೂಚಿಸಿದರು.


