ksrtc bus : ಹುಲಿಕಲ್ ಘಾಟ್‌ನಲ್ಲಿ ಇಂಧನ ಖಾಲಿಯಾಗಿ ಮಾರ್ಗ ಮಧ್ಯೆ ನಿಂತ ಕೆಎಸ್ಅರ್ಟಿಸಿ ಬಸ್ : ವಾಹನ ಸಂಚಾರ ಅಸ್ತವ್ಯಸ್ತ
ಶಿವಮೊಗ್ಗ: ಹೊಸನಗರ ತಾಲೂಕಿನ ಹುಲಿಕಲ್ ಘಾಟ್‌ನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಒಂದು ರಸ್ತೆ ಮಧ್ಯೆ ಇಂಧನ ಖಾಲಿಯಾಗಿ ನಿಂತುಹೋಗಿದ್ದರಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು. ಈ ಘಟನೆಯು ಶಿವಮೊಗ್ಗ-ಹೊಸನಗರ ಮಾರ್ಗವಾಗಿ ಉಡುಪಿಗೆ ತೆರಳುತ್ತಿದ್ದ ಬಸ್‌ನಲ್ಲಿ ಸಂಭವಿಸಿದೆ.
ಘಾಟ್‌ನ ಮುಖ್ಯ ತಿರುವಿನಲ್ಲಿ ಬಸ್ ನಿಂತ ಕಾರಣ, ಈಗಾಗಲೇ ಕಿರಿದಾದ ಮತ್ತು ತೀವ್ರ ತಿರುವುಗಳನ್ನು ಹೊಂದಿರುವ ಈ ರಸ್ತೆಯಲ್ಲಿ ಇತರ ವಾಹನಗಳ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಸಣ್ಣ ಕಾರುಗಳು ಮತ್ತು ಗೂಡ್ಸ್ ವಾಹನಗಳು ಹೇಗೋ ಬಸ್‌ನ ಪಕ್ಕದಿಂದ ಸಾಗಿದರೂ, ದೊಡ್ಡ ವಾಹನಗಳಿಗೆ ಮುಂದೆ ಸಾಗುವುದು ಕಷ್ಟಕರವಾಯಿತು. ಇದರಿಂದಾಗಿ ವಾಹನ ಸವಾರರು ಮತ್ತು ಪ್ರಯಾಣಿಕರು ತೀವ್ರ ಅನಾನುಕೂಲ ಎದುರಿಸುವಂತಾಯಿತು.
ತಕ್ಷಣವೇ ಸಮೀಪದ ಮಾಸ್ತಿಕಟ್ಟೆಯಿಂದ ತುರ್ತಾಗಿ ಡೀಸೆಲ್ ಪೂರೈಕೆ ಮಾಡಲಾಯಿತು. ಇಂಧನ ಭರ್ತಿ ಮಾಡಿದ ನಂತರ, ಬಸ್ ಮತ್ತೆ ತನ್ನ ಪ್ರಯಾಣ ಮುಂದುವರಿಸಿತು.


