hulikal ghat falls ಶಿವಮೊಗ್ಗ: ಸಹ್ಯಾದ್ರಿಯ ಮಡಿಲಲ್ಲಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ದಟ್ಟ ಅರಣ್ಯದಿಂದ ಕೂಡಿದ ಬೆಟ್ಟಗುಡ್ಡಗಳು ಹಲವು ಜಲಪಾತಗಳಿಗೆ ಜನ್ಮ ನೀಡಿವೆ. ವರ್ಷವಿಡೀ ಹರಿಯುವ ಜಲಪಾತಗಳಿಗೆ ಹೆಸರಿವೆಯಾದರೂ, ಮಳೆಗಾಲದಲ್ಲಿ ಅಸ್ತಿತ್ವಕ್ಕೆ ಬಂದು ಆನಂತರ ಮಾಯವಾಗುವ ಈ ಜಲಧಾರೆಗಳಿಗೆ ಹೆಸರೆಂಬುದೇ ಇಲ್ಲ. ಈ ಮಳೆಗಾಲದ ವಿಶೇಷತೆಯೇ ಹುಲಿಕಲ್ ಘಾಟಿ. ಇಲ್ಲಿನ ರಸ್ತೆ ಬದಿಯಲ್ಲಿ ಭೋರ್ಗೆರೆಯುವ ಜಲಧಾರೆಗಳನ್ನು ನೋಡುವ ಕಣ್ಣುಗಳೇ ಮನಸೋತು, ಅವುಗಳಿಗೆ ಹೆಸರಿಡುವ ಇಚ್ಛೆ ಹುಟ್ಟಿಸುತ್ತವೆ.
hulikal ghat falls ಹುಲಿಕಲ್ ಘಾಟಿಯಲ್ಲಿ ಒಂದು ಸುತ್ತು ಪಯಣಿಸಿದರೆ, ಜಲಧಾರೆಗಳ ಅದ್ಭುತ ಲೋಕವೊಂದು ತೆರೆದುಕೊಳ್ಳುತ್ತದೆ. ರಸ್ತೆಯ ಪಕ್ಕದಲ್ಲಿ ಪ್ರತಿ 100 ರಿಂದ 200 ಅಡಿಗಳ ಅಂತರದಲ್ಲಿ ಜಲಧಾರೆಗಳು ದುಮ್ಮುಕ್ಕುವ ದೃಶ್ಯಗಳು ಕಣ್ಮನ ಸೆಳೆಯುತ್ತವೆ. ಪಚ್ಚೆ ಹಸಿರಿನ ಸಿರಿಯ ನಡುವೆ ಹಾಲ್ಗಡಲಿನಂತೆ ಭೋರ್ಗರೆಯುವ ಈ ಜಲಧಾರೆಗಳು ಮಲೆನಾಡಿನ ಸೌಂದರ್ಯಕ್ಕೆ ಸಾಕ್ಷಿ ಹೇಳುತ್ತವೆ. ಅದರಲ್ಲೂ ವಿಶೇಷವಾಗಿ ಬಾಳೆಬರೆ ಫಾಲ್ಸ್ ಸುಮಾರು 200 ಅಡಿಗಳಷ್ಟು ಎತ್ತರದಿಂದ ಧುಮ್ಮಿಕ್ಕುವ ದೃಶ್ಯ ದಾರಿಹೋಕರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.
ಬೆಟ್ಟಗಳ ಕಂದರಗಳನ್ನು ಸೀಳಿಕೊಂಡು ಭೋರ್ಗರೆಯುತ್ತಾ, ಮುತ್ತಿನ ಮಣಿಗಳ ರೂಪದಲ್ಲಿ ಈ ಜಲಧಾರೆಗಳು ನೇರವಾಗಿ ರಸ್ತೆ ಬದಿಯಲ್ಲಿ ಚಿಮ್ಮುತ್ತವೆ. ಆಗಾಗ ಬಂದು ಹೋಗುವ ಮಂಜುಮುಸುಕು ಈ ಜಲಧಾರೆಗಳ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಈ ಜಲಪಾತಗಳು ಮುಂದೆ ದಟ್ಟ ಅರಣ್ಯಗಳಲ್ಲಿ ಹರಿದು ಸಾಗರವನ್ನು ಸೇರುತ್ತವೆ. ಈ ಮಧ್ಯೆ ಅನೇಕ ದೃಶ್ಯಕಾವ್ಯಗಳನ್ನು ಸೃಷ್ಟಿಸಿ, ನೋಡುಗರನ್ನು ಮೋಡಿ ಮಾಡುತ್ತವೆ. ವಾಹನಗಳಲ್ಲಿ ಪಯಣಿಸುವ ಪ್ರಯಾಣಿಕರು ಮತ್ತು ಪ್ರವಾಸಿಗರು ಇಲ್ಲಿನ ಜಲಧಾರೆಗಳನ್ನು ನೋಡಿ ಆನಂದಿಸುತ್ತಾರೆ.
hulikal ghat falls ಹುಲಿಕಲ್ ಘಾಟಿ: ಪ್ರಕೃತಿ ಸೌಂದರ್ಯದ ಆಗರ
ಮಳೆಗಾಲದಲ್ಲಿ ಬೆಟ್ಟಗುಡ್ಡಗಳಿಂದ ದುಮ್ಮಿಕ್ಕುವ ಜಲಧಾರೆಗಳಿಂದಾಗಿ ಹುಲಿಕಲ್ ಸೌಂದರ್ಯದಿಂದ ಕಂಗೊಳಿಸುತ್ತದೆ. ಪ್ರಕೃತಿದತ್ತವಾದ ವಿಶೇಷತೆಗಳ ಆಗರ ಇದಾಗಿದೆ. ಹುಲಿಕಲ್ ಘಾಟಿಯ ರಸ್ತೆಯಲ್ಲಿ ಸಾಗುವಾಗ ಅದೆಷ್ಟೋ ಜಲಧಾರೆಗಳು ನೋಡುಗರ ಕಣ್ಣಿಗೆ ಕಾಣಸಿಗುತ್ತವೆ. ಮಳೆಗಾಲದಲ್ಲಿ ಹುಟ್ಟಿ, ಮಳೆಗಾಲದಲ್ಲೇ ಮಾಯವಾಗುವ ಈ ಜಲಧಾರೆಗಳು ಸೃಷ್ಟಿಯ ಸೊಬಗಿಗೆ ಸಾಕ್ಷಿಯಾಗಿದೆ. “ಇಂತಹ ಸೌಂದರ್ಯ ತಾಣದಲ್ಲಿ ಜನಿಸಿರುವ ನಾವೇ ಭಾಗ್ಯವಂತರು” ಎನ್ನುತ್ತಾರೆ ಸ್ಥಳೀಯರು. ಮಳೆಗಾಲದಲ್ಲಿ ಈ ಸ್ಥಳಕ್ಕೆ ಪ್ರವಾಸಿಗರು ಬರಬೇಕು, ಪ್ರವಾಸೋದ್ಯಮ ಇಲಾಖೆಯವರು ಇತ್ತ ಗಮನ ಹರಿಸಬೇಕು ಎಂದು ಅವರು ಒತ್ತಾಯಿಸುತ್ತಾರೆ.
ಹುಲಿಕಲ್ ಘಾಟಿಗೆ ಒಂದು ದಿನ ಪಿಕ್‌ನಿಕ್‌ಗೆ ಹೊರಟರೂ, ನಿತ್ಯಹರಿದ್ವರ್ಣ ಪರಿಸರದ ಮುದ ಮನಸ್ಸಿಗೆ ಸಿಗುತ್ತದೆ. ಕೇವಲ ಮಳೆಗಾಲದಲ್ಲಿ ಹುಟ್ಟಿ, ಮಳೆಗಾಲದಲ್ಲೇ ಮಾಯವಾಗುವ ಇಲ್ಲಿನ ಜಲಧಾರೆಗಳು, ನೋಡುಗನಿಗೆ ಕ್ಷಣಕಾಲದಲ್ಲಿ ಪ್ರಕೃತಿಯ ಸೌಂದರ್ಯವನ್ನು ನೋಡಿ ಆನಂದಿಸುವ ರಹಸ್ಯವನ್ನು ಹೇಳುತ್ತವೆ.
ಇನ್ನೇಕೆ ತಡ? ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಈ ಅದ್ಭುತ ಮಳೆಗಾಲದ ಜಲಧಾರೆಗಳ ಲೋಕಕ್ಕೆ ಭೇಟಿ ನೀಡಿ, ಮಲೆನಾಡಿನ ಸೊಬಗನ್ನು ಸವಿಯಬಾರದೇಕೆ?

