SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 14, 2024 | ಶಿವಮೊಗ್ಗ ಜಿಲ್ಲೆ ಸಾಗರ ನಗರಸಭೆಯಲ್ಲಿ ನಡೆದ ವಿಚಾರವೊಂದು ಇದೀಗ ಜಿಲ್ಲಾ ರಾಜಕಾರಣದಲ್ಲಿ ಪರಸ್ಪರ ವಾಗ್ವಾದಕ್ಕೆ ಕಾರಣವಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಬಹಿರಂಗ ಕ್ಷಮೆಯಾಚನೆ ಮಾಡಬೇಕು ಎಂದು ಸಾಗರ ನಗರಸಭೆ ಸದಸ್ಯೆ ಎನ್.ಲಲಿತಮ್ಮ ಒತ್ತಾಯಿಸಿದ್ದಾರೆ.
ಈ ಸಂಬಂಧ ಮಾತನಾಡಿರುವ ಅವರು, ನಗರಸಭೆ ಸಾಮಾನ್ಯಸಭೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ರಾಜ್ಯ ಉಚ್ಚನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ತಮ್ಮನ್ನು ಅಪರಾಧಿ ಎಂದು ಸಂಬೋಧಿಸುವ ಮೂಲಕ ನಗರಸಭೆ ಬಿಜೆಪಿ ಸದಸ್ಯರಾದ ಟಿ.ಡಿ.ಮೇಘರಾಜ್, ಗಣೇಶ್ ಪ್ರಸಾದ್, ಮಧುರಾ ಶಿವಾನಂದ್, ವಿ.ಮಹೇಶ್ ಅವಮಾನ ಮಾಡಿದ್ದಾರೆ ಎಂದು ದೂರಿದ್ದಾರೆ.
ನಾನು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದೇನೆ. ಆದರೆ ನನ್ನನ್ನು ಅವಮಾನಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಿಜೆಪಿ ಸದಸ್ಯರು ಅವಮಾನಿಸಿದ್ದಾರೆ. ತಕ್ಷಣ ಬಹಿರಂಗ ಕ್ಷಮೆ ಕೋರದೆ ಹೋದಲ್ಲಿ ಕಾನೂನು ಹೋರಾಟ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ಕಾಂಗ್ರೇಸ್ ಪರಿಶಿಷ್ಟ ವಿಭಾಗದ ಅಧ್ಯಕ್ಷ ಎಲ್.ಚಂದ್ರಪ್ಪ ಪ್ರತಿಕ್ರಿಯಿಸಿ ಬಿಜೆಪಿ ಸದಸ್ಯರ ವರ್ತನೆಯನ್ನು ಖಂಡಿಸಿ ಶಾಸಕರ ಜೊತೆ ಚರ್ಚೆ ನಡೆಸಿ ಬಿಜೆಪಿ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

SUMMARY | Sagar CMC member N Lalithamma demanded a public apology from BJP district president TD Meghraj.
KEYWORDS | Sagar CMC member N Lalithamma, demanded a public apology, BJP district president TD Meghraj