SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 4, 2024 | SHIMOGA JAIL | ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಮತ್ತೊಂದು ಅಪರೂಪದ ಕಾರ್ಯಕ್ರಮ ನಡೆದಿದೆ. ಇತ್ತೀಚೆಗೆ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ನಡೆದ ಬೀಡಿ ಗಲಾಟೆ ಬಗ್ಗೆ ಸುದ್ದಿಯಾಗಿತ್ತು. ಇದೀಗ ಶಿವಮೊಗ್ಗ ಜೈಲ್‌ನಲ್ಲಿ ಕೈದಿಗಳ ಮನಪರಿವರ್ತನೆಯ ಸಮಾರಂಭವೊಂದು ನಡೆದಿದೆ. ರಾಷ್ಟ್ರಪಿತ ಗಾಂಧೀಜಿ ಅವರ 155ನೇ ಜಯಂತಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ 120ನೇ ಜನ್ಮದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಇಲ್ಲಿನ ಕೈದಿಗಳೇ ವಿಶೇಷವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ವೈಶಿಷ್ಟ್ಯಗೊಳಿಸಿದರು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ. ಮಂಜುನಾಥ ನಾಯ್ಕ ರವರು ಮಾತನಾಡ್ತಾ ನಮ್ಮನ್ನು ಯಾರೂ ನೋಡುತ್ತಿಲ್ಲ ಎಂದು ಭಾವಿಸಿಕೊಂಡು ತಪ್ಪು ಮಾಡಲು ಹೋಗಬಾರದು. ನಾವು ಮಾಡುವ ಎಲ್ಲಾ ತಪ್ಪುಗಳನ್ನೂ ಸಮಾಜ ಗಮನಿಸುತ್ತಿರುತ್ತದೆ. ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವ ಉದ್ದೇಶವೆಂದರೆ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಮನ ಪರಿವರ್ತನೆ ಹೊಂದಬೇಕು ಎಂಬುದೇ ಆಗಿದೆ ಎಂದರು
ಗಾಂಧೀಜಿಯವರು ಹೇಳಿರುವ ಮೂರು ಕೋತಿಗಳ ಕಥೆಯಲ್ಲಿ ಕೆಟ್ಟದ್ದನ್ನು ನೋಡಬೇಡ ಎಂಬ ಸಂದೇಶವನ್ನು ನೀಡುವ ಕೋತಿಯು ತನ್ನ ಕಣ್ಣುಗಳನ್ನು ಮುಚ್ಚಿಕೊಂಡಿರುತ್ತದೆ.
ಆದರೆ ಉಳಿದೆರಡು ಕೋತಿಗಳು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡಿರುವುದಿಲ್ಲ. ಅಂದರೆ ಅವುಗಳಿಗೆ ಕೆಟ್ಟದ್ದನ್ನು ನೋಡುವ ಅವಕಾಶವಿರುತ್ತದೆ ಎಂದು ಅರ್ಥೈಸಬಹುದಾದರೂ ಕೆಟ್ಟದ್ದನ್ನು ಕಂಡಾಗ ಕಣ್ಣು ಮುಚ್ಚಿಕೊಂಡಿರಬೇಕು ಎಂಬ ನೀತಿಪಾಠವನ್ನು ನಾವು ಎಂದೂ ಮರೆಯಬಾರದು ಎಂದು ನ್ಯಾಯಾಧೀಶರು ಸೂಚ್ಯವಾಗಿ ಹೇಳಿದರು.
ವಿಶೇಷ ಅಂದರೆ, ಕಾರ್ಯಕ್ರಮದಲ್ಲಿ ಸತ್ಯ, ಅಹಿಂಸೆ, ಸ್ವಚ್ಛತಾ ಸೇವೆ ಕುರಿತು ವಿಶೇಷ ಮೈಮ್ ಶೋ, ಗಾಂಧೀಜಿ ಮತ್ತು ಶಾಸ್ತ್ರೀಜಿ ಅವರ ಕುರಿತು ವಿಶೇಷ ಗೀತರೂಪಕ, ದೇಶಭಕ್ತಿ-ಭಾವೈಕ್ಯತೆಯ ಕಿರುರೂಪಕ, ಗಾಂಧಿ ಗೀತಗಾಯನ, ದೇಶಭಕ್ತಿ ನೃತ್ಯ ಮೊದಲಾದ ಕಾರ್ಯಕ್ರಮಗಳನ್ನು ಬಂದಿನಿವಾಸಿಗಳು ನಡೆಸಿಕೊಟ್ಟರು. ಈ ವೇಳೆ ಬಂಧಿಗಳು ಮಹಾತ್ಮಾ ಗಾಂಧಿಜಿ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ವೇಷ ಧರಿಸಿದ್ದು ವಿಶೇಷವಾಗಿತ್ತು.
ಒಟ್ಟಾರೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ. ಸಂತೋಷ್ ಕೆ. ಎಸ್. ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಡಾ. ಪಿ. ರಂಗನಾಥ್ ಸಹಾಯಕ ಅಧೀಕ್ಷಕರಾದ ಪ್ರೀತಿ ಆರ್. ಜೈಲರರಾದ ಶ್ರೀಶೈಲ ಕಟ್ಟಿಮನಿ, ಅನಿಲ್‌ಕುಮಾರ್ ಎಸ್. ಎಸ್., ಶ್ರೀಮತಿ ಸುಷ್ಮಾ ಬಿ. ವಡಗೇರಿ, ಸಂಸ್ಥೆಯ ಶಿಕ್ಷಕರಾದ ಗೋಪಾಲಕೃಷ್ಣ ಮತ್ತು ಲೀಲಾ ಎಸ್. ಎನ್. ಮೊದಲಾದವರು ಉಪಸ್ಥಿತರಿದ್ದರು.
ಮಲೆನಾಡು ಟುಡೆ ಫೋಟೋ