SHIVAMOGGA| MALENADUTODAY NEWS | ಮಲೆನಾಡು ಟುಡೆ Mar 5, 2025
ಇತ್ತೀಚೆಗೆ ಶಿವಮೊಗ್ಗಕ್ಕೆ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬಂದಿದ್ದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮತಾಲಿಕ್ ರವರನ್ನು ಜಿಲ್ಲಾಡಳಿತ ನಗರ ಪ್ರವೇಶ ಮಾಡದಂತೆ ತಡೆದು, ನೋಟಿಸು ಕೊಟ್ಟು ವಾಪಸ್ ಕಳುಹಿಸಿತ್ತು. ಈ ನಡುವೆ ಹೈಕೋರ್ಟ್ ಶ್ರೀರಾಮ ಸೇನೆ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ಗೆ ಶಿವಮೊಗ್ಗ ಪ್ರವೇಶಕ್ಕೆ ಅನುಮತಿಯನ್ನು ನೀಡಿದೆ. ನಿನ್ನೆ ಮಂಗಳವಾರ ಹೈಕೋರ್ಟ್ ಲವ್ ಜಿಹಾದ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಶಿವಮೊಗ್ಗ ಜಿಲ್ಲೆ ಪ್ರವೇಶಿಸಲು ಪ್ರಮೋದ್ ಮುತಾಲಿಕ್ರಿಗೆ ಅನುಮತಿ ನೀಡಿದ್ದು, ಸಾರ್ವಜನಿಕ ಶಾಂತಿಗೆ ಭಂಗ ತರುವ ರೀತಿಯಲ್ಲಿ ವಿವಾದ ಮಾಡಬಾರದು ಎಂದು ಎಚ್ಚರಿಸಿದೆ.
ವರದಿಯ ಪ್ರಕಾರ, ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನರವರು ಇರುವ ಏಕಸದಸ್ಯ ಪೀಠ ಮುತಾಲಿಕ್ರಿಗೆ ಶಿವಮೊಗ್ಗ ಪ್ರವೇಶಕ್ಕೆ ಅವಕಾಶ ನೀಡಿದೆ.
ಕಳೆದ ಫೆಬ್ರವರಿ ಫೆಬ್ರವರಿ 28ರಂದು ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ನೋಟಿಸ್ ಪ್ರಶ್ನಿಸಿ ಹಾಗೂ ನಿರ್ಬಂಧವನ್ನು ರದ್ದು ಪಡಿಸುವಂತೆ ಕೋರಿ ಪ್ರಮೋದ್ ಮುತಾಲಿಕ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ಅರ್ಜಿದಾರರು ಶಿವಮೊಗ್ಗ ಜಿಲ್ಲೆಯ ಪ್ರವೇಶಿಸಿ ಲವ್ ಜಿಹಾದ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಆದರೆ, ಸಾರ್ವಜನಿಕ ಶಾಂತಿಗೆ ಧಕ್ಕೆಯಾಗುವ ರೀತಿಯಲ್ಲಿ ಯಾವುದೇ ವಿವಾದ ಉಂಟು ಮಾಡಬಾರದು ಎಂದು ಸೂಚಿಸಿದೆ.
ತಮ್ಮ ಅರ್ಜಿಯಲ್ಲಿ ಪ್ರಮೋದ್ ಮುತಾಲಿಕ್ ಪರ ವಕೀಲರು, ಬೆಂಗಳೂರು, ಮೈಸೂರು ಹಾಗೂ ಬೆಳಗಾವಿಯಲ್ಲಿ ಲೇಖಕ ಗಂಗಾಧರ್ ಕುಲಕರ್ಣಿ ಬರೆದಿರುವ ಲವ್ ಜಿಹಾದ್ ಪುಸ್ತಕ ಬಿಡುಗಡೆ ಆಗಿದೆ. ಅಲ್ಲಿಯ ಕಾರ್ಯಕ್ರಮಗಳಲ್ಲಿ ಪ್ರಮೋದ್ ಮುತಾಲಿಕ್ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ಯಾವುದೇ ಶಾಂತಿಭಂಗ ಆಗುವಂತಹ ಘಟನೆ ಸಂಭವಿಸಿಲ್ಲ. ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ತಡೆಯಲಾಗಿದೆ. ಇದು ರಾಜಕೀಯ ಪ್ರೇರಿತ ಎಂದು ವಾದಿಸಿದ್ದರು.
ಎನಾಗಿತ್ತು ಅಂದು
ಕಳೆದ ಫೆಬ್ರವರಿ 28 ರಂದು ಪ್ರಮೋದ್ ಮುತಾಲಿಕ್ ಹುಬ್ಬಳ್ಳಿಯಿಂದ ಶಿವಮೊಗ್ಗಕ್ಕೆ ಆಗಮಿಸ್ತಿದ್ದರು. ಅವರು ಮಾರ್ಚ್ 1 ರಂದು ನಡೆಯಬೇಕಿದ್ದ ಲವ್ ಜಿಹಾದ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿದ್ದರು. ಆದರೆ ಮುತಾಲಿಕ್ರನ್ನ ಶಿವಮೊಗ್ಗ ಪೊಲೀಸರು ರಾಗಿಗುಡ್ಡದ ಚೌಡೇಶ್ವರಿ ದೇವಾಲಯದ ಬಳಿ ತಡೆದು ಅವರಿಗೆ ಡಿಸಿ ಆದೇಶ ತೋರಿಸಿ ವಾಪಸ್ ಕಳುಹಿಸಿದ್ದರು.