SHIVAMOGGA | MALENADUTODAY NEWS | ಮಲೆನಾಡು ಟುಡೆ Mar 3, 2025
ಶಿವರಾತ್ರಿ ಕಳೆಯುತ್ತಲೇ ಬಿಸಿಲು ಝಳ ಝಳ ಅನ್ನುವುದಕ್ಕೆ ಆರಂಭಿಸಿದೆ. ಎಂಥಾ ಮಳೆ ಮಾರಾಯ ಅನ್ನುತ್ತಿದ್ದ ಸ್ಥಳದಲ್ಲಿಯೇ ಇದೆಂಥಾ ಬಿಸಿಲು ಯಬ್ಬ್ಯಾಎನ್ನುವಂತಹ ಉದ್ಘಾರ ಕೇಳಿಬರುತ್ತಿದೆ. ಮೇಲಾಗಿ ಥಂಡಿ ಗಾಳಿಗೆ ಮೈವೊಡ್ಡಿದ್ದ ದೇಹಗಳಿಗೆ ಇದೀಗ ಬಿಸಿಲ ತಾಪವನ್ನು ಒಂದೇ ಏಟಿಗೆ ಸಹಿಸಲಾಗುತ್ತಿಲ್ಲ. ಬದಲಾದ ವಾತಾವರಣದ ನಡುವೆ ಮನುಷ್ಯ ಕಾಯಿಲೆ ಬೀಳುತ್ತಿದ್ದಾನೆ. ಈ ಬಗ್ಗೆ ಮಲೆನಾಡು ಟುಡೆಯ ಮೊದಲ ಅಂಕಣ ವರದಿ ಹೀಗಿದೆ : ಬಿಸಿ ಮುಟ್ಟಿಸಿದ ಬಿಸಿಲು! ಬಾಡಿ ಹೀಟೂ ಏರಿದರೇ ಏನಾಗುತ್ತೆ ಗೊತ್ತಾ!? ಜಾಗೃತೆಗೆ ಏನು ಮಾಡಬೇಕು! ವಿವರ ಹೀಗಿದೆ
ಮುಂದುವರಿದು ಬೇಸಿಗೆಯ ಅವಧಿಯಲ್ಲಿ ಏನನ್ನು ತಿನ್ನಬೇಕು!, ಏನನ್ನು ಕುಡಿಯಬೇಕು, ಕೋಲ್ಡ್ ನೀರು ಒಳ್ಳೆಯದಾ ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ಬೇಸಿಗೆಗಾಲದಲ್ಲಿ ಏನನ್ನು ತಿನ್ನಬೇಕು
* ತರಕಾರಿಗಳು- ಸ್ಥಳೀಯವಾಗಿ ಲಭ್ಯವಿರುವ ಹಸಿ ತರಕಾರಿಗಳಾದ ಸೌತೆಕಾಯಿ, ಹಾಗಲಕಾಯಿ, ಸೋರೆಕಾಯಿ, ಪಡವಲಕಾಯಿ, ಕುಂಬಳಕಾಯಿ ಹಾಗು ಗೆಡ್ಡೆಗಳಾದ ಬೀಟ್ ರೂಟ್, ಕ್ಯಾರೆಟ್, ಮೂಲಂಗಿ ಮತ್ತು ಹಸಿರು ಸೊಪ್ಪುಗಳು ಇತ್ಯಾದಿಗಳನ್ನು ಬಳಸಬೇಕು.
* ಹಣ್ಣುಗಳು- ನೆಲ್ಲಿಕಾಯಿ/ಬೆಟ್ಟದ ನೆಲ್ಲಿಕಾಯಿ, ಬಾಳೆ ಹಣ್ಣು, ಕಲ್ಲಂಗಡಿ, ಮಾವು, ಮೂಸಂಬಿ, ಕಿತ್ತಳೆ ಹಣ್ಣು ಇತ್ಯಾದಿ.
*ರಾಗಿಹಿಟ್ಟು ಹಾಗೂ ಹೆಸರು ಬೇಳೆಗಳನ್ನು ಆಹಾರದಲ್ಲಿ ಬಳಸಿದರೆ ಉತ್ತಮ.
* ದೇಹವನ್ನು ತಂಪಾಗಿಸುವ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುವ ಶುಂಠಿ ಹಾಗೂ ಕರಿಬೇವಿನಂತಹ ಮೂಲಿಕೆಗಳನ್ನು ಮೊಸರಿನಲ್ಲಿ ಬೆರಸಿ ಮಾಡಲಾಗುವ ತಂಬುಳಿ, ಅಂಬಲಿ, ನೀರು ಪದಾರ್ಥಗಳು ಅಥವಾ ಸ್ಥಳೀಯ ದ್ರವ ಆಹಾರಗಳನ್ನು ಸೇವಿಸಬೇಕು.
* ಕನಿಷ್ಠ ಒಂದು ಹೊತ್ತಿನ ಊಟದಲ್ಲಾದರೂ ತುಪ್ಪವನ್ನು ಬಳಸುವುದು ಉತ್ತಮ.
* ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಖಾರದ ಮತ್ತು ಅಧಿಕ ಉಪ್ಪಿನ ಅಂಶವಿರುವ ಪದಾರ್ಥಗಳನ್ನು ಬಳಸುವುದನ್ನು ಕಡಿಮೆ ಮಾಡಬೇಕು.
ಸಕ್ಕರೆಯ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು.
ಏನೇನು ಕುಡಿಯಬಹುದು…?
* ದೇಹಕ್ಕೆ ದಾಹ ಎನಿಸದಿದ್ದಾಗಲೂ ಸಹ ನೀರಿನ ಬಳಕೆ ನಿರಂತರವಾಗಿರಲಿ. ಅದಕ್ಕೆ ಮಣ್ಣಿನ ಮಡಕೆಯಲ್ಲಿ ಶೇಖರಿಸಿದ ತಂಪಾದ ನೀರನ್ನು ಆಗಾಗ ಕುಡಿಯುತ್ತಿರಿ.
* ರಾತ್ರಿ ಕೊತ್ತಂಬರಿ ಬೀಜಗಳನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದು ಕುಡಿಯಿರಿ. ದೇಹ ಇನ್ನಷ್ಟು ತಂಪಾಗಿರುವುದು.
ಇವೆಲ್ಲಾ ಕ್ರಮ ಕೈಗೊಳ್ಳಬಹುದು
* ತೀರಾ ತಂಪಾದ/ಕೊರೆಯುವ ನೀರನ್ನು ಕುಡಿಯಬೇಡಿ. ಅದರಿಂದ ಹೊಟ್ಟೆಯ ಸ್ನಾಯುಸೆಳೆತ ಹಾಗೂ ಅಜೀರ್ಣ ಉಂಟಾಗಬಹುದು.
* ಮದ್ಯ, ಚಹಾ, ಕಾಫಿ, ತಂಪಾದ ಪಾನೀಯಗಳು, ಸೋಡಾ ಹಾಗು ಇತರ ಕಾರ್ಬೊನೇಟೆಡ್ ಪಾನೀಯಗಳಿಂದ ದೂರ ಇರಬೇಕು. ಇದು ದೇಹದ ತಾಪವನ್ನು ಹೆಚ್ಚಿಸುತ್ತದೆ ಹಾಗು ನಿರ್ಜಲೀಕರಣ(ಡಿ ಹೈಡೇಶನ್) ಉಂಟುಮಾಡುವುದು.
* ಎಳನೀರು, ಕಬ್ಬಿನ ಹಾಲು, ಮಜ್ಜಿಗೆ, ಹಣ್ಣಿನ ರಸದಂತಹ ಪಾನೀಯಗಳನ್ನು ಹೆಚ್ಚಾಗಿ ಸೇವಿಸಿ.
* ಇತರ ಸ್ಥಳೀಯ ಪೇಯಗಳಾದ ಮನೆಯಲ್ಲೇ ಸಿದ್ದಪಡಿಸಿದ ಲಸ್ಸಿ, ತೋರಣಿ (ಅಕ್ಕಿ ಗಂಜಿ), ಉಶೀರಾ ರಸ ಬಳಸುವುದು ಸೂಕ್ತ.
*ಓ. ಆರ್. ಎಸ್. ಹಾಗು ಗ್ಲಕೋಸ್ ಮಿಶ್ರಿತ ನೀರನ್ನು ಹೊರಾಂಗಣದಲ್ಲಿದ್ದಾಗ ಹೆಚ್ಚಾಗಿ ಸೇವಿಸಿ.