SHIVAMOGGA | MALENADUTODAY NEWS | ಮಲೆನಾಡು ಟುಡೆ | Apr 7, 2025
ಶಿವಮೊಗ್ಗ | ಕುವೆಂಪು ವಿಶ್ವವಿದ್ಯಾಲಯ, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಮತ್ತು ವ್ಯಾಲ್ಯೂ ಪ್ರಾಡಕ್ಟ್ ಸಂಸ್ಥೆಯ ಸಹಯೋಗದಲ್ಲಿ ಏಪ್ರಿಲ್ 10 ರಿಂದ 12ರವರೆಗೆ “ನೋನಿಯ ಸಂಶೋಧನಾ ಪ್ರವೃತ್ತಿಗಳು ಮತ್ತು ಆರೋಗ್ಯಕರ ಬದುಕಿಗೆ ಜೀವ ವೈವಿಧ್ಯತೆಯ ಸುಸ್ಥಿರ ಬಳಕೆ” ಕುರಿತ ಮೂರು ದಿನಗಳ ಅಂತರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಕುವೆಂಪು ವಿವಿ ಯ ಪ್ರಾಧ್ಯಾಪಕ ಮತ್ತು ಸಮ್ಮೇಳನದ ಸಂಚಾಲಕರಾದ ವಿ ಕೃಷ್ಣ ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಜಂಟೀ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು ಇತ್ತೀಚಿನ ವರ್ಷಗಳಲ್ಲಿ ಜಗತ್ತಿನಾದ್ಯಂತ ಗಿಡಮೂಲಿಕೆಗಳನ್ನು ಆಧರಿಸಿದ ಔಷಧಿಗಳು ಜನಪ್ರಿಯವಾಗುತ್ತಿವೆ. ಸಂಶ್ಲೇಷಿತ (ಸಿಂಥೆಟಿಕ್) ಔಷಧಗಳಿಗೆ ಹೋಲಿಸಿದರೆ ಗಿಡಮೂಲಿಕೆ ಆಧಾರಿತ ಔಷಧ ಉತ್ಪನ್ನಗಳು ಹೆಚ್ಚು ಸುರಕ್ಷಿತ ಮತ್ತು ಅಡ್ಡಪರಿಣಾಮಗಳಿಲ್ಲದಿರುವುದನ್ನು ಇತ್ತೀಚಿನ ಸಂಶೋಧನೆಗಳು ಗಿಡಮೂಲಿಕೆಗಳು ಔಷಧೀಯ ದೃಢಪಡಿಸಿವೆ. ಯಾವುದೇ ಸಂಶೋಧನೆ ಕೇವಲ ವಿಶ್ವವಿದ್ಯಾಲಯದ ಪ್ರಯೋಗಾಲಯಗಳಿಗೆ ಸೀಮಿತವಾಗದೆ ಸಮಾಜಮುಖಿಯಾಗಿರಬೇಕು. ಸಂಶೋಧನೆಗಳ ಅನ್ವಯಿಕತೆಯ ಪ್ರಯೋಜನ ಸಾರ್ವಜನಿಕರಿಗೆ ಸಿಗಬೇಕು ಮತ್ತು ಈ ಕುರಿತು ಎಲ್ಲರಲ್ಲೂ ಜಾಗೃತಿ ಮೂಡಿಸಬೇಕು ಎಂಬ ಉದ್ದೇಶದಿಂದ ಮೊಟ್ಟ ಮೊದಲ ಬಾರಿಗೆ ಜೀವವಿಜ್ಞಾನಗಳ ಎಂಟು ವಿಭಾಗಗಳು ಒಟ್ಟಾಗಿ ಈ ಮಹತ್ವದ ಸಮ್ಮೇಳನವನ್ನು ಆಯೋಜಿಸುತ್ತಿವೆ ಎಂದರು.
ಅಂತರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಥಾಯ್ಲೆಂಡ್‌ನ ಚುಲಾ ಲೋಂಗ್‌ಕಾರ್ನ್ ವಿಶ್ವವಿದ್ಯಾಲಯ ಕಾರ್ಯನಿರ್ವಾಹಕ ನಿರ್ದೇಶಕರಾದ ಪ್ರೊ. ಸುಖಾಡ ಸುಕ್ರೋಂಗ್ ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ಹೈದರಾಬಾದ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಅಪ್ಪಾ ರಾವ್ ಪೊಡಿಲೆ ಉದ್ಘಾಟಿಸಲಿದ್ದಾರೆ. ಚೀನಾದ ವಿದ್ಯುನ್ಮಾನ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಪ್ರೊ. ಸಜೀವ ಮಹಾರಟ್ಟಿ ಕುಂಬುರ, ಅಮೆರಿಕಾದ ಅಲಾಬಾಮಾ ವಿಶ್ವವಿದ್ಯಾಲಯದ ಪ್ರೊ. ದರ್ಶನ್, ಎಸ್. ಸಿ ಮತ್ತು ಕೆಳದಿ ಶಿವಪ್ಪನಾಯಕ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಆರ್. ಸಿ. ಜಗದೀಶ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಕುಲಸಚಿವ ಶ್ರೀ. ಎ. ಎಲ್. ಮಂಜುನಾಥ್ ಮತ್ತು ವ್ಯಾಲ್ಯೂ ಪ್ರಾಡಕ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಕೆ. ಶ್ರೀನಿವಾಸಮೂರ್ತಿ ಗೌರವಾನ್ವಿತ ಅತಿಥಿಗಳಾಗಿರುತ್ತಾರೆ ಎಂದರು.
ಈ ಸಮ್ಮೇಳನಕ್ಕೆ ಸುಮಾರು 644 ಸಂಶೋಧಕರು, ಅಧ್ಯಾಪಕರು ನೋಂದಾಯಿಸಿಕೊಂಡಿದ್ದಾರೆ. 203 ಸಂಶೋಧನಾ ಸಾರಾಂಶಗಳು ಸ್ವೀಕೃತವಾಗಿದ್ದು, ಇದರಲ್ಲಿ ಕರ್ನಾಟಕದಿಂದ 131 ಮತ್ತು ಹೊರರಾಜ್ಯ ಮತ್ತು ದೇಶಗಳಿಂದ 72 ಅಬ್‌ಸ್ಟ್ರಾಕ್ಟ್‌ಗಳು ಬಂದಿವೆ. ಸಮ್ಮೇಳನದ ಮೊದಲ ದಿನದಂದು ಇನ್ನೂ ಸುಮಾರು 100 ರಿಂದ 150 ಸಂಶೋಧಕರು ನೋಂದಾಯಿಸಿಕೊಳ್ಳುವ ನಿರೀಕ್ಷೆಯಿದೆ. ನೊಂದಾಯಿತ ಸಂಶೋಧಕರಿಗೆ ಮೂರು ದಿವಸಗಳ ಊಟ-ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
SUMMARY | A three-day international conference on “Noni’s research trends and sustainable use of biodiversity for healthy living” is being organised from April 10 to 12
KEYWORDS | international conference, biodiversity, Noni’s,