Leopard attack ಚಿಕ್ಕಮಗಳೂರಿನಲ್ಲಿ ಬೈಕ್ ಸವಾರರ ಮೇಲೆ ಚಿರತೆ ದಾಳಿ: ಇಬ್ಬರಿಗೆ ಗಂಭೀರ ಗಾಯ
ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಿದ್ದರಹಳ್ಳಿ ಗ್ರಾಮದ ಬಳಿ ಚಿರತೆಯೊಂದು ಬೈಕ್ ಸವಾರರ ಮೇಲೆ ಏಕಾಏಕಿ ದಾಳಿ ನಡೆಸಿ ಇಬ್ಬರನ್ನು ಗಂಭೀರವಾಗಿ ಗಾಯಗೊಳಿಸಿದ ಘಟನೆ ವರದಿಯಾಗಿದೆ.
ಗಾಯಗೊಂಡವರನ್ನು ಮಂಜುನಾಥ್ (59) ಮತ್ತು ಮೂರ್ತಿ (60) ಎಂದು ಗುರುತಿಸಲಾಗಿದೆ. ಇಬ್ಬರೂ ತಮ್ಮ ಮೊಮ್ಮಗನನ್ನು ಶಾಲೆಗೆ ಬಿಡಲು ಬೈಕ್‌ನಲ್ಲಿ ತೆರಳುತ್ತಿದ್ದಾಗ, ಚಿರತೆ ಏಕಾಏಕಿ ಅವರ ಮೇಲೆ ದಾಳಿ ನಡೆಸಿದೆ. ಚಿರತೆ ದಾಳಿಯಿಂದಾಗಿ ಮಂಜುನಾಥ್ ಮತ್ತು ಮೂರ್ತಿಯವರಿಗೆ ಗಂಭೀರ ಗಾಯಗಳಾಗಿದ್ದರೂ, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯನ್ನು ಕಂಡ ಗ್ರಾಮಸ್ಥರು ಚಿರತೆಗೆ ಕಲ್ಲಿನಿಂದ ಹೊಡೆದು ಓಡಿಸಿದ್ದಾರೆ.
ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗಂಭೀರ ಗಾಯಗೊಂಡ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
