Kutralli toll gate ಕುಟ್ರಳ್ಳಿ ಟೋಲ್ ಗೇಟ್ ವಿವಾದ: ಅಧಿವೇಶನದಲ್ಲಿ ಚರ್ಚಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ
ಶಿವಮೊಗ್ಗ: ಕುಟ್ರಳ್ಳಿ ಟೋಲ್ ಗೇಟ್ ಸಮಸ್ಯೆಯನ್ನು ಮುಂಬರುವ ಅಧಿವೇಶನದಲ್ಲಿ ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಟೋಲ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಜಿ.ಪಿ. ಶಿವರಾಜ್ ಎಚ್ಚರಿಕೆ ನೀಡಿದ್ದಾರೆ.
Kutralli toll gate ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವರಾಜ್ ಅವರು, ಕಳೆದ ಒಂದು ವರ್ಷದಿಂದ ಶಿಕಾರಿಪುರದ ಜನರು ಕುಟ್ರಳ್ಳಿ ಬಳಿಯ ಟೋಲ್ ಗೇಟ್ ತೆರವಿಗೆ ನಿರಂತರವಾಗಿ ಆಗ್ರಹಿಸುತ್ತಿದ್ದಾರೆ. ಈ ವಿಷಯವಾಗಿ ಈಗಾಗಲೇ ಸಾವಿರಾರು ಜನರು ಹೋರಾಟ ನಡೆಸಿದ್ದಾರೆ.ನಮ್ಮ ಹೋರಾಟ ಆರಂಭವಾದ ನಂತರ ಎರಡು ಬಾರಿ ವಿಧಾನಸಭೆ ಅಧಿವೇಶನ ನಡೆದಿದೆ. ಆದರೆ ಈ ವಿಷಯದ ಬಗ್ಗೆ ನಮ್ಮ ಜಿಲ್ಲೆಯ ಸಚಿವರು ಹಾಗೂ ಶಾಸಕರು ಸದನದಲ್ಲಿ ಪ್ರಸ್ತಾಪಿಸಿಲ್ಲ. ಈ ಬಾರಿ ನಡೆಯುವ ಅಧಿವೇಶನದಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಚರ್ಚಿಸಬೇಕು. ಅಲ್ಲಿಯವರೆಗೆ ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಟೋಲ್ ಶುಲ್ಕದಿಂದಾಗಿ ಬಸ್ ಪ್ರಯಾಣ ದರ ಹೆಚ್ಚಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದರು.
ಈ ಹಿಂದೆ ಸುರತ್ಕಲ್‌ನಲ್ಲಿ ನಡೆದ ಹೋರಾಟದ ಫಲವಾಗಿ ಟೋಲ್‌ಗಳನ್ನು ತೆಗೆದುಹಾಕಲಾಗಿತ್ತು. ಆದರೆ, ನಮ್ಮ ಜಿಲ್ಲೆಯಲ್ಲಿ ಈ ಕುರಿತು ಜಿಲ್ಲಾಧಿಕಾರಿಗಳನ್ನು ಕೇಳಿದರೆ, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ ಎಂದು ಶಿವರಾಜ್ ಬೇಸರ ವ್ಯಕ್ತಪಡಿಸಿದರು. ಈ ಬಾರಿಯೂ ಸಚಿವರು ಮತ್ತು ಶಾಸಕರು ಈ ವಿಷಯದ ಬಗ್ಗೆ ಧ್ವನಿ ಎತ್ತದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಪುನರುಚ್ಚರಿಸಿದರು.
