Karate Championship : ಶಿವಮೊಗ್ಗದಲ್ಲಿ 6ನೇ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿ : ಬೃಹತ್ ಟ್ರೋಫಿ ಅನಾವರಣ
ಶಿವಮೊಗ್ಗ: ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಶನ್ ವತಿಯಿಂದ 6ನೇ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಯನ್ನು ಆಗಸ್ಟ್ 9 ಮತ್ತು 10 ರಂದು ನಗರದ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಅಸೋಸಿಯೇಶನ್ ಅಧ್ಯಕ್ಷ ವಿನೋದ್ ಹೇಳಿದರು.
ಅಸೋಸಿಯೇಶನ್ 2010 ರಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಜೊತೆಗೆ ಇಂಡೋ-ಶ್ರೀಲಂಕಾ ಹಾಗೂ ಇಂಡೋ-ನೇಪಾಳ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ದಕ್ಷಿಣ ಭಾರತದ ಅತಿ ದೊಡ್ಡ ಕರಾಟೆ ಪಂದ್ಯಾವಳಿಯಾದ ಶಿವಮೊಗ್ಗ ಓಪನ್ 6ನೇ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿನೋದ್ ತಿಳಿಸಿದರು.
ಈ ಬೃಹತ್ ಕರಾಟೆ ಪಂದ್ಯಾವಳಿಗೆ ಅಮೆರಿಕ, ಶ್ರೀಲಂಕಾ, ನೇಪಾಳ ಸೇರಿದಂತೆ ದೇಶದ ಸುಮಾರು 12 ರಾಜ್ಯಗಳಿಂದ ಅಂದಾಜು 1500 ಕ್ರೀಡಾಪಟುಗಳು ಆಗಮಿಸುವ ನಿರೀಕ್ಷೆಯಿದೆ. ಪಂದ್ಯಾವಳಿಯು ಕತಾ ಮತ್ತು ಕುಮತಿ ವಿಭಾಗಗಳನ್ನು ಒಳಗೊಂಡಿರುತ್ತದೆ. 6 ರಿಂದ 18 ವರ್ಷ ಮೇಲ್ಪಟ್ಟ ಕ್ರೀಡಾಪಟುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಅವಕಾಶವಿದ್ದು, ಒಬ್ಬರಿಗೆ 1500 ರೂಪಾಯಿ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ ಎಂದು ವಿವರಿಸಿದರು.


ಭಾರತದ ಖ್ಯಾತ ಚಿತ್ರನಟ ಹಾಗೂ ಕರಾಟೆ ಬ್ಲಾಕ್ ಬೆಲ್ಟ್ ಸುಮನ್ ತಲ್ವಾರ್ ಮತ್ತು ಅಮೆರಿಕದಿಂದ ಗ್ರಾಂಡ್ ಮಾಸ್ಟರ್ ಒಬ್ಬರು ಈ ಪಂದ್ಯಾವಳಿಗೆ ಆಗಮಿಸಲಿದ್ದಾರೆ. ಶಿವಮೊಗ್ಗದಿಂದಲೇ ಸುಮಾರು 200 ಸ್ಥಳೀಯ ಸ್ಪರ್ಧಿಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದಾರೆ.

Karate Championship ಪಂದ್ಯಾವಳಿಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಆಕರ್ಷಕ ಪದಕ, ಟ್ರೋಫಿ ಮತ್ತು ಪ್ರಮಾಣಪತ್ರಗಳನ್ನು ನೀಡಲಾಗುವುದು. ಅತಿ ಹೆಚ್ಚು ಸ್ಪರ್ಧಿಗಳನ್ನು ಹೊಂದಿರುವ ತಂಡಕ್ಕೆ ವಿಶೇಷ ಬಹುಮಾನ ಸೇರಿದಂತೆ ಓವರ್‌ಆಲ್ ಚಾಂಪಿಯನ್‌ಶಿಪ್ ಟ್ರೋಫಿಯನ್ನು ಪ್ರದಾನ ಮಾಡಲಾಗುವುದು ಎಂದು ವಿನೋದ್ ತಿಳಿಸಿದರು. ಪಂದ್ಯಾವಳಿಗೆ ಬರುವ ಸ್ಪರ್ಧಿಗಳಿಗೆ ವಸತಿ, ಊಟ ಮತ್ತು ಪ್ರಥಮ ಚಿಕಿತ್ಸೆ ವ್ಯವಸ್ಥೆಗಳನ್ನು ಮಾಡಲಾಗಿದೆ. ಪಂದ್ಯಾವಳಿಯಲ್ಲಿ ಏಷಿಯನ್ ಮತ್ತು ರಾಷ್ಟ್ರೀಯ ತೀರ್ಪುಗಾರರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಆಗಸ್ಟ್ 9 ಮತ್ತು 10 ರಂದು ನಡೆಯುವ ಕರಾಟೆ ಪಂದ್ಯಾವಳಿಯಲ್ಲಿ ವಿಜೇತರಾಗುವ ಅಭ್ಯರ್ಥಿಗಳಿಗೆ ನೀಡುವ 8 ಟ್ರೋಫಿಗಳನ್ನು ಅನಾವರಣಗೊಳಿಸಲಾಯಿತು. ಕರಾಟೆ ವಿಜೇತರಿಗೆ ಇಷ್ಟು ದೊಡ್ಡ ಟ್ರೋಫಿಗಳನ್ನು ನೀಡುತ್ತಿರುವುದು ಇದೇ ಮೊದಲು ಎಂದು ವಿನೋದ್ ಹೇಳಿದರು.
