Jp story :ವನಸಿರಿ: ಪ್ರಕೃತಿಯೇ ದೈವವೆಂದು ಸಾರುವ ಕಥೆ
Jp story “ಪ್ರಕೃತಿಯೇ ನಮ್ಮ ದೈವ” ಎಂಬ ಸತ್ಯವನ್ನು ಸಾರುವ ಕಥೆ ಇದು. ಗ್ರಾಮೀಣ ಪ್ರತಿಭೆಗಳ ಅದ್ಭುತ ಪರಿಕಲ್ಪನೆಯಲ್ಲಿ ಮೂಡಿಬಂದ ಸಾಕ್ಷ್ಯಚಿತ್ರ ‘ವನಸಿರಿ’, ವಿಜ್ಞಾನ, ದೇವರು, ನಂಬಿಕೆ ಮತ್ತು ಸಂಪ್ರದಾಯ ಇವೆಲ್ಲವೂ ಒಂದೇ ಸರಳ ರೇಖೆಯಲ್ಲಿ ಸಾಗುವಂತೆ ಚಿತ್ರಿಸಲಾಗಿದೆ.
ತೀರ್ಥಹಳ್ಳಿಯ ಶ್ರೀ ಶಿರುಪತಿ ವ್ಯಾಘ್ರನರಸಿಂಹ ಸ್ವಾಮಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಕಿರುಚಿತ್ರವನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದೆ. 23 ನಿಮಿಷ 36 ಸೆಕೆಂಡುಗಳ ಈ ಸಿನಿಮಾ, ಪ್ರಕೃತಿಯನ್ನು ಉಳಿಸುವ ಸಂದೇಶ ಸಾರುತ್ತದೆ.
Jp story ಪ್ರಕೃತಿಯು ತನ್ನ ಒಡಲಿನಲ್ಲಿ ಸಾವಿರಾರು ವಿಸ್ಮಯಗಳನ್ನು ಅಡಗಿಸಿಕೊಂಡಿದೆ. ಮನುಷ್ಯ ಅವುಗಳನ್ನು ಅರಿಯಲು ಪ್ರಯತ್ನಿಸಿದರೆ ಪ್ರಕೃತಿಯೇ ಪಾಠ ಕಲಿಸುತ್ತದೆ ಎಂಬುದಕ್ಕೆ ಈ ಕಿರುಚಿತ್ರ ಸಾಕ್ಷಿಯಾಗಿದೆ. ಕಾಡಿನ ಪರಿಸರದಲ್ಲಿ ನಡೆಯುವ ಕೆಲವು ಆಘಾತಕಾರಿ ಘಟನೆಗಳಿಗೆ ವೈಜ್ಞಾನಿಕ ತಳಹದಿಯನ್ನು ನೀಡಲಾಗಿದೆ. ಕಾಡಿನಲ್ಲಿ ಮಣ್ಣು ಅಗೆಯುವಾಗ ಆಗುವ ಸಾವು, ಕುಡಿದ ಅಮಲಿನಲ್ಲಿ ಕಾಡಿಗೆ ಬೆಂಕಿ ಹಚ್ಚಿದಾಗ ನಡೆಯುವ ಕಾರು ಅಪಘಾತ, ಮತ್ತು ಮನೆ ಖರೀದಿಗೆ ಬಂದಾಗ ಕಾರಿನಲ್ಲಿ ಹಣ ಮಾಯವಾಗುವಂತಹ ಘಟನೆಗಳನ್ನು ವೈಜ್ಞಾನಿಕವಾಗಿ ವಿವರಿಸಲಾಗಿದೆ.
ಕಥೆಯಲ್ಲಿ, ಊರಿನ ಗೌಡ ಕಾಡಿನ ಜಮೀನನ್ನು ಒತ್ತುವರಿ ಮಾಡಲು ಜೆಸಿಬಿ ಚಾಲಕ ಮತ್ತು ತನ್ನ ಆಳುಗಳಾದ ಸೋಮು ಹಾಗೂ ವೆಂಕಟನಿಗೆ ಹೇಳುತ್ತಾನೆ. ಚಾಲಕ ಜೆಸಿಬಿಯಿಂದ ಮಣ್ಣು ಅಗೆಯುವಾಗ ಒಂದು ಗೆಡ್ಡೆಯಾಕಾರದ ವಸ್ತು ಸಿಗುತ್ತದೆ. ಅದನ್ನು ತೆರೆದಾಗ ಚಾಲಕ, ಸೋಮು ಮತ್ತು ವೆಂಕಟ ಸಾವನ್ನಪ್ಪುತ್ತಾರೆ. ಇನ್ನೊಂದೆಡೆ, ಕುಡಿದ ಅಮಲಿನಲ್ಲಿ ಕಾಡಿಗೆ ಬೆಂಕಿ ಹಚ್ಚುವ ಸೋಮು, ಧರ್ಮ ಮತ್ತು ಲೋಕೇಶ್ ಕಾರು ಅಪಘಾತದಲ್ಲಿ ಸಾವಿಗೀಡಾಗುತ್ತಾರೆ. ಇದಲ್ಲದೆ, ಕಾಡಿನಲ್ಲಿರುವ ಗೌಡರ ಮನೆ ಖರೀದಿಸಲು ಬರುವ ರಿಯಲ್ ಎಸ್ಟೇಟ್ ಮಾಲೀಕನ ಕಾರಿನಿಂದ ಹಣ ಮಾಯವಾಗುತ್ತದೆ. ಗ್ರಾಮದಲ್ಲಿ ನಡೆಯುತ್ತಿರುವ ಈ ಘಟನೆಗಳಿಂದ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಅರಿತ ಗೌಡ, ಪಾತ್ರಿಗಳ ಮೊರೆ ಹೋಗುತ್ತಾನೆ. ಆಗ ಪಾತ್ರಿಯು “ಪ್ರಕೃತಿಯನ್ನು ನಾಶ ಮಾಡುತ್ತಿರುವುದರಿಂದ ಹೀಗಾಗುತ್ತಿದೆ, ಪ್ರಕೃತಿಯನ್ನು ಉಳಿಸಿ” ಎಂದು ಸಂದೇಶ ನೀಡುತ್ತಾನೆ.
ಗ್ರಾಮದಲ್ಲಿ ನಡೆದ ಈ ಅಹಿತಕರ ಘಟನೆಗಳಿಗೆ, ಗೌಡರ ಮಗಳು (ಬಯಾಲಜಿ ಪ್ರೊಫೆಸರ್) ವೈಜ್ಞಾನಿಕ ಕಾರಣಗಳನ್ನು ನೀಡುತ್ತಾಳೆ. ಪರಿಸರ ಮತ್ತು ಕಾಡನ್ನು ಉಳಿಸಿದರೆ ಅದು ನಮ್ಮನ್ನು ಉಳಿಸುತ್ತದೆ, ಅದಕ್ಕೆ ತೊಂದರೆ ಕೊಟ್ಟರೆ ಅದು ವಿಸ್ಮಯಗಳ ಮೂಲಕವೇ ನಮಗೆ ತಕ್ಕ ಪಾಠ ಕಲಿಸುತ್ತದೆ ಎಂಬ ಸಂದೇಶವನ್ನು ದೈವ, ಪ್ರಕೃತಿ ಮತ್ತು ವೈಜ್ಞಾನಿಕ ತಳಹದಿಯ ಮೇಲೆ ನೀಡಲಾಗುತ್ತದೆ.
ಪ್ರಕೃತಿ ತನ್ನ ಒಡಲಿನಲ್ಲಿ ಅನೇಕ ವಿಸ್ಮಯಗಳನ್ನು ಒಳಗೊಂಡಿದೆ. ಅದನ್ನು ತಿಳಿದುಕೊಳ್ಳುವ ಅಗತ್ಯವಿಲ್ಲ ಎಂದು ಬಯಾಲಜಿ ಪ್ರೊಫೆಸರ್ ಎಲ್ಲಾ ಘಟನೆಗಳಿಗೂ ವೈಜ್ಞಾನಿಕ ಕಾರಣಗಳನ್ನು ನೀಡುತ್ತಾರೆ. ಇದನ್ನು ಪ್ರೇಕ್ಷಕರು ಕಿರುಚಿತ್ರವನ್ನು ನೋಡಿಯೇ ತಿಳಿದುಕೊಳ್ಳಬೇಕು. ಚಿತ್ರದ ಕೊನೆಯಲ್ಲಿ ಮೂಡಿಬಂದಿರುವ ಪರಿಸರ ಜಾಗೃತಿಯ ಹಾಡು ಅತ್ಯುತ್ತಮವಾಗಿದೆ.
Jp story ಗ್ರಾಮೀಣ ಕಲಾವಿದರೇ ಸೇರಿ ನಿರ್ಮಿಸಿರುವ ಈ ಕಿರುಚಿತ್ರ ಕಡಿಮೆ ಖರ್ಚಿನಲ್ಲಿ ನಿರ್ಮಾಣವಾಗಿದೆ. ಶಿರುಪತಿ ಸುತ್ತಮುತ್ತಲಿನ ಪ್ರದೇಶದಲ್ಲಿ ಇದರ ಚಿತ್ರೀಕರಣ ನಡೆದಿದೆ. ಶಿರುಪತಿ ಮಂಜು ಮತ್ತು ಚಿಟ್ಟೆಬೈಲ್ ಗಣೇಶ್ ಭಟ್ ಮೂಲ ಕಥೆಯನ್ನು ಬರೆದರೆ, ಮ್ಯಾಥ್ಯೂ ಸಿರಾನಿ ಚಿತ್ರಕಥೆ ಬರೆದಿದ್ದಾರೆ. ಸುರೇಶ್ ಬಾಳಗಾರು ಛಾಯಾಗ್ರಹಣ ಮಾಡಿದ್ದಾರೆ. ಮಂಜು ಮತ್ತು ಮ್ಯಾಥ್ಯೂ ಚಿತ್ರವನ್ನು ನಿರ್ದೇಶಿಸಿದ್ದಾರೆ. ತೆರೆಯ ಮೇಲೆ ಸ್ಥಳೀಯ ಗ್ರಾಮದ ಕಲಾವಿದರು ಪಾತ್ರಧಾರಿಗಳಾಗಿ ನಟಿಸಿದ್ದಾರೆ.