Director prem : ಬೆಂಗಳೂರು: ಉತ್ತಮ ಗುಣಮಟ್ಟದ ಎಮ್ಮೆಗಳನ್ನು ಕೊಡಿಸುವುದಾಗಿ ನಂಬಿಸಿ ಚಲನಚಿತ್ರ ನಿರ್ದೇಶಕ ಪ್ರೇಮ್ ಅವರಿಂದ ₹4.75 ಲಕ್ಷ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಗುಜರಾತ್‌ನ ವಫೇಲಾ ವನರಾಜ್ ಭಾಯ್ ಎಂಬಾತನ ವಿರುದ್ಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪ್ರೇಮ್ ಅವರ ವ್ಯವಸ್ಥಾಪಕ ದಶಾವರ ಚಂದ್ರು ಅವರು ಈ ಕುರಿತು ದೂರು ನೀಡಿದ್ದಾರೆ.
Director prem : ಘಟನೆಯ ವಿವರ
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿರುವ ತಮ್ಮ ತೋಟದಲ್ಲಿ ಹೈನುಗಾರಿಕೆ ಆರಂಭಿಸಲು ಪ್ರೇಮ್ ಅವರು ನಿರ್ಧರಿಸಿದ್ದರು. ಇದಕ್ಕಾಗಿ ಗುಜರಾತ್‌ನಿಂದ ಉತ್ತಮ ತಳಿಯ ಎಮ್ಮೆಗಳನ್ನು ಖರೀದಿಸಲು ಮುಂದಾದಾಗ, ವನರಾಜ್ ಭಾಯ್ ಎಂಬಾತನ ಪರಿಚಯವಾಗಿದೆ. ಮಾತುಕತೆಯ ನಂತರ, ಪ್ರೇಮ್ ಅವರು ಮುಂಗಡವಾಗಿ ₹25,000 ಪಾವತಿಸಿದ್ದಾರೆ. ಬಳಿಕ ಹಂತ ಹಂತವಾಗಿ ವನರಾಜ್ ಭಾಯ್‌ನ ಬ್ಯಾಂಕ್ ಖಾತೆಗೆ ₹4.5 ಲಕ್ಷ ಸಂದಾಯ ಮಾಡಲಾಗಿದೆ.
ಹಣ ಪಡೆದ ನಂತರ ವನರಾಜ್, ಎರಡು ಎಮ್ಮೆಗಳನ್ನು ಖರೀದಿಸಿರುವುದಾಗಿ ಹೇಳಿ, ಅವುಗಳ ಫೋಟೋಗಳನ್ನು ವಾಟ್ಸಾಪ್ ಮೂಲಕ ಪ್ರೇಮ್ ಅವರಿಗೆ ಕಳುಹಿಸಿದ್ದಾನೆ. ಆದರೆ, ಐದಾರು ದಿನ ಕಳೆದರೂ ಎಮ್ಮೆಗಳು ಬಂದಿಲ್ಲ. ಅನುಮಾನಗೊಂಡ ಪ್ರೇಮ್, ಆರೋಪಿ ಕೊಟ್ಟಿದ್ದ ವಿಳಾಸಕ್ಕೆ ತಮ್ಮ ಪರಿಚಿತರನ್ನು ಕಳುಹಿಸಿ ವಿಚಾರಿಸಿದಾಗ ವಂಚನೆ ನಡೆದಿರುವುದು ದೃಢಪಟ್ಟಿದೆ. ಬಳಿಕ ದಶಾವರ ಚಂದ್ರು ಮೂಲಕ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಸ್ತುತ, ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.
