Dharmasthala :ಶಿವಮೊಗ್ಗ: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮುಟ್ಟಣ್ಣನವರ್ ಮತ್ತು ಸಮೀರ್ ಅವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಯುವ ಬ್ರಿಗೇಡ್ ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನೂ ಸಲ್ಲಿಸಲಾಯಿತು.
ಪ್ರತಿಭಟನಾಕಾರರು ಕೇಸರಿ ಬಾವುಟಗಳನ್ನು ಹಿಡಿದು, ಧರ್ಮಸ್ಥಳದ ತೇಜೋವಧೆ ನಿಲ್ಲಿಸಿ, ಧರ್ಮಸ್ಥಳಕ್ಕೆ ಅಪಮಾನ, ಹಿಂದೂಗಳಿಗೆ ಅಪಮಾನ, ಎಂಬ ಘೋಷಣೆಗಳನ್ನು ಕೂಗಿದರು. ಧರ್ಮಸ್ಥಳವು ಕೋಟ್ಯಂತರ ಭಕ್ತರ ನಂಬಿಕೆಯ ಕೇಂದ್ರವಾಗಿದ್ದು, ಅದರ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಹೇಳಿದರು.
ಭಾರತದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಧರ್ಮಸ್ಥಳವು ಸೇವಾ ಕಾರ್ಯಗಳಿಂದ ಪ್ರಸಿದ್ಧವಾಗಿದೆ. ಆದರೆ, ಇತ್ತೀಚೆಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಹಿಂದೂ ವಿರೋಧಿ ಶಕ್ತಿಗಳು ಸಂಘಟಿತವಾಗಿ ಧರ್ಮಸ್ಥಳದ ಘನತೆಗೆ ಧಕ್ಕೆ ತರುವಂತಹ ಕೆಲಸಗಳಲ್ಲಿ ತೊಡಗಿಕೊಂಡಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಇದು ಕೋಟ್ಯಂತರ ಕನ್ನಡಿಗರ ಭಾವನೆಗಳಿಗೆ ನೋವುಂಟುಮಾಡುತ್ತಿದೆ ಮತ್ತು ಸಮಾಜದ ಶಾಂತಿ-ಸೌಹಾರ್ದತೆಗೆ ಧಕ್ಕೆ ತರುತ್ತಿದೆ ಎಂದರು.
ಈಗಾಗಲೇ ರಾಜ್ಯ ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಎಸ್‌ಐಟಿ (SIT) ತನಿಖೆ ನಡೆಸುತ್ತಿರುವಾಗಲೂ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮುಟ್ಟಣ್ಣನವರ್ ಮತ್ತು ಸಮೀರ್ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಅವರನ್ನು ಕೂಡಲೇ ಬಂಧಿಸಿ, ಈ ಷಡ್ಯಂತ್ರದ ಹಿಂದಿರುವ ಸಮಾಜಘಾತುಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.