Bjp protest against congress : ಶಿವಮೊಗ್ಗದಲ್ಲಿ ಬಿಜೆಪಿ ರೈತ ಮೋರ್ಚಾದ ಪ್ರತಿಭಟನೆ : ಯಾರಲ್ಲಾ ಏನೆಲ್ಲಾ ಹೇಳಿದ್ರು
ಶಿವಮೊಗ್ಗ: ಯೂರಿಯಾ ರಸಗೊಬ್ಬರದ ಕೊರತೆ ಮತ್ತು ರೈತರ ಸಾಗುವಳಿ ಭೂಮಿ ಒತ್ತುವರಿ ತೆರವು ಮಾಡುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಶಿವಮೊಗ್ಗದಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಗೋಪಿ ವೃತ್ತದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಕಾರ್ಯಕರ್ತರು, ಫಲಕಗಳನ್ನು ಹಿಡಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಶಾಸಕ ಆರಗ ಜ್ಞಾನೇಂದ್ರ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಟ್ರ್ಯಾಕ್ಟರ್‌ನಲ್ಲಿ ರ್ಯಾಲಿ ಮೂಲಕ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಎಸ್.ಎನ್. ಚೆನ್ನಬಸಪ್ಪ, ಧನಂಜಯ ಸರ್ಜಿ, ಡಿ.ಎಸ್. ಅರುಣ್, ಕೆ.ಬಿ. ಅಶೋಕ್ ನಾಯ್ಕ್ ಮತ್ತು ಜಿಲ್ಲಾಧ್ಯಕ್ಷ ಜಗದೀಶ್ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
Bjp protest against congress : ಇದು ಕೇವಲ ಟ್ರಯಲ್, ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟ: ಬಿ.ವೈ. ರಾಘವೇಂದ್ರ
ಪ್ರತಿಭಟನೆಯಲ್ಲಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, “ಭ್ರಷ್ಟ ಮತ್ತು ರೈತ ವಿರೋಧಿ ಸರ್ಕಾರದ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ಲಿಂಗನಮಕ್ಕಿ ಜಲಾಶಯ ನಿರ್ಮಾಣದಿಂದ ಅನೇಕ ರೈತರು ಬೀದಿಗೆ ಬಂದಿದ್ದಾರೆ. ಈಗ ರೈತ ವಿರೋಧಿ ಕಾಂಗ್ರೆಸ್ ಸರ್ಕಾರ 35 ಸಾವಿರ ರೈತರಿಗೆ ನೋಟಿಸ್ ನೀಡಿದೆ. ಮೂರು ಎಕರೆಗಿಂತ ಕಡಿಮೆ ಇರುವ ರೈತರ ಒತ್ತುವರಿ ಜಮೀನುಗಳನ್ನು ತೆರವು ಮಾಡಬಾರದು. ಅಡಿಕೆ ತೋಟಗಳನ್ನು ಕತ್ತರಿಸಿ ರೈತರನ್ನು ಒಕ್ಕಲೆಬ್ಬಿಸುವ ದ್ವೇಷದ ರಾಜಕಾರಣ ನಡೆಯುತ್ತಿದೆ. ಇವತ್ತಿನ ಹೋರಾಟ ಕೇವಲ ಟ್ರಯಲ್. ಮುಂದಿನ ದಿನಗಳಲ್ಲಿ ಲಕ್ಷಾಂತರ ಜನರೊಂದಿಗೆ ದೊಡ್ಡ ಹೋರಾಟ ಮಾಡುತ್ತೇವೆ. ಗ್ಯಾರಂಟಿಗಳ ಹೆಸರಿನಲ್ಲಿ ಸರ್ಕಾರ ಜನರಿಗೆ ಮೋಸ ಮಾಡಿದೆ” ಎಂದು ಆರೋಪಿಸಿದರು.
Bjp protest against congress : ಉಸ್ತುವಾರಿ ಸಚಿವರ ನೇರ ಆದೇಶದಂತೆ ತೆರವು ಕಾರ್ಯ: ಹರತಾಳು ಹಾಲಪ್ಪ
ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, “ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ನೇರ ಆದೇಶದ ಮೇರೆಗೆ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಆಗುತ್ತಿದೆ. ರಾಜ್ಯ ಸರ್ಕಾರ ಬಂದ ನಂತರ ರೈತರ ಮೇಲೆ ದಬ್ಬಾಳಿಕೆ ಹೆಚ್ಚಾಗಿದೆ. ಆದರೆ, ಉಸ್ತುವಾರಿ ಸಚಿವರು ಈ ಕುರಿತು ಪ್ರಶ್ನಿಸಿದಾಗ ಉಡಾಫೆಯಾಗಿ ಮಾತನಾಡುತ್ತಾರೆ” ಎಂದು ಆರೋಪಿಸಿದರು.
ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಈ ಹೋರಾಟವನ್ನು ನಡೆಸುವುದಾಗಿ ಹಾಲಪ್ಪ ತಿಳಿಸಿದರು. ಈ ರೀತಿಯ ಹೋರಾಟಗಳಿಂದಲೇ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದರು. ವಿಜಯೇಂದ್ರ ಮತ್ತು ರಾಘವೇಂದ್ರ ಅವರಿಗೂ ಆ ಅವಕಾಶ ಇದೆ. ಮಧು ಬಂಗಾರಪ್ಪ ಅವರು ತಮ್ಮ ತಂದೆಯ ಹೆಸರನ್ನು ಹೇಳಿಕೊಂಡು ಆಡಳಿತ ನಡೆಸುವುದನ್ನು ಬಿಟ್ಟು, ಸರಿಯಾಗಿ ಕೆಲಸ ಮಾಡಬೇಕು” ಎಂದರು. ಅವರು ತುಮರಿ ಭಾಗದ 43 ಶಾಲೆಗಳನ್ನು ಮುಚ್ಚಿಸಿದ್ದಾರೆ ಮತ್ತು ಆನಂದಪುರದಲ್ಲಿ ಆಂಬುಲೆನ್ಸ್ ಇಲ್ಲದೆ ಜನ ಪರದಾಡುತ್ತಿದ್ದಾರೆ ಎಂದು ದೂರಿದರು.
