Bhadra dam : ಜುಲೈ 22 ರಿಂದ ಭದ್ರಾ ಬಲದಂಡೆ ನಾಲೆಗೆ ನೀರು: ಸಚಿವ ಮಧು ಬಂಗಾರಪ್ಪ
ಶಿವಮೊಗ್ಗ : ಮುಂಗಾರು ಬೆಳೆಗಳಿಗಾಗಿ ಭದ್ರಾ ಬಲದಂಡೆ ನಾಲೆಗೆ ಜುಲೈ 22 ರಿಂದ 120 ದಿನಗಳ ಕಾಲ ನೀರು ಹರಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ. ಎಡದಂಡೆ ನಾಲೆಗೆ ನೀರು ಹರಿಸುವ ದಿನಾಂಕವನ್ನು ಶೀಘ್ರದಲ್ಲೇ ನಿಗದಿಪಡಿಸಲಾಗುವುದು ಎಂದು ಅವರು ಹೇಳಿದರು.
ಸೋಮವಾರ ಮಲವಗೊಪ್ಪದ ಭದ್ರ ಕಾಡಾ ಕಚೇರಿಯಲ್ಲಿ ನಡೆದ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಭೆಯಲ್ಲಿ ಜುಲೈ 22 ರಿಂದ 120 ದಿನಗಳ ಕಾಲ ಬಲದಂಡೆ ನಾಲೆಗೆ ನೀರು ಹರಿಸಲು ನಿರ್ಧರಿಸಲಾಗಿದ್ದು, ಸುರಕ್ಷತಾ ಕ್ರಮಗಳನ್ನು ಕೈಗೊಂಡು ನೀರು ಬಿಡುವಂತೆ ಸೂಚಿಸಲಾಗಿದೆ.
ಎಡದಂಡೆ ನಾಲೆಯಲ್ಲಿ ರಿಪೇರಿ ಕಾರ್ಯಗಳು ನಡೆಯುತ್ತಿದ್ದು, ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಕಾಮಗಾರಿ ಮುಗಿದ ನಂತರ ಶೀಘ್ರದಲ್ಲೇ ಎಡದಂಡೆ ನಾಲೆಗೆ ನೀರು ಹರಿಸುವ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.
