ಆಕೆ ನೋಡಲು ಸ್ಪುರದ್ರೂಪಿಯಾಗಿದ್ದ ಯುವತಿ. ಆಕೆಯನ್ನು ನೋಡಿದರೆ ಎಂತಹ ಯುವಮನಸ್ಸುಗಳೂ ಕೂಡ ಪುಳಕಿತಗೊಳ್ಳುತ್ತಿದ್ದವು. ಸಹ್ಯಾದ್ರಿ ಕಾಲೇಜಿನಲ್ಲಿ ಓದುತ್ತಿದ್ದ ಈ ಯುವತಿ ಭದ್ರಾ ಬಲದಂಡೆ ನಾಲೆಯಲ್ಲಿ ಶವವಾಗಿ ಸಿಕ್ಕಾಗ ಎಲ್ಲರೂ ದಂಗಾಗಿ ಹೋಗಿದ್ದರು. “ಪ್ರೀತಿಸು, ಪ್ರೀತಿಸು” ಎಂದು ಪ್ರಾಣ ತಿನ್ನುತ್ತಿದ್ದ ಆ ಯುವಕನೇ ಈಕೆಯ ಪ್ರಾಣಕ್ಕೆ ಕುತ್ತು ತಂದನೇ ಎಂಬ ಅನುಮಾನ ಎಲ್ಲರನ್ನೂ ಕಾಡತೊಡಗಿತು. ಅದಕ್ಕೆ ಪೂರಕವೆಂಬಂತೆ ಯುವತಿಯ ಪೋಷಕರು ಕೂಡ ದೂರು ನೀಡಿದರು. ಏನಿದು ಪ್ರಕರಣ ಎನ್ನುತ್ತೀರಾ? ಈ ಸ್ಟೋರಿ ನೋಡಿ.
ಹೆಣ್ಣು ಸೌಂದರ್ಯವಾಗಿದ್ದರೆ ಅದು ಆಕೆಗೆ ವರವೂ ಆಗಬಹುದು, ಶಾಪವೂ ಆಗಬಹುದು ಎಂಬುದಕ್ಕೆ ಈ ದುರಂತ ಪ್ರಕರಣ ಸಾಕ್ಷಿಯಾಗಿದೆ. ನೋಡಲು ಮಹಾಲಕ್ಷ್ಮಿಯಂತಿದ್ದ ಆ ಯುವತಿಯ ಬದುಕಿನ ಪಯಣ ಅರ್ಧದಲ್ಲೇ ಪೂರ್ಣಗೊಂಡಿದೆ. ಹೌದು, ಮಹಾಲಕ್ಷ್ಮಿ (ಸ್ವಾತಿ) ನೋಡಲು ಸಾಕ್ಷಾತ್ ಮಹಾಲಕ್ಷ್ಮಿಯಂತೆ ಇದ್ದವಳು. ಮೊನ್ನೆ ಇದ್ದಕ್ಕಿದ್ದ ಹಾಗೆ ಭದ್ರಾವತಿಯ ಎರೆಹಳ್ಳಿ ಬಳಿಯ ಭದ್ರಾ ನಾಲೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಸ್ವಾತಿಯ ಸಾವನ್ನು ಗ್ರಾಮಸ್ಥರಿಗೆ ಅರಗಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಸ್ವಾತಿಯ ಸಾವಿಗೆ ಸೂರ್ಯ (20) ಕಾರಣ ಎಂದು ಪೋಷಕರು ಮೊದಲು ಅನುಮಾನ ವ್ಯಕ್ತಪಡಿಸಿ, ಭದ್ರಾವತಿ ಹೊಸಮನೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ವಾತಿ ಮತ್ತು ಸೂರ್ಯ ನಿಜಕ್ಕೂ ಪ್ರೀತಿಸುತ್ತಿದ್ದರೇ? ಅಥವಾ ಸೂರ್ಯನೇ ಸ್ವಾತಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದನಾ? ಎಂಬ ಅನುಮಾನಕ್ಕೆ ಸ್ವತಃ ಸ್ವಾತಿಯ ಪೋಷಕರೇ ತೆರೆ ಎಳೆದಿದ್ದಾರೆ. ಅದು ಪೊಲೀಸರಿಗೆ ನೀಡಿರುವ ದೂರಿನಲ್ಲಿಯೂ ಉಲ್ಲೇಖವಾಗಿದೆ. ಆ ವಿಷಯಕ್ಕೆ ಬರುವ ಮುನ್ನ, ಈ ಘಟನೆ ಮತ್ತೊಂದು ತಿರುವು ಪಡೆದುಕೊಂಡಿದೆ.
ಆಯಾಮ 1
ಭದ್ರಾವತಿ ತಾಲೂಕಿನ ಎರೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಕ್ಕುಂದ ಗ್ರಾಮದ ಸ್ವಾತಿ ಮತ್ತು ಸೂರ್ಯ ಇಬ್ಬರೂ ಪ್ರೀತಿಸುತ್ತಿದ್ದರು. ಹಾಗೆ ನೋಡಿದರೆ, ಇವರಿಬ್ಬರ ಪ್ರೀತಿಗೆ ಜಾತಿಯ ಅಡ್ಡಿ ಇರಲಿಲ್ಲ. ಇಬ್ಬರೂ ಸಂಬಂಧಿಗಳೇ ಆಗಿದ್ದಾರೆ. ಸ್ವಾತಿ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಎರಡನೇ ವರ್ಷದ ಬಿಎ ಓದುತ್ತಿದ್ದಳು. ಸೂರ್ಯ ಎರೆಹಳ್ಳಿ ಗ್ರಾಮದಲ್ಲಿದ್ದರೂ ಬೆಂಗಳೂರಿನಲ್ಲಿ ತಂದೆಯ ವ್ಯವಹಾರ ನೋಡಿಕೊಳ್ಳುತ್ತಿದ್ದ. ಸೂರ್ಯನ ಪೋಷಕರು ಆರ್ಥಿಕವಾಗಿ ಸದೃಢ ಕುಟುಂಬದವರು. ಸ್ವಾತಿಯ ಸೌಂದರ್ಯಕ್ಕೆ ಮರುಳಾಗಿದ್ದ ಸೂರ್ಯ ಹಲವು ಬಾರಿ “ಪ್ರೀತಿಸು, ಪ್ರೀತಿಸು” ಎಂದು ದುಂಬಾಲು ಬಿದ್ದು, ಸ್ವಾತಿಯನ್ನು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಇದು ಗ್ರಾಮಸ್ಥರಿಗೂ ಗೊತ್ತಿದ್ದರಿಂದ ಸ್ವಾತಿ ಪೋಷಕರು ಕೂಡ ಇಬ್ಬರ ವಿವಾಹಕ್ಕೆ ಒಪ್ಪಿದ್ದರು. ಆದರೆ ಸದ್ಯಕ್ಕೆ ವಿವಾಹ ಬೇಡ, ವಿದ್ಯಾಭ್ಯಾಸ ಮುಗಿಯಲಿ ಎಂದು ಸ್ವಾತಿ ಪೋಷಕರು ಹೇಳಿದ್ದರು. ಇದರಿಂದ ನೊಂದ ಪ್ರೇಮಿಗಳಿಬ್ಬರೂ ಆತ್ಮಹತ್ಯೆಯ ನಿರ್ಧಾರ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಓದುತ್ತಿದ್ದ ಸ್ವಾತಿ ಕಳೆದ ಗೌರಿ ಹಬ್ಬಕ್ಕೆಂದು ಗ್ರಾಮಕ್ಕೆ ಬಂದಿದ್ದಳು. ಮೊನ್ನೆ ಪಿತೃಪಕ್ಷಕ್ಕೆಂದು ಸೂರ್ಯ ಕೂಡ ಬೆಂಗಳೂರಿನಿಂದ ಬಂದಿದ್ದ. ಮಹಾಲಯ ಅಮಾವಾಸ್ಯೆಯ ಬೆಳಿಗ್ಗೆ ಸ್ವಾತಿ ಮನೆಯ ಮುಂದಿನ ನಾಗರಕಟ್ಟೆಯಲ್ಲಿ ಪೂಜೆ ಮಾಡುತ್ತಿದ್ದಾಗ ಬೈಕ್‌ನಲ್ಲಿ ಬಂದ ಸೂರ್ಯ ಆಕೆಯನ್ನು ಉಕ್ಕುಂದ ಭದ್ರಾ ಬಲದಂಡೆ ನಾಲೆಯತ್ತ ಕರೆದುಕೊಂಡು ಹೋಗಿದ್ದಾನೆ.
ನಾಲೆ ಬಳಿ ನಡೆದಿದ್ದೇನು?
ಸ್ವಾತಿ ಮತ್ತು ಸೂರ್ಯ ಭದ್ರಾ ಬಲದಂಡೆ ನಾಲೆ ಬಳಿ ಬಂದಾಗ ಇಬ್ಬರ ನಡುವೆ ಮಾತುಕತೆ ನಡೆದಿದೆ. ಇದನ್ನು ಅಲ್ಲೇ ಎಮ್ಮೆ ಕಾಯುತ್ತಿದ್ದ ಮಹಿಳೆಯರು ನೋಡಿದ್ದಾರೆ. ಸೂರ್ಯ ಸೆವೆನ್ ಅಪ್‌ನಲ್ಲಿ ವಿಷದ ಔಷಧಿಯನ್ನು ಬೆರೆಸಿ, ಸ್ವಾತಿಗೆ ನೀಡಿದ್ದಾನೆ. ಇಬ್ಬರೂ ಸೇವಿಸಿ, ಭದ್ರಾ ಬಲದಂಡೆಗೆ ಹಾರಿದ್ದಾರೆ. ನೀರಿನ ರಭಸಕ್ಕೆ ಸಿಲುಕಿದ ಸ್ವಾತಿ ನೀರು ಪಾಲಾಗಿದ್ದಾಳೆ. ಆದರೆ, ನಾಲೆಗೆ ಬಿದ್ದ ಸೂರ್ಯನಿಗೆ ಸಾಯಲು ಮನಸ್ಸಾಗುವುದಿಲ್ಲ. ತಕ್ಷಣಕ್ಕೆ ಮರದ ಕೊಂಬೆಯ ಸಹಾಯದಿಂದ ದಡ ಸೇರಿ, ಸ್ವಾತಿಯನ್ನು ರಕ್ಷಿಸುವಂತೆ ಕೂಗಿಕೊಳ್ಳುತ್ತಾನೆ. ಆದರೆ, ಸ್ವಾತಿ ಬಾರದ ಲೋಕಕ್ಕೆ ಹೋಗಿದ್ದಾಳೆ. ಇದು ಸೂರ್ಯ ಹೇಳುವ ಕಥೆ. ಆದರೆ, ಸ್ವಾತಿಯ ಪೋಷಕರು ದೂರಿನಲ್ಲಿ ನೀಡಿರುವ ಹೇಳಿಕೆಯೇ ಬೇರೆಯಾಗಿದೆ.
ಆಯಾಮ 2
ಇದು ಈ ಪ್ರೇಮ ಘಟನೆಯ ಒಂದು ಆಯಾಮವಾದರೆ, ಸ್ವಾತಿಯ ಪೋಷಕರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಬೇರೆ ವಿಚಾರವನ್ನು ತಿಳಿಸಿದ್ದಾರೆ. ಹಾಗೆ ನೋಡಿದರೆ, ಸ್ವಾತಿ ಸೂರ್ಯನನ್ನು ಪ್ರೀತಿಸುತ್ತಲೇ ಇರಲಿಲ್ಲ. ಸ್ವಾತಿಯನ್ನು ಪ್ರೀತಿಸುವಂತೆ ಹಾದಿಬೀದಿಗಳಲ್ಲಿ ಪೀಡಿಸುತ್ತಿದ್ದ. ಇದಕ್ಕೆ ಸೂರ್ಯನ ತಂದೆ ಸ್ವಾಮಿ ಕೂಡ ಸಾಥ್ ನೀಡಿದ್ದ. ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ ಸೂರ್ಯ, ಸ್ವಾತಿಯ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದ. ಈ ಬಗ್ಗೆ ಗ್ರಾಮಸ್ಥರು ಕಳೆದ ಆರು ತಿಂಗಳ ಹಿಂದೆ ಪಂಚಾಯಿತಿ ಮಾಡಿ, ಸೂರ್ಯ ಹಾಗೂ ಆತನ ತಂದೆ ಸ್ವಾಮಿಗೆ ಬುದ್ಧಿ ಹೇಳಿದ್ದರು. ಇಷ್ಟಾದರೂ ಸೂರ್ಯನ ಕಿರುಕುಳ ಮುಂದುವರೆದಾಗ ಮನನೊಂದ ಸ್ವಾತಿ 2025ರ ಆಗಸ್ಟ್ ತಿಂಗಳಲ್ಲಿ ಭದ್ರಾ ಬಲದಂಡೆ ನಾಲೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು.
ಮಹಾಲಕ್ಷ್ಮಿ (ಸ್ವಾತಿ) ಅಶ್ಲೀಲ ಫೋಟೋ ಬ್ಲಾಕ್‌ಮೇಲ್
ಸ್ವಾತಿ ಪ್ರೀತಿಸಲು ನಿರಾಕರಿಸಿದಾಗ ಸೂರ್ಯ, ಆಕೆಯ ಫೋಟೋವನ್ನು ಡೀಪ್ ಫೇಕ್ ಮಾಡಿದ್ದ. ನೀನು ಪ್ರೀತಿಸದೇ ಹೋದರೆ, ನಿನ್ನ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಸಿದ್ದ. 21-09-25ರಂದು ಮನೆಯಿಂದ ಸ್ವಾತಿ ಕಾಣೆಯಾದಾಗ ಪೋಷಕರು ಭದ್ರಾವತಿ ಹೊಸಮನೆ ಠಾಣೆಗೆ ದೂರು ನೀಡಿದ್ದಾರೆ. ನಂತರ ಸೂರ್ಯನ ತಂದೆ ಸ್ವಾಮಿಯನ್ನು ಭೇಟಿ ಮಾಡಿ ಸ್ವಾತಿ ಬಗ್ಗೆ ವಿಚಾರಿಸಿದಾಗ, ಆತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. 23-09-25ರಂದು ಸ್ವಾತಿಯ ಶವ ಕೆಂಚಮ್ಮನಹಳ್ಳಿ ತೊರೆ ಸೇತುವೆಯ ನಾಲೆಯಲ್ಲಿ ಪತ್ತೆಯಾಗಿದೆ. ಸ್ವಾತಿ ಮದುವೆಗೆ ಒಪ್ಪಲಿಲ್ಲ ಎಂಬ ಉದ್ದೇಶದಿಂದ ಸೂರ್ಯ ಹಾಗೂ ತಂದೆ ಸ್ವಾಮಿ ಕೊಲೆ ಮಾಡುವ ಉದ್ದೇಶವನ್ನು ಹೊಂದಿದ್ದರು. ಬೈಕ್‌ನಲ್ಲಿ ಸ್ವಾತಿಯನ್ನು ಕರೆದುಕೊಂಡು ಹೋದ ಸೂರ್ಯ, ಆಕೆಯನ್ನು ನಾಲೆಗೆ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
ಸ್ವಾತಿಯ ಸಾವು ವ್ಯವಸ್ಥಿತ ಕೊಲೆ ಎಂಬುದು ಪೋಷಕರ ಆರೋಪವಾಗಿದೆ. ಆದರೆ ಅಂದು ಸ್ವಾತಿಯ ಜೊತೆಗೆ ನಾನು ವಿಷ ಕುಡಿದೆ ಎಂದು ಹೇಳುವ ಸೂರ್ಯ ಈಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ತನಿಖೆ ಕೈಗೆತ್ತಿಕೊಂಡಿರುವ ಭದ್ರಾವತಿ ಹೊಸಮನೆ ಠಾಣೆ ಪೊಲೀಸರು ಪ್ರಕರಣದ ಅಸಲಿಯತ್ತನ್ನು ಬಹಿರಂಗಪಡಿಸಬೇಕಿದೆ.
