Ganesha chaturthi : ಶಿವಮೊಗ್ಗ: ನಾಡಿನಾದ್ಯಂತ ಗೌರಿ ಗಣೇಶ ಹಬ್ಬಕ್ಕೆ ಸಿದ್ದತೆ ಜೋರಾಗಿದೆ. ಹಬ್ಬದ ಆಚರಣೆಗಾಗಿ ಅಗತ್ಯ ವಸ್ತುಗಳನ್ನು ಖರೀದಿಸಲು ಶಿವಮೊಗ್ಗದ ಗಾಂಧಿ ಬಜಾರ್ ಸೇರಿದಂತೆ ಸುತ್ತಮುತ್ತಲಿನ ಮಾರುಕಟ್ಟೆಗಳಲ್ಲಿ ಜನರು ಮುಗಿಬಿದ್ದಿದ್ದಾರೆ. ದೂರದ ಊರುಗಳಿಂದ ತಮ್ಮ ಸ್ವಂತ ಊರುಗಳಿಗೆ ಬಂದಿರುವ ಜನರಿಂದಾಗಿ ನಗರದಲ್ಲಿ ಟ್ರಾಫಿಕ್ ಜಾಮ್ ಸಹ ಹೆಚ್ಚಾಗಿದ್ದು, ಹಬ್ಬದ ಮೆರುಗು ಮತ್ತಷ್ಟು ಹೆಚ್ಚಿಸಿದೆ.

ಗಾಂಧಿ ಬಜಾರ್‌ನಲ್ಲಿ ಮಾವು, ಹಲಸು, ಬಾಳೆ ಎಲೆ, ವೀಳ್ಯದೆಲೆ, ತೆಂಗಿನಕಾಯಿ ಸೇರಿದಂತೆ ವಿವಿಧ ಬಗೆಯ ಹಣ್ಣುಗಳು ಮತ್ತು ಪೂಜಾ ಸಾಮಗ್ರಿಗಳನ್ನು ಖರೀದಿಸಲು ಜನರು ಮುಗಿಬಿದ್ದಿದ್ದಾರೆ. ಈ ವೇಳೆ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಮತ್ತು ಗ್ರಾಹಕರ ನಡುವೆ ಚೌಕಾಸಿ ಮಾತುಕತೆಗಳು ಸಾಮಾನ್ಯವಾಗಿ ಕೇಳಿಬರುತ್ತಿದ್ದವು. ಅದಕ್ಕೆ ಕಾರಣವೆಂದರೆ, ಕಳೆದ ವರ್ಷಕ್ಕಿಂತಲೂ ಸಹ ಈ ಬಾರಿ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದ್ದು, 10 ರೂಪಾಯಿಗೆ 3 ಬಾಲೆ ಎಲೆ 40 ರೂಪಾಯಿಗೆ 40 ವೀಲ್ಯದೆಲೆ, 50 ರೂಪಾಯಿಗೆ ಒಂದು ತೆಂಗಿನ ಕಾಯಿ ಸೇರಿದಂತೆ ಇತರೆ ಹಣ್ಣು, ಮತ್ತು ಪೂಜಾ ಸಾಮಗ್ರಿಗಳ ಬೆಲೆಗಳು ತುಟ್ಟಿಯಾಗಿವೆ. ಇನ್ನು ಹೂವುಗಳ ವಿಚಾರದಲ್ಲಿ ನೋಡುವುದಾದರೆ ಮಲ್ಲಿಗೆ ಮಾರು ₹300, ಕನಕಾಂಬರ ಮಾರು ₹200, ಸೇವಂತಿಗೆ ಕೆ.ಜಿ.ಗೆ ₹350, ಒಂದು ಗುಲಾಬಿ ₹30 ಮತ್ತು ಸುಗಂಧರಾಜ ಹಾರ ₹300ಕ್ಕೆ ಮಾರಾಟವಾಗುತ್ತಿವೆ.
ಜನರು ಹೆಚ್ಚಿದ್ದರಿಂದ ಪೊಲೀಸರು ಈ ಸಂದರ್ಭದಲ್ಲಿ ವ್ಯಾಪಾರದ ಸ್ಥಳಗಳಲ್ಲಿ ಚೆಕ್ಕಿಂಗ್ ಗೆ ಕಾರ್ಯವನ್ನು ಸಹ ನಡೆಸುತ್ತಿದ್ದರು. ಅಲ್ಲಿ ಶ್ವಾನದಳ ಆಗಮಿಸಿತ್ತು ಸುತ್ತಾ ಮುತ್ತಾ ಪರಿಶೀಲನೆ ನಡೆಸುತ್ತಿತ್ತು
Ganesha chaturthi ಸೈನ್ಸ್ ಮೈದಾನದಲ್ಲಿ ಗಣೇಶ ಮೂರ್ತಿಗಳ ಭರಾಟೆ
Ganesha chaturthi ಗಾಂಧಿ ಬಜಾರ್ ಸೇರಿದಂತೆ ನಗರದ ಇತರ ಮಾರುಕಟ್ಟೆಗಳಲ್ಲಿ ಪೂಜಾ ಸಾಮಗ್ರಿ ವ್ಯಾಪಾರ ನಡೆಯುತ್ತಿದ್ದರೆ, ನಗರದ ಸೈನ್ಸ್ ಮೈದಾನವು ಗೌರಿ ಮತ್ತು ಗಣೇಶ ಮೂರ್ತಿಗಳ ಖರೀದಿ ಭರಾಟೆ ಹೆಚ್ಚಿತ್ತು. ನೂರಾರು ಗಣೇಶ ವ್ಯಾಪಾರಿಗಳ ಅಂಗಡಿಗಳು ಸೈನ್ಸ್ ಮೈದಾನದಲ್ಲಿ ತುಂಬಿ ಹೋಗಿದ್ದವು.ಒಂದು ಅಡಿಯಿಂದ ಆರು ಅಡಿಯವರೆಗಿನ ವಿವಿಧ ಭಂಗಿಗಳಲ್ಲಿರುವ ಗಣೇಶ ಮೂರ್ತಿಗಳು ಇಲ್ಲಿ ಲಭ್ಯವಿದ್ದು, ಆಗಲೇ ಬುಕ್ ಆಗಿದ್ದ ಕೆಲವು ಮೂರ್ತಿಗಳನ್ನು ಬಟ್ಟೆಯಿಂದ ಮುಚ್ಚಿಡಲಾಗಿತ್ತು. ಜನರು ತಮ್ಮ ವಾಹನಗಳಲ್ಲಿ ಬಂದು ತಾವು ಇಷ್ಟಪಟ್ಟ ಗೌರಿ ಹಾಗೂ ಗಣೇಶ ಮೂರ್ತಿಗಳನ್ನು ಕೊಂಡೊಯ್ದರು.