Crime news ಭದ್ರಾವತಿ: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಮಹಿಳೆಯ ಪತಿ ಮೇಲೆ ಕತ್ತರಿಯಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 26,000 ದಂಡ ವಿಧಿಸಿ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ತೀರ್ಪು ನೀಡಿದ್ದಾರೆ.
ಶಿವಮೊಗ್ಗದ ಯಲವಟ್ಟಿ ಗ್ರಾಮದ ನಿವಾಸಿ ಕಿರಣ ಅಲಿಯಾಸ್ ಅಭಿ ಶಿಕ್ಷೆಗೆ ಒಳಗಾದ ಅಪರಾಧಿಯ ಎಂದು ಗುರುತಿಸಲಾಗಿದೆ. ಹಲ್ಲೆಗೊಳಗಾದವರು ಇದೇ ಗ್ರಾಮದ ಕುಮಾರನಾಯ್ಕ. ಈ ಘಟನೆ 2022ರಲ್ಲಿ ನಡೆದಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ಕಿರಣನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಕುಮಾರನಾಯ್ಕ ಅವರು ಭದ್ರಾವತಿ ತಾಲೂಕಿನ ರಾಮನಕೊಪ್ಪ ಗ್ರಾಮದ ಕಾವ್ಯ ಅಲಿಯಾಸ್ ಗಿರಿಜಬಾಯಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ದಂಪತಿ ಯಲವಟ್ಟಿ ಗ್ರಾಮದಲ್ಲಿ ವಾಸವಾಗಿದ್ದು, ಇಬ್ಬರು ಗಂಡು ಮಕ್ಕಳಿದ್ದಾರೆ.
ಪ್ರಕರಣದ ಪ್ರಕಾರ, ಕುಮಾರನಾಯ್ಕನ ಪತ್ನಿ ಕಾವ್ಯ, ಕಿರಣನೊಂದಿಗೆ ಅಕ್ರಮ ಸಂಬಂಧ ಬೆಳೆಸಿಕೊಂಡು ಆತನೊಂದಿಗೆ ಓಡಿಹೋಗಿದ್ದರು. ಈ ಸಂಬಂಧ ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ನಂತರ, ಇಬ್ಬರು ಪತ್ತೆಯಾದ ಮೇಲೆ ಹಿರಿಯರು ಮಧ್ಯ ಪ್ರವೇಶಿಸಿ, ಕುಮಾರನಾಯ್ಕ ಮತ್ತು ಕಾವ್ಯ ಅವರಿಗೆ ಬುದ್ಧಿವಾದ ಹೇಳಿ ಒಟ್ಟಾಗಿ ಜೀವನ ನಡೆಸುವಂತೆ ಸಲಹೆ ನೀಡಿದ್ದರು. ಅದರಂತೆ, ಕಾವ್ಯ ತನ್ನ ಮಕ್ಕಳು ಮತ್ತು ಪತಿಯೊಂದಿಗೆ ತನ್ನ ತವರು ಮನೆಗೆ ಹಿಂತಿರುಗಿದ್ದರು.ಇದಾದ ನಂತರ, 2022ರ ಮೇ 15ರಂದು ಮಧ್ಯರಾತ್ರಿ ಕುಮಾರನಾಯ್ಕ ಮನೆಯಲ್ಲಿ ಮಲಗಿದ್ದಾಗ, ಕಿರಣ ಹಠಾತ್ತಾಗಿ ಬಂದು ಕತ್ತರಿಯಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದನು.
ಗ್ರಾಮಾಂತರ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ ಅರುಣ್ ಕುಮಾರ್ ತನಿಖಾಧಿಕಾರಿಯಾಗಿ ಮತ್ತು ಮುಖ್ಯ ಪೇದೆ ಮೋಹನ್ ಕುಮಾರ್ ಸಹಾಯಕ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕಿ ರತ್ನಮ್ಮ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.