syber crime in shivamogga ಶಿವಮೊಗ್ಗ : ಆನ್‌ಲೈನ್‌ನಲ್ಲಿ ಪಾರ್ಟ್ ಟೈಮ್ ಕೆಲಸದ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಂದ ಬರೋಬ್ಬರಿ ₹14.63 ಲಕ್ಷಕ್ಕೂ ಹೆಚ್ಚು ಹಣವನ್ನು ವಂಚಿಸಿರುವ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
syber crime in shivamogga ಏನಿದು ಪ್ರಕರಣ?
ಭದ್ರಾವತಿಯ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಯೂಟ್ಯೂಬ್ ನೋಡುತ್ತಿದ್ದಾಗ, ಆನ್‌ಲೈನ್ ಪಾರ್ಟ್-ಟೈಮ್ ಜಾಬ್ ಕುರಿತ ಲಿಂಕ್ ಒಂದನ್ನು ಕ್ಲಿಕ್ ಮಾಡಿದ್ದಾರೆ. ತಮ್ಮ ವೈಯಕ್ತಿಕ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ, ಅಪರಿಚಿತ ವ್ಯಕ್ತಿಯೊಬ್ಬರು ಅವರನ್ನು ಸಂಪರ್ಕಿಸಿ, ಆನ್‌ಲೈನ್‌ನಲ್ಲಿ ವಸ್ತುಗಳನ್ನು ಖರೀದಿಸಿ-ಮಾರಾಟ ಮಾಡುವ ಅರೆಕಾಲಿಕ ಕೆಲಸದ ಬಗ್ಗೆ ವಿವರವಾಗಿ ವಿವರಿಸಿದ್ದಾರೆ. ವಂಚಕರು ತಮ್ಮ ಬಲೆಗೆ ಸಿಲುಕಿಸಲು ಮೊದಲು10 ಸಾವಿರ ಬೋನಸ್” ಹಣವನ್ನು ದೂರುದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ. ನಂತರ, ಅವರನ್ನು ಟೆಲಿಗ್ರಾಮ್ ಗುಂಪುಗಳಿಗೆ ಸೇರಿಸಿ, ಆ ಗುಂಪಿಗೆ 10 ಸಾವಿರ ಜಮಾ ಮಾಡುವಂತೆ ಸೂಚಿಸಿದ್ದಾರೆ. ಇದನ್ನು ನಂಬಿದ ದೂರುದಾರರು, ಆ ಹಣವನ್ನು ವರ್ಗಾಯಿಸಿದ್ದಾರೆ.
syber crime in shivamogga ಆ ಬಳಿಕ, ವಂಚಕರು ದೂರುದಾರರಿಗೆ 20 ಆರ್ಡರ್‌ಗಳನ್ನು ನೀಡಿ, ವಸ್ತುಗಳನ್ನು ಖರೀದಿಸಿ ಮಾರಾಟ ಮಾಡುವಂತೆ ಹೇಳಿದ್ದಾರೆ. ದೂರುದಾರರು ಅದನ್ನು ಮಾಡಿದಾಗ, 6,043 ಲಾಭಾಂಶವನ್ನು ಅವರ ಖಾತೆಗೆ ಜಮಾ ಮಾಡಿ, ತಮ್ಮನ್ನು ಮತ್ತಷ್ಟು ನಂಬುವಂತೆ ಮಾಡಿದ್ದಾರೆ. ಮೇ 16, 2025 ರಿಂದ ಜುಲೈ 3, 2025 ರ ನಡುವೆ, ವಂಚಕರು ವಿವಿಧ UPI ID ಗಳು ಮತ್ತು ಬ್ಯಾಂಕ್ ಖಾತೆಗಳನ್ನು ನೀಡಿ, ದೂರುದಾರರ ಖಾತೆ ಮಾತ್ರವಲ್ಲದೆ, ಅವರ ಪತ್ನಿ ಮತ್ತು ಅಣ್ಣನ ಮಗನ ಬ್ಯಾಂಕ್ ಖಾತೆಗಳಿಂದಲೂ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡಿದ್ದಾರೆ. ವಂಚಕರು ಹೇಳಿದಂತೆ ವಸ್ತುಗಳನ್ನು ಖರೀದಿಸಿ ಮಾರಾಟ ಮಾಡಿದ ನಂತರ, ದೂರುದಾರರು ತಮ್ಮ ಅಸಲು ಮತ್ತು ಲಾಭಾಂಶದ ಹಣವನ್ನು ಕೇಳಿದ್ದಾರೆ.

ಆಗ ವಂಚಕರು, ನಿಮ್ಮ ಒಟ್ಟು ಲಾಭಾಂಶ 24,36,435 ಆಗಿದ್ದು, ಈ ಹಣವನ್ನು ವರ್ಗಾಯಿಸಲು ‘ವಿಐಪಿ ಚಾನೆಲ್ ಶುಲ್ಕ’ವಾಗಿ 15% ನೀಡಬೇಕು. ಏಕೆಂದರೆ, ಇದು ಎರಡು ಮಿಲಿಯನ್‌ಗಿಂತ ಹೆಚ್ಚು” ಎಂದು ನಂಬಿಸಿದ್ದಾರೆ. ಹೀಗೆ, ಆನ್‌ಲೈನ್ ಪಾರ್ಟ್-ಟೈಮ್ ಕೆಲಸದ ಹೆಸರಿನಲ್ಲಿ, ವಸ್ತುಗಳನ್ನು ಆರ್ಡರ್ ಮಾಡಿ ಆನ್‌ಲೈನ್‌ನಲ್ಲಿ ಖರೀದಿಸಿ ಮಾರಾಟ ಮಾಡುವ ನೆಪವೊಡ್ಡಿ, ಲಾಭಾಂಶ ಮತ್ತು ಅಸಲು ಹಣವನ್ನು ಹಿಂದಿರುಗಿಸದೆ, ಒಟ್ಟು 14,63,891 ಹಣವನ್ನು ದೋಚಿದ್ದಾರೆ.
ಸೈಬರ್ ವಂಚಕರ ಜಾಲಕ್ಕೆ ಬಿದ್ದ ದೂರುದಾರರು, ತಮ್ಮ ಹಣವನ್ನು ಕಳೆದುಕೊಂಡಿರುವುದು ಗೊತ್ತಾದ ನಂತರ ಪೊಲೀಸರಿಗೆ ದೂರು ನೀಡಿದ್ದು, ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ.