Trading advertisement : ಇನ್ಸ್ಟಾಗ್ರಾಂನಲ್ಲಿ ಬಂದ ಟ್ರೇಡಿಂಗ್ ಜಾಹೀರಾತನ್ನು ನಂಬಿ ಶಿವಮೊಗ್ಗದ ಮಹಿಳೆಯೊಬ್ಬರು ಲಕ್ಷಾಂತರ ರೂಪಾಯಿ ಹಣವನ್ನು ಕಳೆದುಕೊಂಡಿರುವ ಘಟನೆ ನಡೆದಿದೆ
ಜಿಸಿ ನಗರದ ನಿವಾಸಿಯಾಗಿರುವ ಮಹಿಳೆಯೊಬ್ಬರು ತಮ್ಮ ಮೊಬೈಲ್ನಲ್ಲಿ ಇನ್ಸ್ಟಾಗ್ರಾಂ ಬಳಸುತ್ತಿದ್ದಾಗ, ಅಪರಿಚಿತ ಖಾತೆಯೊಂದರಿಂದ ‘ಟ್ರೇಡಿಂಗ್ ಮಾಡಿ ಹಣ ಗಳಿಸಿ’ ಎಂಬ ಜಾಹೀರಾತು ಸಂದೇಶ ಬಂದಿದೆ. ಈ ಜಾಹೀರಾತನ್ನು ಕ್ಲಿಕ್ ಮಾಡಿದಾಗ, ಮಹಿಳೆಯು ಟೆಲಿಗ್ರಾಂನಲ್ಲಿ ಮತ್ತೊಂದು ಅಪರಿಚಿತ ಖಾತೆಗೆ ಸೇರಿಕೊಂಡಿದ್ದಾರೆ. ಆ ಖಾತೆಯಲ್ಲಿದ್ದ ವಂಚಕರು ವಿವಿಧ ನಂಬರ್ಗಳ ಮೂಲಕ ವಾಟ್ಸಾಪ್ನಲ್ಲಿ ಅವರನ್ನು ಸಂಪರ್ಕಿಸಿದ್ದಾರೆ.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭ ಗಳಿಸಿಕೊಡುವುದಾಗಿ ವಂಚಕರು ಮಹಿಳೆಯನ್ನು ನಂಬಿಸಿದ್ದಾರೆ. ಈ ನಂಬಿಕೆಯ ಮೇರೆಗೆ, ವಂಚಕರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಮಹಿಳೆಯು ತಮ್ಮ ಬ್ಯಾಂಕ್ ಖಾತೆಯಿಂದ ಸೆಪ್ಟೆಂಬರ್ 3 ರಿಂದ ಸೆಪ್ಟೆಂಬರ್ 8 ರವರೆಗೆ ವಿವಿಧ ಹಂತಗಳಲ್ಲಿ ಒಟ್ಟು ₹4,86,385 ಹಣವನ್ನು ವರ್ಗಾಯಿಸಿದ್ದಾರೆ. ಹಣ ಪಡೆದ ನಂತರ, ವಂಚಕರು ಯಾವುದೇ ಲಾಭಾಂಶವನ್ನು ನೀಡಿಲ್ಲ ಮತ್ತು ಹೂಡಿಕೆ ಮಾಡಿದ ಅಸಲು ಹಣವನ್ನು ಸಹ ಹಿಂತಿರುಗಿಸದೇ ವಂಚಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ
ತಮಗೆ ವಂಚನೆಯಾಗಿರುವುದನ್ನು ಅರಿತ ಮಹಿಳೆ, ವಂಚಕರನ್ನು ಪತ್ತೆ ಹಚ್ಚಿ ನ್ಯಾಯ ಒದಗಿಸುವಂತೆ ಸಿ.ಇ.ಎನ್. ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

