ಕೈಕೊಟ್ಟ ಯುವತಿ, ಪಾಷಾಣ ತಿಂದ ಯುವಕ | ಊಟದ ಬಿಲ್ ಕೇಳಿದ್ದಕ್ಕೆ ಗೂಸಾ ಕೊಟ್ಟ ಗ್ರಾಹಕ | ಗಬ್ಬ ಕಟ್ಟಿದ್ದ ಹಸು ಕದ್ದ ಕಳ್ಳ
shivamogga today news shorts

SHIVAMOGGA| MALENADUTODAY NEWS | ಮಲೆನಾಡು ಟುಡೆ Mar 12, 2025
ಸುದ್ದಿ 1 : ಗಬ್ಬಕಟ್ಟಿದ್ದ ಹಸು ಕದ್ದೊಯ್ದ ಕಳ್ಳರು | ತೀರ್ಥಹಳ್ಳಿ ಭಾಗದಲ್ಲಿ ದನಗಳ್ಳತನ ವಿಪರೀತವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮಾಳೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕಲ್ಲುಂಡೆ ಗ್ರಾಮದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವನ್ನು ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ. ಬೆಳಗ್ಗೆ ಹಾಲು ಕರೆಯಲು ಮನೆಯ ಮಾಲೀಕರು ಕೊಟ್ಟಿಗೆಗೆ ಹೋದ ಸಂದರ್ಭದಲ್ಲಿ ಮೂರು ದನಗಳ ಪೈಕಿ ಒಂದು ದನ ಇಲ್ಲದಿರುವುದು ಗಮನಕ್ಕೆ ಬಂದಿದೆ. ಅಲ್ಲದೆ ನೆಲದ ಮೇಲೆ ಒಂದಿಷ್ಟು ಬ್ರೆಡ್ ಪೀಸ್‌ಗಳು ಕಾಣಸಿಕ್ಕಿವೆ. ಹಾಗಾಗಿ ಇದು ಕಳ್ಳರದ್ದೆ ಕೆಲಸ ಎಂದು ಗೊತ್ತಾಗಿದೆ. ಘಟನೆಯಲ್ಲಿ ಆರು ತಿಂಗಳು ಗಬ್ಬದ ಹಸು ಕಾಣೆಯಾಗಿದ್ದು, ಹುಡುಕಿಕೊಡುವಂತೆ ಪೊಲೀಸರಿಗೆ ದೂರು ನೀಡಲಾಗಿದೆ.
ಸುದ್ದಿ 2 : ಊಟದ ಬಾಕಿ ಕೇಳಿದ್ದಕ್ಕೆ ಗೂಸ ಕೊಟ್ಟ ಗ್ರಾಹಕ | ಆನವಟ್ಟಿಯ ಸೊರಬ ರಸ್ತೆಯಲ್ಲಿರುವ ರೆಸ್ಟೋರೆಂಟ್‌ವೊಂದರ ಮಾಲೀಕನ ಮೇಲೆ ಗ್ರಾಹಕನೊಬ್ಬ ಊಟದ ಬಾಕಿ ಕೇಳಿದ್ದಕ್ಕೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಈ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಹ ದಾಖಲಾಗಿದೆ. ಘಟನೆಯಲ್ಲಿ ಹೋಟೆಲ್ ಕೆಲಸ ಮುಗಿಸಿ ಊಟಕ್ಕೆ ಕುಳಿತಿದ್ದ ವೇಳೆ ಹೋಟೆಲ್ ಮಾಲೀಕನ ಬಳಿಗೆ ಬಂದ ಗ್ರಾಹಕ, ತನಗೆ ಊಟದ ಬಾಕಿ ಕೇಳ್ತಿಯಾ ಎಂದು ಹಲ್ಲೆ ಮಾಡಿದ್ದಾನೆ. ಅಲ್ಲದೆ ಜೀವ ಬೆದರಿಕೆ ಹಾಕಿದ್ದಾಗಿ ಆರೋಪಿಸಲಾಗಿದೆ.
ಸುದ್ದಿ 3 : ಕೈಕೊಟ್ಟ ಪ್ರೀತಿ, ಪಾಷಾಣ ತಿಂದ ಪ್ರಿಯಕರ | ಶಿವಮೊಗ್ಗ ಗ್ರಾಮಾಂತರ ಸ್ಟೇಷನ್ ವ್ಯಾಪ್ತಿಯಲ್ಲಿ ಯುವಕನೊಬ್ಬ ತನ್ನ ಪ್ರೇಯಸಿ ಪ್ರೀತಿಸಲ್ಲ ಎಂದು ಹೇಳಿದ್ದಕ್ಕೆ ಇಲಿ ಪಾಷಾಣ ತಿಂದು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಈತ ಯುವತಿಯೊಬ್ಬಳನ್ನು ಪ್ರೀತಿಸಿದ್ದ. ಇಬ್ಬರು ಪರಸ್ಪರ ಲವ್‌ನಲ್ಲಿದ್ದರು. ಆದರೆ ಈ ನಡುವೆ ಏನೋ ನಡೆದು, ಯುವತಿ, ಯುವಕನನ್ನು ಪ್ರೀತಿಸುವುದಿಲ್ಲ, ತಾನು ಬೇರೆಯೊಬ್ಬನನ್ನು ಪ್ರೀತಿಸುವುದಾಗಿ ಹೇಳಿದ್ದಾಳೆ. ಇದರಿಂದ ಮನನೊಂದ ಯುವಕ ಕಳೆದ ಫೆಬ್ರವರಿ 28 ರಂದು ಇಲಿಪಾಷಾಣ ಸೇವಿಸಿದ್ದ. ಇದರಿಂದ ಅಸ್ವಸ್ಥಗೊಂಡಿದ್ದ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆನಂತರ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಕಳೆದ ಮಾರ್ಚ್ 8 ರಂದು ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.