ಬಾಪೂಜಿ ನಗರದಲ್ಲಿ ನಡೆದಿದ್ದ ಕೊಲೆ ಕೇಸ್ | 27 ವರ್ಷದ ಆರೋಪಿಗೆ ಜೀವಾವಧಿ ಶಿಕ್ಷೆ
shivamogga court verdict

SHIVAMOGGA| MALENADUTODAY NEWS | ಮಲೆನಾಡು ಟುಡೆ Mar 13, 2025
ಶಿವಮೊಗ್ಗ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಕೊಲೆ ಪ್ರಕರಣವೊಂದರಲ್ಲಿ 27 ವರುಷದ ಆರೋಪಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. 2021 ರಲ್ಲಿ ನಡೆದ ಕೊಲೆ ಕೇಸ್ ಇದಾಗಿದ್ದು, ಇದೀಗ ತೀರ್ಪು ಹೊರಬಿದ್ದಿದೆ. ವಿವರ ಹೀಗಿದೆ.
ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಕೊಲೆ ಮಾಡಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಲ್ಲಿನ ಎ.ಎ ಕಾಲೊನಿ ನಿವಾಸಿ 27 ವರುಷದ ಕೆ.ಅನಿಲ್‌ಕುಮಾರ್ ಎಂಬುವವನಿಗೆ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಿದೆ.
2021ರ ಅಕ್ಟೋಬರ್ 14ರಂದು ಶಿವಮೊಗ್ಗದ ಬಾಪೂಜಿ ನಗರದ ಗಂಗಾಮತ ಹಾಸ್ಟೆಲ್ ಮುಂಭಾಗದ ರಸ್ತೆಯಲ್ಲಿ ಕೊಲೆಯೊಂದು ನಡೆದಿತ್ತು. ಸ್ವಾಮಿ ವಿವೇಕಾನಂದ ಬಡಾವಣೆಯ ನಿವಾಸಿ ಪಿ.ಕೆ.ಸಂತೋಷ್ ಎಂಬವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿತ್ತು. ಅಂದಿನ ಪೊಲೀಸ್ ಇನ್‌ಸ್ಪೆಕ್ಟರ್ ಹಾಗೂ ಕೇಸ್‌ನ ತನಿಖಾಧಿಕಾರಿ ಟಿ.ಕೆ.ಚಂದ್ರಶೇಖರ್ ಆರೋಪಿಯ ವಿರುದ್ಧ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಕೋರ್ಟ್‌ನಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಸುರೇಶ್ ಕುಮಾರ್ ಎ. ಎಂ. ರವರು ವಾದ ಮಂಡಿಸಿದ್ದರು. ವಿಚಾರಣೆ ಮುಗಿಸಿದ ನ್ಯಾಯಾಧೀಶರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಆರೋಪಿ ದಂಡ ಕಟ್ಟಲು ವಿಫಲವಾದಲ್ಲಿ ಹೆಚ್ಚುವರಿಯಾಗಿ ಆರು ತಿಂಗಳು ಸಾದಾ ಕಾರಾಗೃಹ ವಾಸದ ಶಿಕ್ಷೆ ವಿಧಿಸಿ ಆದೇಶಿಸಿದ್ದು, ದಂಡದ ಮೊತ್ತದಲ್ಲಿ ಮೃತನ ತಂದೆಗೆ ₹25 ಸಾವಿರ ನೀಡುವಂತೆ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.