ಮಹಿಳಾ ಅಧಿಕಾರಿಗೆ ಕೊಲೆ ಬೆದರಿಕೆ ! ಕೇಸ್ ಸತ್ತು ಹೋಯ್ತಾ? ಪೊಲೀಸರು ನ್ಯಾಯ ಕೊಡಿಸ್ತಾರಾ? ತನಿಖಾ ವರದಿ ಜೆಪಿ ಬರೆಯುತ್ತಾರೆ
shivamogga bhadravathi case

SHIVAMOGGA | MALENADUTODAY NEWS | ಮಲೆನಾಡು ಟುಡೆ Feb 13, 2025
ಮಹಿಳಾ ಅಧಿಕಾರಿಗೆ ಕೊಲೆ ಬೆದರಿಕೆ ಪ್ರಕರಣ-ಸತ್ಯಾಂಶ ಸತ್ತು ಹೋಗಿದ್ದು ನಿಜಕ್ಕೂ ವಿಪರ್ಯಾಸ, ನ್ಯಾಯ ಕೊಡಿಸುತ್ತದೆಯೇ ಪೊಲೀಸ್ ತನಿಖೆ : ಜೆಪಿ ಬರೆಯುತ್ತಾರೆ
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಜ್ಯೋತಿಯವರಿಗೆ ಅನಾಮಧೆಯ ಕರೆಯ ಮೂಲಕ ಪ್ರಾಣ ಬೆದರಿಕೆ ಹಾಗು ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣ ಸಂಪೂರ್ಣ ಹಳ್ಳಹಿಡಿಯುವ ಸಾಧ್ಯತೆಗಳಿವೆ. ಪ್ರಕರಣದಲ್ಲಿ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಇನ್ನು ಯಾರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯ ಎಂಬುದು ಪ್ರಶ್ನೆ
ರಾಜಕೀಯ ಒತ್ತಡಕ್ಕೆ ನಲುಗಿದ ವ್ಯವಸ್ಥೆ, ಮಹಿಳಾ ಅಧಿಕಾರಿಯ ನೈತಿಕ ಸ್ಥೈರ್ಯವನ್ನೇ ಕುಂದುವಂತೆ ಮಾಡಿದೆ. ಭದ್ರಾವತಿಯ ಗ್ರಾಮಾಂತರ ಭಾಗಗಳಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆಯಾಗುತ್ತಿದೆ. ದಂಧೆಕೋರರು ಹಗಲು ರಾತ್ರಿ ಎನ್ನದೆ ಭದ್ರಾ ನದಿಯ ಒಡಲನ್ನೇ ಬಗೆಯುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನಲೆಯಲ್ಲಿ ಮಹಿಳಾ ಗಣಿ ಅಧಿಕಾರಿಗಳಾದ ಜ್ಯೋತಿ ಮತ್ತು ಪ್ರೀಯ ರಾತ್ರಿ ವೇಳೆ ದಾಳಿ ಮಾಡುವ ದಿಟ್ಟತನ ತೋರಿದ್ದಾರೆ.
ಇಲ್ಲಿ ಜಿಲ್ಲಾ ಗಣಿ ಅಧಿಕಾರಿಯಾಗಿರುವ ಪಿ.ಕೆ ನಾಯಕ್ ಮಹಿಳಾ ಅಧಿಕಾರಿಗಳನ್ನು ರಾತ್ರಿ ವೇಳೆ ಕಳಿಸುವಾಗ ಸಮಯ ಪ್ರಜ್ಞೆ ಮೆರೆಯಬೇಕಿತ್ತು. ಮಹಿಳಾ ಅಧಿಕಾರಿಯನ್ನು ರಾತ್ರಿ ವೇಳೆ ನಿರ್ಜನ ಪ್ರದೇಶಕ್ಕೆ ಕಳಿಸಿದ್ರೆ. ಅಲ್ಲಿ ಎದುರಾಗುವ ಪರಿಣಾಮದ ಸಾಧ್ಯತೆಯ ಅರಿವು ಅವರಿಗಬೇಕಿತ್ತು.
ಇನ್ನು ದಾಳಿ ಸಂದರ್ಭದಲ್ಲಿ ಪೊಲೀಸ್ ಸಹಕಾರ ಪಡೆಯಬೇಕಿತ್ತು ಎಂಬ ವಾದವಿದೆ. ಆದರೆ ಇಂತಹ ರೇಡ್ ಸಂದರ್ಭದಲ್ಲಿ ಮಾಹಿತಿ ಸೋರಿಕೆಯಾದರೆ, ರೇಡ್ ಅರ್ಥ ಕಳೆದುಕೊಳ್ಳುತ್ತದೆ. ಕೆಲವು ಸಂದರ್ಭದಲ್ಲಿ ಭದ್ರತೆಗಾಗಿ ಬಂದಂತಹ ಕೆಲವು ಪೊಲೀಸ್ ಸಿಬ್ಬಂದಿಯೇ ಮಾಹಿತಿ ಲೀಕ್ ಮಾಡಿದ್ದಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ಅಧಿಕಾರಿಗಳು ಪೊಲೀಸರ ಸಹಕಾರ ಪಡೆದಿರಲಿಲ್ಲ ಎನ್ನಲಾಗ್ತಿದೆ.
ಜ್ಯೋತಿ ಮತ್ತು ಪ್ರಿಯಾ ಭಯಭೀತವಾದಂತಹ ಸ್ಥಳಗಳಿಗೂ ರಾತ್ರಿ ವೇಳೆ ನುಗ್ಗಿ ದಾಳಿ ಮಾಡಿ ದಿಟ್ಟತನ ತೋರಿದ ಹಲವು ಉದಾಹರಣೆಯಿದೆ. ಅಂದು ಸಹ ಅವರುಗಳು ದೈರ್ಯದಿಂದಲೇ ಸ್ಥಳಕ್ಕೆ ಹೋಗಿದ್ದರು. ಅಲ್ಲಿ ಆಗಿದ್ದು ಮಾತ್ರ ಬೇರೆ.
ಭದ್ರಾವತಿಯ ಅಕ್ರಮ ಮರಳು ದಂಧೆ ರಾಜಾಶ್ರಯದಲ್ಲಿಯೇ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇನ್ನು ದಾಳಿ ಮಾಡಿದ್ರೆ ಅದರ ಪರಿಣಾಮ ಏನು ಎಂಬುದು ಹೇಳಬೇಕಿಲ್ಲ. ಸಹಜವಾಗಿಯೇ ಜ್ಯೋತಿ ಅಕ್ರಮ ದಂಧೆಗೆ ಅಡ್ಡಬಂದಾಗ ದಂಧೆಕೋರರು ಅನಾಮಧೆಯ ವ್ಯಕ್ತಿಗೆ ಕರೆ ಮಾಡಿ ಲೌಡ್ ಸ್ಪೀಕರ್ ಇಟ್ಟು, ಮೇಡಂ ಫೋನ್ ತಗೊಳ್ಳಿ ಮಾತನಾಡಿ ಎಂದು ಜೋರುಧ್ವನಿಯಲ್ಲಿ ಹೇಳುತ್ತಾರೆ. ಅಲ್ಲದೆ ತಮ್ಮ ಕುಕೃತ್ಯದ ವಿಡಿಯೋ ಮಾಡಬಾರದು ಎನ್ನುತ್ತಾರೆ. ಈ ನಡುವೆ ಜ್ಯೋತಿಯವರು ಪೋನ್ ತೆಗೆದುಕೊಳ್ಳೋದಿಲ್ಲ. ನನ್ನ ಫೋನ್‌ಗೆ ಕರೆ ಮಾಡೋದಕ್ಕೆ ಹೇಳಿ ಎಂದಾಗ ದಂಧೆಕೋರ, ಅಣ್ಣಾ ಅವರು ತೆಗೆದುಕೊಳ್ಳುವುದಿಲ್ಲವಂತೆ ಲೌಡ್ ಸ್ಪೀಕರ್ ಆನ್ ಮಾಡಿದ್ದೇನೆ. ಮಾತಾಡ್ರಣ ಎಂದಾಗ, ಅನಾಮಧೇಯ ವ್ಯಕ್ತಿ, ಸೊಂಟದ ಕೆಳಗಿನ ಭಾಷೆ ಬಳಸಿ ಅವಾಚ್ಯವಾಗಿ ನಿಂದಿಸಿದ್ದಾನೆ.ಲಾರಿ ಹರಿಸಿ ಕೊಲೆ ಮಾಡುವ ಬೆದರಿಕೆ ಒಡ್ಡಿದ್ದಾನೆ. ಇದು ಜ್ಯೋತಿಯವರಿಗೆ ಆತಂಕ ಆಘಾತವನ್ನುಂಟು ಮಾಡಿದೆ.
ಯಾರು ಆ ಅನಾಮಧೆಯ ವ್ಯಕ್ತಿ
ಜ್ಯೋತಿಯವರು ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಅನಾಮಧೆಯ ವ್ಯಕ್ತಿಯೊರ್ವರು ಕರೆ ಮಾಡಿ, ಬೈದು ಕೊಲೆ ಬೆದರಿಕೆ ಹಾಕಿದ್ದಾರೆ. ಅವರನ್ನು ಗುರುತಿಸಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಇದು ಪೊಲೀಸರ ಹೆಗಲ ಮೇಲೆ ಬಂದೂಕು ಇಟ್ಟಂತಾಗಿದೆ. ಜ್ಯೋತಿಯವರು ಅಕ್ರಮ ಮರಳು ಗಣಿಗಾರಿಕೆ ಸ್ಥಳಕ್ಕೆ ಹೋದಾಗ ಅಲ್ಲಿ ಅಡ್ಡಿಪಡಿಸಿದ ದಂಧೆಕೋರನಿಗೆ, ಆತ ಯಾರಿಗೆ ಫೋನ್ ಮಾಡಿದ್ದ ಎಂಬುದು ಗೊತ್ತಿದೆ. ಆತ ಸತ್ಯ ಹೇಳದಿದ್ದರೂ ಆತನ ಮೊಬೈಲ್‌ನ ಸಿಡಿಆರ್ ದಾಖಲೆ ಸತ್ಯವನ್ನೆ ನುಡಿಯುತ್ತದೆ.
ದಂಧೆಕೋರನಿಗೆ ಪೊಲೀಸ್ ಭಾಷೆಯಲ್ಲಿ ಕೇಳಿದ್ರೆ .ಆತನೂ ಸಹ ಯಾರಿಗೆ ಫೋನ್ ಮಾಡಿಕೊಟ್ಟು, ಜ್ಯೋತಿಯವರಿಗೆ ಧಮ್ಕಿ ಹಾಕಿಸಿದ ಅನ್ನೋದು ತಿಳಿಸುತ್ತಾನೆ. ಇನ್ನೂ ಫೋನ್ ಧ್ವನಿಯನ್ನು ಎಫ್.ಎಸ್.ಎಲ್ ಗೆ ಕಳುಹಿಸಿದ್ರೆ, ಫೋನ್ ಮಾಡಿದ ವ್ಯಕ್ತಿಯ ಧ್ವನಿ ಹಾಗು ಫೋನ್ ಕೊಟ್ಟ ವ್ಯಕ್ತಿಯ ಹೇಳಿಕೆಯ ಧ್ವನಿಯನ್ನು ಪರೀಕ್ಷೆಗೊಳಪಡಿಸಿದರೆ, ಅ ಅನಾಮಧೆಯ ವ್ಯಕ್ತಿಯ ಮನೆ ಬಾಗಿಲಿಗೆ ಪೊಲೀಸ್ ಜೀಪು ಹೋಗಿ ನಿಲ್ಲುತ್ತೆ.
ಆದರೆ ಭದ್ರಾವತಿ ಪೊಲೀಸರು ಈ ಆಯಾಮದಲ್ಲಿ ತನಿಖೆ ಮಾಡುತ್ತಾರಾ ಎಂಬುದು ಪ್ರಶ್ನೆಯಾಗಿದೆ. ಕೇವಲ ಮರಳು ಗಣಿಗಾರಿಕೆಯನ್ನು ಮಾಡುತ್ತಿದ್ದ ಮೂವರು ವ್ಯಕ್ತಿಗಳನ್ನು ಬಂಧಿಸಿ ಜೈಲಿಗಟ್ಟಿ ಮೌನವಾದ್ರೆ, ಸಂತ್ರಸ್ಥ ಮಹಿಳಾ ಅಧಿಕಾರಿಗೆ ನ್ಯಾಯ ಕೊಡುವವರು ಯಾರು ಎಂಬುದು ವ್ಯವಸ್ಥೆಯ ದೌರ್ಬಲ್ಯದ ಸವಾಲಾಗಲಿದೆ.
ಒಟ್ಟಾರೆ, ನಿಜವಾಗ್ಲೂ ಫೋನ್ ಮಾಡಿವರು ಯಾರು ಎಂಬುದು ತನಿಖೆಯಾಗಬೇಕು. ಇದಕ್ಕಾಗಿ ಮಹಿಳಾ ಸಂಘಟನೆಗಳು ವಿವಿಧ ಸಂಘ ಸಂಸ್ಥೆಗಳು ಹೋರಾಟಗಾರರು ಧ್ವನಿಗೂಡಿಸುತ್ತಿದ್ದು, ಈ ಧ್ವನಿ ಇನ್ನಷ್ಟು ಗಟ್ಟಿಯಾಗಬೇಕಿದೆ. ಭದ್ರಾವತಿಯಲ್ಲಿ ಸರ್ಕಾರಿ ನೌಕರಿಯನ್ನ ಮಾಡುವಂತ ಸ್ಥಿತಿಯಲ್ಲಿ ಅಧಿಕಾರಿಗಳಿಲ್ಲ. ಪ್ರತಿಭಟಿಸಿದ ಅಧಿಕಾರಿಗಳನ್ನು ಶಿಕ್ಷಿಸುವ, ವರದಿ ಪ್ರಕಟಿಸುವ ಮಾಧ್ಯಮಗಳ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿರುವುದು ಸತ್ಯವನ್ನು ಸಾಯಿಸುವ ಪ್ರಯತ್ನವಲ್ಲದೆ ಮತ್ತೇನು ಅಲ್ಲ...
SUMMARY | shivamogga bhadravathi case
KEY WORDS | shivamogga bhadravathi case